ಕಾಂಗ್ರೆಸ್‌ನ ಚುನಾವಣಾ ಚಾಣಾಕ್ಷ, ಸುನೀಲ್ ಕನಗೋಲು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಧಾನ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು: ಕಾಂಗ್ರೆಸ್‌ನ ಚುನಾವಣಾ ಚಾಣಾಕ್ಷ, ಕರ್ನಾಟಕದಲ್ಲಿ ಕಾಂಗ್ರೆಸ್ 135 ಸೀಟುಗಳೊಂದಿಗೆ ಭರ್ಜರಿ ಗೆಲುವಿಗೆ ಕಾರಣರಾದ ಸುನೀಲ್ ಕನಗೋಲು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಧಾನ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಕಾಂಗ್ರೆಸ್ ಗೆಲುವಿಗೆ ಭಾರತ್‌ ಜೋಡೋ, ಮೇಕೆದಾಟು, ಪ್ರಜಾಧ್ವನಿಯಂತಹ ಬೃಹತ್‌ ಯಾತ್ರೆಗಳು ಒಂದೆಡೆ ಕಾರಣವಾದರೆ, ಮತ್ತೊಂದೆಡೆ ಬಿಜೆಪಿ ಸರ್ಕಾರದ ವಿರುದ್ಧ ಪ್ರಯೋಗಿಸಿದ ‘40% ಕಮಿಷನ್‌’ ಅಸ್ತ್ರ, ‘ಪೇಸಿಎಂ’ ಅಭಿಯಾನದಂತಹ ತಂತ್ರಗಳೂ ಪ್ರಮುಖ ಪಾತ್ರ ವಹಿಸಿದವು. ಕಾಂಗ್ರೆಸ್‌ ನಡೆಸಿದ ಇಂತಹ ಕೆಲವು ಯಾತ್ರೆ ಹಾಗೂ ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ, ಹಗರಣಗಳನ್ನು ಜನರಿಗೆ ಮುಟ್ಟಿಸಲು ಪ್ರಯೋಗಿಸಿದ ಅಸ್ತ್ರಗಳನ್ನು ಸಿದ್ಧಪಡಿಸಿದ್ದು ಪಕ್ಷದ ರಾಜಕೀಯ ತಂತ್ರಗಾರ ಬಳ್ಳಾರಿ ಮೂಲದವರಾದ ಸುನಿಲ್‌ ಕನುಗೋಲು ಮತ್ತು ತಂಡ.

ಕಾಂಗ್ರೆಸ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದ ಕನುಗೋಲು ಚುನಾವಣಾ ತಂತ್ರಗಾರಿಕೆ ಹೆಣೆದಿದ್ದರು. ಜತೆಗೆ ಪೇಸಿಎಂನಂತಹ ಅಭಿಯಾನಗಳ ಮೂಲಕ ಹಿಂದಿನ ಸರ್ಕಾರ ಭ್ರಷ್ಟ ಸರ್ಕಾರ ಎಂದು ಜನರ ಮುಂದೆ ಬಿಂಬಿಸುವಲ್ಲಿ ಯಶಸ್ವಿಯಾಗಿದ್ದರು. ತನ್ಮೂಲಕ ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿದ್ದರು. ಇದೀಗ ಸಿದ್ದರಾಮಯ್ಯ ಅವರು, ಕನುಗೋಲು ಅವರನ್ನೇ ಪ್ರಧಾನ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ಮುಂದಾಗಿದ್ದಾರೆ. ಬಳ್ಳಾರಿ ಮೂಲದ ಅವರ ಹೆಸರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿದ್ದು, ಈಗ ನೇಮಕಾತಿ ಆದೇಶ ಬಂದಿದೆ. 

ಯಾರು ಈ ಸುನೀಲ್ ಕನಗೋಳು
ಹಿಂದಿನ ಬಿಜೆಪಿ ಸರ್ಕಾರದ ಕಮಿಷನ್‌ ಆರೋಪವನ್ನು ಜನರ ಬಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷ ಮಾಡಿದ್ದ ಪೇಸಿಎಂ ಅಭಿಯಾನದ ಹಿಂದಿನ ರೂವಾರಿಯೇ ಈ ಸುನೀಲ್ ಕನಗೋಳು. ಚುನಾವಣಾ ತಂತ್ರಗಾರಿಕೆಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಟೀಮ್‌ನಲ್ಲಿ ಕೆಲಸ ಮಾಡಿದ್ದ ಅನುಭವ ಸುನಿಲ್ ಕನುಗೋಲು ಅವರಿಗಿದೆ. 2017 ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜೊತೆ ಸುನಿಲ್ ಕನಗೋಳು ಕೆಲಸ ಮಾಡಿದ್ದರು. ಇತ್ತೀಚೆಗಷ್ಟೇ ಕಾಂಗ್ರೆಸ್ ಟಾಸ್ಕ್ ಫೋರ್ಸ್‌ಗೆ ಸುನಿಲ್ ಕನುಗೋಲು ಸೇರಿದ್ದರು.

ಸೋಷಿಯಲ್‌ ಮೀಡಿಯಾ ಸ್ಟ್ರ್ಯಾಟರ್ಜಿ ಟೀಮ್‌ನಲ್ಲಿದ್ದರೂ, ಕನುಗೋಲು ಯಾವುದೇ ಸೋಷಿಯಲ್‌ ಮೀಡಿಯಾ ಖಾತೆ ಹೊಂದಿರಲಿಲ್ಲ. ಪ್ರಶಾಂತ್‌ ಕಿಶೋರ್‌ ಹಾಗೂ ಇವರು ಜೊತೆಯಾಗಿ ಕೆಲಸ ಮಾಡಿದ್ದರೂ, ಇಬ್ಬರ ಕಾರ್ಯವೈಖರಿ ವಿಭಿನ್ನ. ಪ್ರಶಾಂತ್‌ ಹೆಚ್ಚಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಸುನಿಲ್‌ ಅದ್ಯಾವ ಗೋಜಿಗೂ ಹೋಗೋದಿಲ್ಲ. 2014ರಲ್ಲಿ ಇಬ್ಬರೂ ಬೇರೆಯಾಗುವುದಕ್ಕೂ ಮುನ್ನ ಒಟ್ಟಿಗೆ ಕೆಲಸ ಮಾಡಿದ್ದರು.