Asianet Suvarna News Asianet Suvarna News

ಸಂವಿಧಾನ ಎಲ್ಲರಿಗೂ ಮೂಲಭೂತ ಹಕ್ಕು ನೀಡಿದೆ: ಸಚಿವ ಕೆ.ವೆಂಕಟೇಶ್

ಆಕ್ಸಿಜನ್ ದುರಂತ ಸಂತ್ರಸ್ತರ ಕುಟುಂಬಕ್ಕೆ ಫೆ. 1ರಿಂದ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ಕೊಡಲಾಗುವುದು, ಮುಂದಿನ ದಿನಗಳಲ್ಲಿ ಖಾಯಂ‌ ನೌಕರಿ ಮತ್ತು ಪರಿಹಾರವನ್ನು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು. 
 

Constitution has given fundamental rights to all Says Minister K Venkatesh gvd
Author
First Published Jan 27, 2024, 8:25 PM IST | Last Updated Jan 27, 2024, 8:25 PM IST

ಚಾಮರಾಜನಗರ (ಜ.27): ಆಕ್ಸಿಜನ್ ದುರಂತ ಸಂತ್ರಸ್ತರ ಕುಟುಂಬಕ್ಕೆ ಫೆ. 1ರಿಂದ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ಕೊಡಲಾಗುವುದು, ಮುಂದಿನ ದಿನಗಳಲ್ಲಿ ಖಾಯಂ‌ ನೌಕರಿ ಮತ್ತು ಪರಿಹಾರವನ್ನು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ೭೫ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಆಕ್ಸಿಜನ್ ದುರಂತ ಸಂತ್ರಸ್ತರ ಕುಟುಂಬಕ್ಕೆ ತಾತ್ಕಾಲಿಕವಾಗಿ ಅವರ ಬದುಕಿಗೆ ಆಧಾರವಾಗಲೆಂದು 32 ಕುಟುಂಬಗಳ ತಲಾ ಒಬ್ಬರಿಗೆ ಈ ನೌಕರಿ ನೀಡಲಾಗುತ್ತದೆ ಎಂದು ಹೇಳಿದರು.

ಗಣರಾಜ್ಯೋತ್ಸವದ ಸಂದೇಶಗಳನ್ನು ತಿಳಿಸಿದ ಅವರು ಪ್ರತಿಯೊಬ್ಬರು ರಾಷ್ಟ್ರ ಹಾಗೂ ರಾಜ್ಯದ ಪ್ರಗತಿಗೆ ಕಟಿಬದ್ಧರಾಗೋಣ. ಗಣತಂತ್ರ ವ್ಯವಸ್ಥೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಜನರ ಸಹಭಾಗಿತ್ವ, ಸಹಕಾರವಿಲ್ಲದೆ ಅರ್ಥಪೂರ್ಣವಾಗಲಾರವು. ಸಂಕುಚಿತ ಭಾವನೆ, ಪ್ರಾದೇಶಿಕ ಅಸಮಾನತೆಗಳನ್ನು ಬದಿಗೊತ್ತಿ ಬಡತನ, ಅನಕ್ಷರತೆ, ನಿರುದ್ಯೋಗ ನಿರ್ಮೂಲನೆಗೊಳಿಸಲು ಶ್ರಮಿಸಬೇಕು ಎಂದರು.

ಅಚ್ಚುಕಟ್ಟು ರೈತರಿಗೆ ಅನ್ಯಾಯವಾಗಲು ಬಿಡಲ್ಲ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ

ದೇಶವು ಸಂವಿಧಾನವನ್ನು ಅಳವಡಿಸಿಕೊಂಡ ಉದ್ದೇಶ ಪ್ರತಿಯೊಬ್ಬ ನಾಗರಿಕರಿಗೂ ಮುಲಭೂತ ಹಕ್ಕುಗಳಾದ ಶಿಕ್ಷಣ, ಸಮಾನತೆ, ಸ್ವಾತಂತ್ರ್ಯ, ಇತರೆ ಹಕ್ಕುಗಳನ್ನು ನೀಡುವುದೇ ಆಗಿದೆ. ಭಾರತದ ಸಂವಿಧಾನ ರಚನೆಗೆ ಡಾ. ಬಿ.ಆರ್. ಅಂಬೇಡ್ಕರ್ ಕೊಡುಗೆ ಸ್ಮರಣೀಯವಾಗಿದೆ. ಸಂವಿಧಾನ ರಚನಾ ಕಾರ್ಯವನ್ನು ಹೆಚ್ಚು ಶ್ರದ್ಧೆ, ಉತ್ಸುಕತೆಯಿಂದ ನಿರ್ವಹಿಸಿ ಅವಿರತವಾಗಿ ಶ್ರಮಿಸಿದ್ದರಿಂದ ಇಂದು ನಮ್ಮ ಸಂವಿಧಾನವು ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ ಎಂದರು.

ಸಂವಿಧಾನದ 75ನೇ ವರ್ಷದ ಆಚರಣೆಯ ಸುಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು ಮತ್ತು ಧ್ಯೇಯೋದ್ದೇಶಗಳನ್ನು ಜನರಿಗೆ ತಿಳಿಸುವ ಮೂಲಕ ಭಾರತ ದೇಶದಲ್ಲಿಯೇ ಒಂದು ಮಾದರಿಯಾಗಿ ನಮ್ಮ ಕರ್ನಾಟಕ ಸರ್ಕಾರವು ಸಂವಿಧಾನ ದಿನಾಚರಣೆ ಪ್ರಯುಕ್ತ ಜನವರಿ ಹಾಗೂ ಫೆಬ್ರವರಿ ಮಾಹೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಸಂವಿಧಾನ ಜಾಗೃತಿ ಜಾಥಾ ವಾಹನವು ಜಿಲ್ಲೆಯ ೧೩೦ ಗ್ರಾಪಂಗಳಿಗೂ ತೆರಳುತ್ತಿದ್ದು, ಗ್ರಾಪಂ ಕೇಂದ್ರಗಳಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಸಂವಿಧಾನ ಜಾಗೃತಿ ಜಾಥಾ ರಾಷ್ಟ್ರೀಯ ಸಮಾವೇಶವನ್ನು ಫೆಬ್ರವರಿ ೨೫ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಿಂದಲೂ ಸಂವಿಧಾನ ಜಾಗೃತಿ ವಾಹನವು ಬೆಂಗಳೂರಿನ ಸಮಾವೇಶಕ್ಕೆ ಕಳುಹಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ೨೯೭ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು, ಸರ್ಕಾರಿ ವೈದ್ಯಕೀಯ ಕಾಲೇಜು, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ, ಕೈಗಾರಿಕೆಗಳ ಉತ್ತೇಜನಕ್ಕಾಗಿ ಬದನಗುಪ್ಪೆ-ಕೆಲ್ಲಂಬಲ್ಳಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಹಲವು ದೊಡ್ಡ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್ ತಿಳಿಸಿದರು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಶಾಸಕ ಸಿ. ಪುಟ್ಟರಂಗಶೆಟ್ಟಿ, ಹಿರಿಯ ಅಧಿಕಾರಿಗಳು, ಗಣ್ಯರು ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಜಿಲ್ಲಾ ಸತ್ರ ಪೊಲೀಸ್ ಪಡೆ, ಜಿಲ್ಲಾ ಬ್ಯಾಂಡ್ ವೃಂದ, ಸಿವಿಲ್ ಪೊಲೀಸ್ ತುಕಡಿ, ಅರಣ್ಯ ರಕ್ಷಕರ ದಳ, ಗೃಹರಕ್ಷಕ ದಳ, ಅಬಕಾರಿ, ಸಿಮ್ಸ್ ಎನ್‌ಸಿಸಿ ತಂಡ, ಬಂಜಾರ ಇಂಡಿಯನ್, ಸಂತ ಜೋಸೆಫ್, ಸಂತ ತೆರೆಸಾ, ಎಂ.ಸಿ.ಎಸ್. ಮಹಿಳಾ ಶಾಲೆ, ಸೇವಾಭಾರತಿ, ಜೆಎಸ್ಎಸ್‌ ಬಾಲಕರ ಪ್ರೌಢಶಾಲೆ, ಅದರ್ಶ ವಿದ್ಯಾಲಯ, ಸಕಾರಿ ಜೂನಿಯರ್ ಕಾಲೇಜು ಸೇರಿದಂತೆ ಒಟ್ಟು ೧೮ ತಂಡಗಳು ನಡೆಸಿದ ಪಥಸಂಚಲನ ಆಕರ್ಷಕವಾಗಿ ಮೂಡಿಬಂತು.

ಸಂತ ಜೋಸೆಫರ ಪ್ರೌಢಶಾಲೆ, ಆದರ್ಶ ವಿದ್ಯಾಲಯ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಜೆಎಸ್ಎಸ್ ಬಾಲಕಿಯರ ಶಾಲೆ, ಬಂಜಾರ ಇಂಡಿಯನ್ ಶಾಲೆ, ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಅಮಚವಾಡಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರ ವಿದ್ಯಾರ್ಥಿಗಳು ಬ್ಯಾಂಡ್ ಪ್ರದರ್ಶನ ವಿಶೇಷ ಗಮನ ಸೆಳೆಯಿತು.

ಭಾರತವನ್ನು ವಿಶ್ವದ ಶ್ರೇಷ್ಠ ರಾಷ್ಟ್ರವಾಗಿಸಬೇಕು: ಸಹಕಾರ ಸಚಿವ ರಾಜಣ್ಣ

ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು, ಅದರಲ್ಲೂ ವಿಶೇಷಚೇತನ ಕ್ರೀಡಾಪಟುಗಳು, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಯದಲ್ಲಿ ಉತ್ತಮ ಸಾಧನೆಗೈದ ಪ್ರಾಥಮಿಕ ಆರೋಗ್ಯ ಕೇಂದ್ರ, ರಾಜ್ಯಮಟ್ಟದ ಸಾವಯವ ಹಾಗೂ ಸಿರಿಧಾನ್ಯ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಗೌರವಿಸಿ ಸನ್ಮಾನಿಸಲಾಯಿತು.

Latest Videos
Follow Us:
Download App:
  • android
  • ios