ಬೆಂಗಳೂರು [ನ.02]:  ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 13 ಸೀಟು ಗೆಲ್ಲುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸು. ಬಿಜೆಪಿ 8 ಸ್ಥಾನಗಳಲ್ಲಿ ಸೋತರೂ ಸಾಕು ರಾಜ್ಯ ರಾಜಕೀಯ ಚಿತ್ರಣವೇ ಬದಲಾಗುತ್ತದೆ. ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಲ್ಲದೆ, ಉಪಚುನಾವಣೆಯಲ್ಲಿ ನಾವು ಕಾಂಗ್ರೆಸ್‌ನವರು ಕನಿಷ್ಠ 12 ಸ್ಥಾನ ಗೆಲ್ಲುತ್ತೇವೆ. ಜನ ಬಿಜೆಪಿಯನ್ನು ಸೋಲಿಸುವ ಅಭಿಪ್ರಾಯಕ್ಕೆ ಬಂದಿದ್ದಾರೆ. ಹಾಗಾಗಿ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದರೆ ಆಶ್ಚರ್ಯ ವೇನಿಲ್ಲ ಎಂದು ಹೇಳಿದ್ದಾರೆ. ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಆಯೋಜಿಸ ಲಾಗಿದ್ದ ಮಾಧ್ಯಮ ಸಂವಾದದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಅವರು ಉಪ ಚುನಾವಣೆಯಲ್ಲಿ ಬಿಜೆಪಿ 13 ಸೀಟು ಗೆಲ್ಲುವುದಾಗಿ ಹೇಳಿರುವುದು ಅವರ ಕನಸಷ್ಟೆ. ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಕಾರಣಕ್ಕೆ ಅನೈತಿಕವಾಗಿ ಅಧಿಕಾರಕ್ಕೆ ಬಂದಿದ್ದಾರೆ. 

‘ನಾನು ಸಿಎಂ ಆದ್ರೆ ತಪ್ಪಾ, ಸಿದ್ದು ಕಾಂಗ್ರೆಸ್ ಬಿಡ್ತಾರೆ: ಬಿಜೆಪಿ ನಾಯಕ ಸ್ಫೋಟಕ ಸ್ಟೇಟ್ ಮೆಂಟ್...

ಈಗಲೂ ಅವರಿಗೆ ಬಹುಮತ ಇಲ್ಲ. ಇನ್ನು ಉಪಚುನಾವಣೆಯಲ್ಲಿ ಕನಿಷ್ಠ ಎಂಟು ಸ್ಥಾನಗಳನ್ನಾದರೂ ಗೆಲ್ಲದೇ ಹೋದರೆ ಅಥವಾ ಸೋತರೆ ರಾಜ್ಯ ರಾಜಕೀಯ ಚಿತ್ರಣ ಏನಾಗುತ್ತದೆ. ಯಡಿಯೂರಪ್ಪ ರಾಜೀನಾಮೆ ಕೊಡಬೇಕಾಗುತ್ತದೆ. ಮಧ್ಯಂತರ ಚುನಾವಣೆ ಎದುರಾಗಬಹುದು. ಇದನ್ನು ನಾನು ಹೇಳಿದರೆ ದೊಡ್ಡ ವ್ಯಾಖ್ಯಾನ ಮಾಡುತ್ತಾರೆ ಎಂದರು. 

ನನ್ನ ಡಿಕೆಶಿ ನಡುವೆ ಏನಿಲ್ಲ!: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ತಮ್ಮ ನಡುವೆ ಯಾವುದೇ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅದೆಲ್ಲಾ ಊಹಾಪೋಹ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟಪಡಿಸಿದರು. 

ಅಶೋಕ್‌ಗೆ ತಿರುಗೇಟು: 2013 ರಲ್ಲಿ ಟಿಪ್ಪು ಪೇಟ ತೊಟ್ಟು ನಾನೇ ಟಿಪ್ಪು ಎಂದವರು ಈಗ ಟಿಪ್ಪು  ಮತಾಂಧ ಎನ್ನುತ್ತಿದ್ದಾರೆ. ಇತಿಹಾಸ ತಿರುಚುವುದು, ಸುಳ್ಳು ಹೇಳುವುದು, ನಂತರ ಸ್ಪಷ್ಟನೆ ನೀಡುವುದು ಬಿಜೆಪಿಯವರ ಜನ್ಮಸಿದ್ಧ ಹಕ್ಕು. ಈ ಅಶೋಕ್ ಆಗ ಯಾವ ಪೇಟ  ತೊಟ್ಟಿದ್ದಾರೆ ನೋಡಿ. ಅಂದು ನಾನೇ ಟಿಪ್ಪು ಎಂದವರಿಗೆ ಈಗ ಮತಾಂಧನಾಗಿ ಕಾಣುತ್ತಾನಾ? ಎಂದರು.