ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಬಗ್ಗೆ ಕಾಂಗ್ರೆಸ್‌ನಿಂದ ಅವಾಂತರ ಸೃಷ್ಟಿ: ಜಿ.ಟಿ.ದೇವೇಗೌಡ

ಯಾವುದೇ ಕಾರಣಕ್ಕು ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಆಗುವುದಕ್ಕೆ ಬಿಡಬಾರದು ಎಂಬುವ ಉದ್ದೇಶದಿಂದಲೇ ಅವಾಂತರಗಳನ್ನು ರಾಜ್ಯದಲ್ಲಿ ಮಾಡುತ್ತಿದ್ದಾರೆ. ಆದರೆ, ಇಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ, ಅದನ್ನು ಬಿಟ್ಟು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಕೆಲಸ ಇನ್ನಾದರೂ ನಿಲ್ಲಬೇಕು ಎಂದು ಆಗ್ರಹಿಸಿದ ಶಾಸಕ ಜಿ.ಟಿ.ದೇವೇಗೌಡ 

Controversy Created by Congress over BJP JDS Alliance Says MLA GT Devegowda grg

ಮಂಡ್ಯ(ಮೇ.26):  ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಆಗಬಾರದು ಎನ್ನುವ ಉದ್ದೇಶದಿಂದಲೇ ಕಾಂಗ್ರೆಸ್ ರಾಜ್ಯದಲ್ಲಿ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನಿರ್ಣಾಮ ಆಗಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಭವಿಷ್ಯ ನುಡಿದರು.

ವಿದ್ಯಾನಗರದಲ್ಲಿ ನೂತನವಾಗಿ ತೆರೆದಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಟ್ಟಿಗೆ ಕುಳಿತು ವೇದಿಕೆ ಹಂಚಿಕೊಂಡಾಗಲೇ ಕಾಂಗ್ರೆಸ್‌ನವರಿಗೆ ಹೊಟ್ಟೆಕಿಚ್ಚು ಹುಟ್ಟಿಕೊಂಡಿತು ಎಂದರು.

ಎನ್‌ಡಿಎ ಅಭ್ಯರ್ಥಿ ಸೋಲಿಸಲು ಕಾಂಗ್ರೆಸ್‌ ಕುತಂತ್ರ: ವಿಜಯೇಂದ್ರ

ಯಾವುದೇ ಕಾರಣಕ್ಕು ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಆಗುವುದಕ್ಕೆ ಬಿಡಬಾರದು ಎಂಬುವ ಉದ್ದೇಶದಿಂದಲೇ ಅವಾಂತರಗಳನ್ನು ರಾಜ್ಯದಲ್ಲಿ ಮಾಡುತ್ತಿದ್ದಾರೆ. ಆದರೆ, ಇಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ, ಅದನ್ನು ಬಿಟ್ಟು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಕೆಲಸ ಇನ್ನಾದರೂ ನಿಲ್ಲಬೇಕು ಎಂದು ಆಗ್ರಹಿಸಿದರು.

ಪ್ರಸ್ತುತದಲ್ಲಿ ಶಿಕ್ಷಣ ಕ್ಷೇತ್ರವು ಗಣನೀಯವಾಗಿ ಕುಸಿದಿದೆ. ಭಾರತದ ಭವಿಷ್ಯ ಚಿತ್ರಣವನ್ನು ನೋಡಿದ್ದೇವೆ. ಆದರೆ, ಕರ್ನಾಟಕದ ಚಿತ್ರಣವನ್ನು ನೋಡುತ್ತಿದ್ದೇವೆ. ಏಕೆಂದರೆ 5 ಗ್ಯಾರಂಟಿಯನ್ನು ಕೊಟ್ಟ ಕಾಂಗ್ರೆಸ್ ಸರ್ಕಾರವು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಏನಾಗಿದೆ ಎಂಬುದನ್ನು ನೋಡುತ್ತಿದ್ದೀರಾ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಹಳಷ್ಟು ಒತ್ತು ನೀಡಿ ಕ್ರಾಂತಿಯನ್ನೇ ಮಾಡಿದ್ದರು. ಅದರಂತೆ ಯಡಿಯೂರಪ್ಪ ಕೂಡ ಶಿಕ್ಷಣ ಕ್ಷೇತ್ರಕ್ಕೆ ಶ್ರಮಿಸಿದ್ದಾರೆ. ನಾನು ಸಹ ಮಂತ್ರಿಯಾಗಿದ್ದಾಗ ಶಾಲೆಗಳಲ್ಲಿ ಲೈಬ್ರರಿ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಿರುವ ಉದಾಹರಣೆಗಳು ಸಿಗುತ್ತವೆ. ನನ್ನ ಅವಧಿಯಲ್ಲಿ ಯಾರನ್ನೂ ವರ್ಗಾವಣೆ ಮಾಡಲು ಮತ್ತು ಅಮಾನತು ಮಾಡಲು ಬಿಡಲಿಲ್ಲ ಎಂದು ವಿವರಿಸಿದರು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿರುವ ಕೆ.ವಿವೇಕಾನಂದ ಅವರಿಗೆ ಶಿಕ್ಷಕರು ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕು. ಅವರು ಒಂದು ಗುರಿಯನ್ನಿಟ್ಟುಕೊಂಡಿದ್ದಾರೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಏಕೆಂದರೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರು ಇದ್ದರೆ ಯಾರೂ ಸಹ ಯೋಚನೆ ಮಾಡಬೇಡಿ, ನಿಮ್ಮ ಕ್ಷೇತ್ರವು ಅಭಿವೃದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರಿಷತ್‌ ಚುನಾವಣೆ 2024: ಇಂದು ಬಿಜೆಪಿ-ಜೆಡಿಎಸ್‌ ಮೈತ್ರಿ ಸಮನ್ವಯ ಸಭೆ

ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಮಾತನಾಡಿ, ಕಳೆದ 20 ವರ್ಷಗಳಿಂದ ಸತತವಾಗಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿದ್ದೇನೆ ಎಂದರು.

ಬಿಜೆಪಿ ಮೈತ್ರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿರುವ ನಾನು ಶಿಕ್ಷಕರ ಕ್ಷೇತ್ರಕ್ಕೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಶಿಕ್ಷಕರು ಮೊದಲ ಪ್ರಾಶಸ್ತ್ಯ ಮತ ನೀಡುವ ಮೂಲಕ ಒಂದೇ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ, ಬಿಜೆಪಿ ಮತ್ತು ಜೆಡಿಎಸ್ ಮುಖಂಡರಾದ ಬಿ.ಆ.ರಾಮಚಂದ್ರು, ಶಿವಮೂರ್ತಿ ಕೀಲಾರ, ಪೀಹಳ್ಳಿ ರಮೇಶ್, ನಾಗರಾಜು, ನಾಗೇಂದ್ರ, ರಾಜು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios