ಅಚ್ಚುಕಟ್ಟು ರೈತರಿಗೆ ಅನ್ಯಾಯವಾಗಲು ಬಿಡಲ್ಲ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
ಭದ್ರಾ ನೀರಾವರಿ ಸಲಹಾ ಸಮಿತಿಯ ಅವೈಜ್ಞಾನಿಕ ವೇಳಾಪಟ್ಟಿ ಪ್ರಕಾರ ಜ.26ಕ್ಕೆ ನಾಲೆಗಳಲ್ಲಿ ನೀರು ಹರಿಸುವ 13 ಮುಗಿದಿದ್ದು, ಯಾವುದೇ ಕಾರಣಕ್ಕೂ ನೀರು ನಿಲ್ಲಿಸದೇ 20 ದಿನದ ಲೆಕ್ಕಾಚಾರದಲ್ಲಿ ನೀರು ಮುಂದುವರಿಸುವುದೂ ಸೇರಿ ಅಚ್ಚುಕಚ್ಚು ರೈತರ ಹಿತ ಕಾಯಲು ರೈತರ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರಿಗೆ ಮನವಿ ಅರ್ಪಿಸಲಾಯಿತು.
ದಾವಣಗೆರೆ (ಜ.27): ಭದ್ರಾ ನೀರಾವರಿ ಸಲಹಾ ಸಮಿತಿಯ ಅವೈಜ್ಞಾನಿಕ ವೇಳಾಪಟ್ಟಿ ಪ್ರಕಾರ ಜ.26ಕ್ಕೆ ನಾಲೆಗಳಲ್ಲಿ ನೀರು ಹರಿಸುವ 13 ಮುಗಿದಿದ್ದು, ಯಾವುದೇ ಕಾರಣಕ್ಕೂ ನೀರು ನಿಲ್ಲಿಸದೇ 20 ದಿನದ ಲೆಕ್ಕಾಚಾರದಲ್ಲಿ ನೀರು ಮುಂದುವರಿಸುವುದೂ ಸೇರಿ ಅಚ್ಚುಕಚ್ಚು ರೈತರ ಹಿತ ಕಾಯಲು ರೈತರ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರಿಗೆ ಮನವಿ ಅರ್ಪಿಸಲಾಯಿತು.
ನಗರದ ನೀರಾವರಿ ಇಲಾಖೆ ಕಚೇರಿ ಬಳಿ ರೈತ ಒಕ್ಕೂಟದ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು, ಅಚ್ಚುಕಟ್ಟು ರೈತರು ಅಲ್ಲಿ ನೀರಾವರಿ ನಿಗಮದ ಇಇಗೆ ಸಮರ್ಪಕ ನೀರೊದಗಿಸಲು ಒತ್ತಾಯಿಸಿದರು. ನಂತರ ಜೆಜೆಎಂ ವೈದ್ಯಕೀಯ ಕಾಲೇಜಿನ ಸಭಾಂಗಣದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರನ್ನು ಭೇಟಿ ಮಾಡಿ, ಮನವಿ ಅರ್ಪಿಸಿದರು.
ಭಾರತವನ್ನು ವಿಶ್ವದ ಶ್ರೇಷ್ಠ ರಾಷ್ಟ್ರವಾಗಿಸಬೇಕು: ಸಹಕಾರ ಸಚಿವ ರಾಜಣ್ಣ
ಈ ವೇಳೆ ಮಾತನಾಡಿದ ರೈತ ಮುಖಂಡರು, ಕಾಡಾ ಸಮಿತಿಯ ಅವೈಜ್ಞಾನಿಕ ವೇಳಾಪಟ್ಟಿ ಪ್ರಕಾರ ಜ.26ಕ್ಕೆ ನಾಲೆಗಳಲ್ಲಿ ನೀರು ಹರಿಸುವ 12 ದಿನ ಮುಕ್ತಾಯವಾಗುತ್ತದೆ. ಆದರೆ ಇಂದಿಗೂ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪಿಲ್ಲ. ಜಿಲ್ಲೆಯ ಕಡೆಗೆ ನೀರು ಬರುವ ಮುಖ್ಯ ನಾಲೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಹರಿಸುತ್ತಿಲ್ಲ. ಮುಖ್ಯ ನಾಲೆಯಲ್ಲಿ 11 ಅಡಿ ನೀರು ಹರಿಯಬೇಕು. ಆದರೆ, ಕೇವಲ 8 ಅಡಿ ಮಾತ್ರ ನೀರು ಬರುತ್ತಿದೆ. ನೀರಾವರಿ ನಿಗಮದ ಅಧಿಕಾರಿಗಳು ಕೊನೆ ಭಾಗಕ್ಕೆ ನೀರು ತಲುಪಿಸಲು ವಿಫಲರಾಗಿದ್ದಾರೆ. ಇದರಿಂದ ಜಿಲ್ಲೆಯ ದಾವಣಗೆರೆ, ಮಲೆಬೆನ್ನೂರು ವಿಭಾಗಗಳ ವ್ಯಾಪ್ತಿಯ ಅಚ್ಚುಕಟ್ಟು ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಕೊನೆಯ ಭಾಗಕ್ಕೆ ನೀರು ತಿಂಗಳಿಗೆ ಒಮ್ಮೆಯಾದರೂ ತಲುಪದಿದ್ದರೆ ಅಂತರ್ಜಲ ಮಟ್ಟ ಕುಸಿದು, ಕೊಳವೆ ಬಾವಿಗಳಲ್ಲೂ ನೀರು ಇಲ್ಲದಂತಾಗುತ್ತದೆ. ಇದರಿಂದ ಜಿಲ್ಲೆಯ ರೈತರಿಗೆ ಘನಘೋರ ಅನ್ಯಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಏರ್ಪಡಬಹುದು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ 12 ದಿನ ನೀರು ಹರಿಸುವ ಅವೈಜ್ಞಾನಿಕ ವೇಳಾಪಟ್ಟಿ ಬದಲು 20 ದಿನ ನೀರು ಹರಿಸಿ, 20 ದಿನ ನೀರು ನಿಲ್ಲಿಸುವ ವೇಳಾಪಟ್ಟಿ ಪ್ರಕಟಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಮರ್ಪಕವಾಗಿ ನೀರು ಹರಿಸಲು ಕ್ರಮ: ರೈತರ ಅಹವಾಲು ಆಲಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಭದ್ರಾ ನಾಲೆಗಳಿಗೆ ನೀರು ಹರಿಸುವುದನ್ನು ಮುಂದುವರಿಸಲು ಮತ್ತು ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೂ ಸಮರ್ಪಕವಾಗಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಡಳಿತ, ನೀರಾವರಿ ಇಲಾಖೆ, ನೀರಾವರಿ ನಿಗಮ, ಬೆಸ್ಕಾಂ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ದಾವಣಗೆರೆ ಜಿಲ್ಲೆಯ ರೈತರಿಗೆ ಅನ್ಯಾಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ಹರೀಶ್ ನೀತಿಪಾಠದ ಅಗತ್ಯ ನನಗಿಲ್ಲ: ಎಂ.ಪಿ.ರೇಣುಕಾಚಾರ್ಯ ಟಾಂಗ್
ರೈತ ಮುಖಂಡರಾದ ಗೋಣಿವಾಡ ಎನ್.ಎಂ.ಮಂಜುನಾಥ, ಪಿ.ಎ.ನಾಗರಾಜಪ್ಪ, ಎಸ್.ಕೆ.ನಾಗರಾಜಪ್ಪ, ಕುಕ್ಕುವಾಡದ ದಿನೇಶ, ಡಿ.ಬಿ.ಶಂಕರ, ಶಿವಕುಮಾರ, ಹೂವಿನಮಡು ಶಶಿ, ಒಬಳೇಶ, ರವಿ, ಶ್ಯಾಗಲೆ ಕ್ಯಾಂಪ್ ಬೋಗೇಶ್ವರರಾವ್, ಸಿ.ಹೆಚ್.ಸತೀಶ, ಕೊಳೇನಹಳ್ಳಿ ಜೆ.ಅಂಜಿನಪ್ಪ, ಬಿ.ಆರ್.ಶಿವು, ಶ್ಯಾಗಲೆ ಮಂಜುನಾಥ ಇತರರಿದ್ದರು.