Asianet Suvarna News Asianet Suvarna News

ಕಾಂಗ್ರೆಸ್‌ 80 ಸ್ಥಾನವನ್ನೂ ಗೆಲ್ಲಲ್ಲ: ಕೆಜಿಎಫ್‌ ಬಾಬು

ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಯೂಸುಫ್‌ ಶರೀಫ್‌ (ಕೆಜಿಎಫ್‌ ಬಾಬು) ಅವರು ಕೆಪಿಸಿಸಿ ಕಚೇರಿಯಲ್ಲೇ ‘ಕಾಂಗ್ರೆಸ್‌ ರಾಜ್ಯದಲ್ಲಿ 80 ಸ್ಥಾನವೂ ದಾಟಲ್ಲ’ ಎಂದಿರುವುದು ಕಾರ್ಯಕರ್ತರನ್ನು ತೀವ್ರವಾಗಿ ಕೆರಳಿಸಿದ್ದು, ಕಾರ್ಯಕರ್ತರೇ ಕೆಜಿಎಫ್‌ ಬಾಬು ಅವರನ್ನು ತರಾಟೆಗೆ ತೆಗೆದುಕೊಂಡು ಕಚೇರಿಯಿಂದ ಹೊರಗೆ ಕಳುಹಿಸಿದ ಘಟನೆ ನಡೆದಿದೆ.

Congress wont even win 80 Seats Says KGF Babu gvd
Author
First Published Jan 7, 2023, 11:46 AM IST

ಬೆಂಗಳೂರು (ಜ.07): ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಯೂಸುಫ್‌ ಶರೀಫ್‌ (ಕೆಜಿಎಫ್‌ ಬಾಬು) ಅವರು ಕೆಪಿಸಿಸಿ ಕಚೇರಿಯಲ್ಲೇ ‘ಕಾಂಗ್ರೆಸ್‌ ರಾಜ್ಯದಲ್ಲಿ 80 ಸ್ಥಾನವೂ ದಾಟಲ್ಲ’ ಎಂದಿರುವುದು ಕಾರ್ಯಕರ್ತರನ್ನು ತೀವ್ರವಾಗಿ ಕೆರಳಿಸಿದ್ದು, ಕಾರ್ಯಕರ್ತರೇ ಕೆಜಿಎಫ್‌ ಬಾಬು ಅವರನ್ನು ತರಾಟೆಗೆ ತೆಗೆದುಕೊಂಡು ಕಚೇರಿಯಿಂದ ಹೊರಗೆ ಕಳುಹಿಸಿದ ಘಟನೆ ನಡೆದಿದೆ. ಇದು ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಹೈಡ್ರಾಮಾ ಸೃಷ್ಟಿಸಿದೆ’. ಇದರ ಬೆನ್ನಲ್ಲೇ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಕೆಜಿಎಫ್‌ ಬಾಬು, ‘ಕಾಂಗ್ರೆಸ್‌ನವರು ಅತಿ ಆತ್ಮವಿಶ್ವಾಸದಲ್ಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸಲೀಂ ಅಹಮದ್‌ ಅವರನ್ನು ಮಾಡಲಾಗಿದ್ದು, ಅವರ ಹಿಂದೆ ನಾಲ್ಕು ಜನರಿಲ್ಲ. ಅವರು ನನ್ನನ್ನು ಕೆಪಿಸಿಸಿ ಕಚೇರಿಗೆ ಬಿಟ್ಟುಕೊಳ್ಳಬೇಡಿ ಎಂದು ಹೇಳಿದ್ದಾರೆ. 

ನನ್ನನ್ನು ಕಡೆಗಣಿಸಿದರೆ ಕಾಂಗ್ರೆಸ್‌ 10-12 ಕ್ಷೇತ್ರಗಳಲ್ಲಿ ಸೋಲಲಿದೆ’ ಎಂದು ಕಾರ್ಯಾಧ್ಯಕ್ಷರ ವಿರುದ್ಧವೂ ಟೀಕಾಪ್ರಹಾರ ನಡೆಸಿದ್ದಾರೆ. ಶುಕ್ರವಾರ ಬೆಳಗ್ಗೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ಕೆಜಿಎಫ್‌ ಬಾಬು, ನಾನು ಚಿಕ್ಕಪೇಟೆಯಲ್ಲಿ ಕೆಲಸ ಮಾಡುತ್ತಿದ್ದೇನೆ.ಈಗಾಗಲೇ 30 ಕೋಟಿ ರು. ಖರ್ಚು ಮಾಡಿದ್ದೇನೆ. 3 ಸಾವಿರ ಮನೆಗಳನ್ನು ಕಟ್ಟಿಕೊಡುವುದಾಗಿ ಹೇಳಿದ್ದು, ಮನೆಗೆ 5 ಸಾವಿರ ಕೊಡುತ್ತೇನೆ. ಆದರೆ ಆರ್‌.ವಿ. ದೇವರಾಜ್‌ ಅವರೂ ಕೆಲಸ ಮಾಡುತ್ತಿಲ್ಲ ಮಾಡುವವರಿಗೂ ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸಿಬಿಐಯನ್ನು ಛೂ ಬಿಟ್ರು ಬಿಜೆಪಿಯವರು: ಜನಾರ್ದನ ರೆಡ್ಡಿ

ಹೊರಗೆ ಹೋಗಿ ಮಾತನಾಡು: ಕಾರ್ಯಕರ್ತರಿಂದ ತರಾಟೆ: ಕೆಜಿಎಫ್‌ ಬಾಬು ಅವರನ್ನು ತಡೆದ ಕಾರ್ಯಕರ್ತರು ಇದನ್ನೆಲ್ಲಾ ಹೋಗಿ ಹೊರಗಡೆ ಮಾತನಾಡು. ಕಚೇರಿಯಲ್ಲಿ ಏನೇನೋ ಮಾತನಾಡಬೇಡ ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ಈ ವೇಳೆ ಕಾರ್ಯಕರ್ತರೊಂದಿಗೆ ಬಾಬು ಸಹ ವಾದಕ್ಕೆ ಇಳಿದಿದ್ದರಿಂದ ವಾಗ್ವಾದ ಜೋರಾಗಿ ಹೈಡ್ರಾಮಾ ಸೃಷ್ಟಿಯಾಯಿತು. ಕೊನೆಗೆ ಒತ್ತಾಯಪೂರ್ವಕವಾಗಿ ಕಾರ್ಯಕರ್ತರು ಬಾಬು ಅವರನ್ನು ಹೊರಗೆ ಕಳುಹಿಸಿದರು.

ತೆಗೆದರೆ ಗೌರವವಾಗಿ ತೆಗೆಯಿರಿ: ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಾಬು, ನಾನು ಪಕ್ಷದ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಕೋಟಿ ಕೋಟಿ ಹಣ ಕಳೆದುಕೊಂಡಿದ್ದೇನೆ. ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರಿಗೆ ನಾನು ಪ್ರಾಣ ಬೇಕಾದರೂ ಕೊಡುತ್ತೇನೆ. ಆದರೆ ಸಲೀಂ ಅಹಮದ್‌ ಪಕ್ಷಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ನಾನು ಪಕ್ಷದ ವಿರುದ್ಧ ಮಾತನಾಡಿದ್ದರೆ ಏನೇ ಶಿಕ್ಷೆ ಕೊಟ್ಟರೂ ಸಿದ್ಧನಿದ್ದೇನೆ. ಆದರೆ ಕಪ್ಪು ಚುಕ್ಕೆ ತಂದು ಪಕ್ಷದಿಂದ ತೆಗೆಯಬೇಡಿ. ತೆಗೆಯುವುದಿದ್ದರೆ ಗೌರವದಿಂದ ತೆಗೆಯಿರಿ ಎಂದು ಆಗ್ರಹಿಸಿದರು.

ನಾಯಿ, ನರಿ ಅನ್ನೋರಿಗೆ ಜನರ ಚಿಂತೆಯಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ನಿಂದ ಕೆಜಿಎಫ್‌ ಬಾಬು ಅಮಾನತು: ಕಾಂಗ್ರೆಸ್‌ ಪಕ್ಷ ಹಾಗೂ ಕಾಯಾಧ್ಯಕ್ಷರ ಬಗೆಗಿನ ಹೇಳಿಕೆ ಬೆನ್ನಲ್ಲೇ ಯೂಸುಫ್‌ ಶರೀಫ್‌ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಅಮಾನತು ಮಾಡಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ. ರೆಹಮಾನ್‌ ಖಾನ್‌ ಆದೇಶ ಹೊರಡಿಸಿದ್ದಾರೆ. ಶಿಸ್ತು ಸಮಿತಿಯಿಂದ ಈ ಮೊದಲೇ ನೀಡಿದ್ದ ನೋಟಿಸ್‌ಗೆ ನೀವು ಸಮಂಜಸ ಉತ್ತರ ನೀಡಿಲ್ಲ. ಇದೀಗ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಹಾಗೂ ನಾಯಕರ ಬಗ್ಗೆ ವಿವಿಧ ರೀತಿಯ ಹೇಳಿಕೆ ನೀಡಿದ್ದೀರಿ. ಈ ಮೂಲಕ ಪಕ್ಷಕ್ಕೆ ಹಾನಿಯುಂಟು ಮಾಡಿದ್ದು, ನಿಮ್ಮ ನಡೆಯು ಪಕ್ಷದ ಹಿನ್ನಡೆಗೆ ಕಾರಣವಾಗುತ್ತಿದೆ. ಹೀಗಾಗಿ ನಿಮ್ಮನ್ನು ಪಕ್ಷದಿಂದ ಕೂಡಲೇ ಅಮಾನತು ಮಾಡಲಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios