ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಗಾಳಿ: ಡಿ.ಕೆ.ಶಿವಕುಮಾರ್
ಎಚ್‌ಡಿಕೆ ಅವರನ್ನ ಮುಖ್ಯಮಂತ್ರಿ ಮಾಡಿದರೂ ಅವರು ಉಳಿಸಿಕೊಳ್ಳಲಿಲ್ಲ, ಈ ಬಾರಿ ನನಗೊಂದು ಅವಕಾಶ ನೀಡಿ: ಡಿ.ಕೆ.ಶಿವಕುಮಾರ್ ಮನವಿ
ಚನ್ನಪಟ್ಟಣ(ಮೇ.08): ಕಳೆದ ಬಾರಿ ಜೆಡಿಎಸ್ 38 ಸ್ಥಾನ ಗೆದ್ದಿದ್ದರೂ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಬಾರದು ಎಂದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ, ಅವರು ಅದನ್ನು ಉಳಿಸಿಕೊಳ್ಳಲಿಲ್ಲ ಎಂದು ಕೆಪಿಸಿಸಿ ಅಧಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಗಂಗಾಧರ್ ಪರ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಅಂದು ಸಮ್ಮಿಶ್ರ ಸರ್ಕಾರವನ್ನು ಉಳಿಸಲು ನಾನು ಬಾಂಬೆವರೆಗೆ ಹೋಗಿ ಹೋರಾಟ ಮಾಡಿದೆ. ಆದರೂ ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ ಜೋಡೆತ್ತಿನ ಸರ್ಕಾರವಿದ್ದು, ಕಾಂಗ್ರೆಸ್ ಬೆಂಬಲ ನೀಡಿದರೂ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಹಾಗೂ ಮಂಡ್ಯದ ಜನ ಏನು ತೀರ್ಮಾನ ಮಾಡಿದರು ಎಂದು ಎಲ್ಲರಿಗೂ ಗೊತ್ತಿದೆ. 8 ಜನ ಶಾಸಕರು, ಮೂವರು ಸಚಿವರು ಸೇರಿದಂತೆ ಜೋಡೆತ್ತಿನ ಸರ್ಕಾರದ ಬಹುತೇಕರು ಪ್ರಚಾರ ನಡೆಸಿದರೂ, ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಪರ ಜನ ಏನು ತೀರ್ಮಾನ ಮಾಡಿದರು ಎಂದು ಪ್ರಶ್ನಿಸಿದ ಅವರು, ರಾಮನಗರದಲ್ಲಿ ಅಂಬರೀಶ್ ಅವರನ್ನೇ ಜನ ಸೋಲಿಸಿ, ಸಿ.ಎಂ.ಲಿಂಗಪ್ಪ ಅವರನ್ನು ಗೆಲ್ಲಿಸಿದರು. ರಾಜಕೀಯದಲ್ಲಿ ಏನೂ, ಯಾವುದೂ ಶಾಶ್ವತವಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಡಿಕೆಶಿ ಪರ ಮತಯಾಚನೆ ವೇಳೆ ಸಂಸದ ಡಿ.ಕೆ.ಸುರೇಶ್ ಕಣ್ಣೀರಧಾರೆ!
ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹದು. ಡಿ.ಟಿ.ರಾಮು, ಸಾದತ್ ಅಲಿಖಾನ್ ಅವರನ್ನು ಇಲ್ಲಿನ ಜನ ಬೆಂಬಲಿಸಿದ್ದಾರೆ. ಇಲ್ಲಿನ ಜನ ಬಯಸಿದರೆ ಏನು ಬದಲಾವಣೆ ಬೇಕಾದರೂ ಮಾಡುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಎಸ್.ಗಂಗಾಧರ್ ಸ್ಪರ್ಧಿಸಿದ್ದಾರೆ. ಆದರೆ, ಇಲ್ಲಿಂದ ಡಿ.ಕೆ.ಶಿವಕುಮಾರ್ ಅವರೇ ಅಭ್ಯರ್ಥಿ ಎಂದು ತಿಳಿದು ಅವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಮುಖ್ಯಮಂತ್ರಿ, ಸ್ಪೀಕರ್ ಗಾದಿಯಂತಹ ಉನ್ನತ ಹುದ್ದೆ ಅಲಂಕರಿಸಿದ್ದ ಜಗದೀಶ್ ಶೆಟ್ಟರ್, ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿ, ಶಿವಲಿಂಗೇಗೌಡ, ಎಂಎಲ್‌ಸಿ ಆಗಿದ್ದ ಪುಟ್ಟಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಬಂದಿದ್ದಾರೆ. ಸುಮ್ಮನೆ ಬರಲು ಇವರೇನು ದಡ್ಡರಲ್ಲ. ಕಾಂಗ್ರೆಸ್‌ನತ್ತ ಗಾಳಿ ಬೀಸುತ್ತಿರುವುದರಿಂದಲೇ ಇವರೆಲ್ಲ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ರೈತರ, ಕಾರ್ಮಿಕರ ಕಲ್ಯಾಣಕ್ಕೆ ಯಾವುದೇ ಯೋಜನೆ ಜಾರಿಗೆ ತರಲಿಲ್ಲ. ಗ್ಯಾಸ್ ಬೆಲೆ 440ರುಗಳಿಂದ 1200 ರು.ಗಳಿಗೆ ಏರಿಕೆಯಾಗಿದೆ. ದಿನಸಿ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಬಿಜೆಪಿಯಾಗಲಿ ಜೆಡಿಎಸ್ ಆಗಲಿ ಬಡವರು, ರೈತರ ಬದುಕಿನಲ್ಲಿ ಬದಲಾವಣೆ ತರಲು ಯಾವುದೇ ಕೆಲಸ ಮಾಡಲಿಲ್ಲ. ಎಲ್ಲ ಸ್ತರದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ನೀಡಿದ್ದು, ಈ ಬಾರಿ ರಾಜ್ಯದ ಜನ ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಜನ ಕೆಂಗಲ್ ಹನುಮಂತಯ್ಯನವರಿಗೆ, ರಾಮಕೃಷ್ಣ ಹೆಗಡೆ ಅವರಿಗೆ, ದೇವೇಗೌಡರಿಗೆ, ಕುಮಾರಸ್ವಾಮಿ ಅವರಿಗೆಲ್ಲಾ ಅವಕಾಶ ನೀಡಿದ್ದಾರೆ. ಇಂದು ಎಷ್ಟೋ ಪ್ರತಿಪಕ್ಷದ ನಾಯಕರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾನೆ ಎಂದು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ನಿಮ್ಮಣ್ಣ ಎಚ್‌ಡಿಕೆಯಂತೆ ನಾನು ಬೆವರು ಸುರಿಸಿ ಕೆಲಸ ಮಾಡಿದ್ದೇನೆ. ಈ ಬಾರಿ ನನಗೂ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಗಂಗಾಧರ್, ಕಾಂಗ್ರೆಸ್ ಮುಖಂಡರಾದ ಆನಂದ ಶರ್ಮ, ಸಂಜೀವ್ ಸಿಂಗ್, ದುಂತೂರು ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್, ಸುನೀಲ್ ಇತರರಿದ್ದರು.
ಎಚ್ಡಿಕೆ, ಸಿಪಿವೈ ವಿರುದ್ಧ ವಾಗ್ದಾಳಿ
ಕ್ಷೇತ್ರದಿಂದ ಆಯ್ಕೆಯಾದ ನಂತರ ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಎಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಸಾಕ್ಷಿಗುಡ್ಡೆ ಏನಾದರೂ ಇದ್ದರೆ ತೋರಿಸಲಿ. ಅದೇ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಸಿ.ಪಿ.ಯೋಗೇಶ್ವರ್ ಏನು ಅಭಿವೃದ್ಧಿ ಮಾಡಿದ್ದಾರೆ. ಯೋಗೇಶ್ವರ್ ಅವರಿವರು ಇರಲಿ ತಮ್ಮ ಪಕ್ಷದ ಕಾರ್ಯಕರ್ತರ ಗುತ್ತಿಗೆ ಬಿಲ್‌ಗಳನ್ನು ದುಡ್ಡು ತೆಗೆದುಕೊಳ್ಳದೇ ಪಾಸ್ ಮಾಡಿಸಿದ್ದಾರಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಕೋವಿಡ್ ಕಾಲದಲ್ಲಿ ಎಚ್ಡಿಕೆ, ಸಿಪಿವೈ ಎಲ್ಲಿದ್ದರು. ಜನರ ಸಂಕಷ್ಟದಲ್ಲಿ ಅವರೊಂದಿಗೆ ನಿಂತಿದ್ದು ಡಿ.ಕೆ.ಸುರೇಶ್. ಪ್ರತಿ ಮನೆಗೆ ಔಷಧ ತಲುಪಿಸುವ ವ್ಯವಸ್ಥೆ ಮಾಡಿದರು. ದೇವರು ವರ ಕೊಡುವುದಿಲ್ಲ. ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಕುಮಾರಸ್ವಾಮಿ ಹಾಗೂ ಯೋಗೇಶ್ವರ್‌ಗೆ ದೇವರು ಸಾಕಷ್ಟುಅವಕಾಶ ನೀಡಿದ್ದು, ಇದೀಗ ಅವರ ಕಾಲ ಮುಗಿದಿದೆ ಎಂದು ಹೆಳಿದರು.
ಬೊಂಬೆನಗರಿಯಲ್ಲಿ ಕುಮಾರಸ್ವಾಮಿಯನ್ನು ಮಣಿಸಿ ಯೋಗೇಶ್ವರ್ ವಿಧಾನಸೌಧ ಪ್ರವೇಶಿಸುತ್ತಾರಾ?
ಡಿಕೆಶಿ ರೋಡ್ ಶೋ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಗಂಗಾಧರ್ ಪರವಾಗಿ ನಗರದಲ್ಲಿ ರೋಡ್ ಶೋ ನಡೆಸಿ ಪ್ರಚಾರ ನಡೆಸಿದರು. ನಗರದ ನ್ಯಾಯಾಲಯದ ಮುಂಭಾಗದಿಂದ ಬಸ್ ನಿಲ್ದಾಣದವರೆಗೂ ರೋಡ್ ಶೋ ನಡೆಸಿದ ಡಿ.ಕೆ.ಶಿವಕುಮಾರ್, ಬಸ್ ನಿಲ್ದಾಣದ ಬಳಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಚುನಾವಣಾ ಪ್ರಚಾರಕ್ಕಾಗಿ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಶಿವಕುಮಾರ್‌ಗೆ ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿ, ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಲಾಯಿತು.
ಜನರನ್ನು ಚದುರಿಸಿದ ಮಳೆ
ಡಿ.ಕೆ.ಶಿವಕುಮಾರ್ ರೋಡ್ ಶೋ ವೇಳೆ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಲು ಕಾಂಗ್ರೆಸ್ ತಯಾರಿ ನಡೆಸಿತ್ತು. ಆದರೆ, ಸಂಜೆ ಸುರಿದ ಮಳೆ ಹಾಗೂ ಕಾರ್ಯಕ್ರಮ ತಡವಾದ ಕಾರಣ ಕೊಂಚ ಜೋಶ್ ಇಳಿಮುಖವಾಯಿತು. ಸಂಜೆ 7 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತಾದರೂ ಸುಮಾರು 2 ಗಂಟೆ ತಡವಾಗಿ ಡಿ.ಕೆ.ಶಿವಕುಮಾರ್ ಆಗಮಸಿದರು. ಸಂಜೆಯಿಂದಲೇ ಕಾರ್ಯಕ್ರಮಕ್ಕಾಗಿ ಕಾಯ್ದು ಕುಳಿತಿದ್ದ ಜನ ಮಳೆ ಆರಂಭಗೊಂಡ ಕಾರಣ ಅತ್ತಿತ್ತ ಚದರಿದರು.