* ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತದ ನಿರೀಕ್ಷೆ* ಬಿಜೆಪಿಗೆ 70+, ಜೆಡಿಎಸ್‌ಗೆ 25+ ಸ್ಥಾನ, 6ರಿಂದ 8 ಮಂದಿ ಪಕ್ಷೇತರರಿಗೆ ಗೆಲುವು* ಸಿದ್ದು, ಡಿಕೆಶಿ ಜೊತೆ ರಾಹುಲ್ ಗಾಂಧಿ ಚರ್ಚೆ
ಎಸ್.ಗಿರೀಶ್‌ಬಾಬು
ಬೆಂಗಳೂರು(ಜೂ.30): ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ 120 ಪ್ಲಸ್ ಸ್ಥಾನಗಳಿಸುವ ಮೂಲಕ ಸರಳ ಬಹುಮತ ಪಡೆಯಲಿದೆ. ಬಿಜೆಪಿ 70 ಪ್ಲಸ್ ಸ್ಥಾನಗಳಿಸಿದರೆ, ಜೆಡಿಎಸ್ 25 ಪ್ಲಸ್‌ಗೆ ಸೀಮಿತವಾಗುತ್ತದೆ. 6ರಿಂದ 8 ಮಂದಿ ಪಕ್ಷೇತರರು ಗೆಲ್ಲಲಿದ್ದಾರೆ...
ಕಾಂಗ್ರೆಸ್ ರಾಜಕೀಯ ತಂತ್ರಜ್ಞ ಸುನೀಲ್ ಕನ್ನಗೋಲು ಅವರು ಸಿದ್ಧಪಡಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸಿರುವ ಪ್ರಾಥಮಿಕ ಸಮೀಕ್ಷಾ ವರದಿಯ ಮುಖ್ಯಾಂಶವಿದು. ಕಾಂಗ್ರೆಸ್ ಪಾಲಿಗೆ ಈ ಆಶಾದಾಯಕ ಸಮೀಕ್ಷಾ ವರದಿ ನೀಡಿರುವ ಕನ್ನಗೋಲು, ಇದಕ್ಕೆ ಕಾರಣಗಳನ್ನು ಹಾಗೂ ಕೆಲ ಎಚ್ಚರಿಕೆಗಳನ್ನು ನೀಡಿದ್ದಾರೆ ಮತ್ತು ಮುಂದಿನ ಆರು ತಿಂಗಳಿಗೆ ಸೀಮಿತವಾಗಿ ಕಾಂಗ್ರೆಸ್ ಯಾವ್ಯಾವ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಬೇಕು ಎಂಬ ನೀಲನಕ್ಷೆಯನ್ನು ಕೂಡ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಹುಲ್ ಕಾರ್ಯತಂತ್ರ
ಕಿತ್ತಾಡದಂತೆ ಡಿಕೆಶಿ, ಸಿದ್ದುಗೆ ರಾಹುಲ್ ತಾಕೀತು:
ಈ ಸಮೀಕ್ಷೆಯನ್ನು ಆಧಾರವಾಗಿಟ್ಟುಕೊಂಡೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಮಂಗಳವಾರ ಹಾಗೂ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಕೂಲಂಕಷ ಚರ್ಚೆ ನಡೆಸಿದ್ದು, ಕೆಲ ಸ್ಪಷ್ಟಸೂಚನೆಗಳನ್ನು ನೀಡಿದ್ದಾರೆ. ಮುಖ್ಯವಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯ ನೆಪವಿಟ್ಟುಕೊಂಡು ಮೇಲಾಟ ನಡೆಸದಂತೆ ಸ್ಪಷ್ಟನಿರ್ದೇಶನ ನೀಡಲಾಗಿದೆ ಹಾಗೂ ಅವರ ಬಣಗಳು ಪಕ್ಷಕ್ಕೆ ಹಾನಿಯಾಗುವಂತಹ ಬಹಿರಂಗ ಹೇಳಿಕೆ ನೀಡದಂತೆ ಸ್ವಯಂ ನಿಯಂತ್ರಣ ಸಾಧಿಸಬೇಕು ಎಂದು ಸೂಚಿಸಿದ್ದಾರೆ.
ಯಾರೂ ಸಿಎಂ ಅಭ್ಯರ್ಥಿ ಅಲ್ಲ:
ಜತೆಗೆ, ಚುನಾವಣೆಗೆ ಮುನ್ನ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವುದಿಲ್ಲ. ಬದಲಾಗಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು. ಮುಂದಿನ ಆರು ತಿಂಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾತಿವಾರು ಸಮಾವೇಶಗಳನ್ನು ಹಮ್ಮಿಕೊಳ್ಳುವುದು. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಜತೆಗೂಡಿ ಜಿಲ್ಲಾ ಪ್ರವಾಸ ಕೈಗೊಳ್ಳಬೇಕು. ಯಾವುದೇ ಸಮುದಾಯ ಪಕ್ಷದ ಬಗ್ಗೆ ಬೇಸರಗೊಳ್ಳದಂತೆ ಎಚ್ಚರಿಕೆ ವಹಿಸಬೇಕು.ರಾಜ್ಯದ ಇತರ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ. ರಾಹುಲ್ ಗಾಂಧಿ ಅವರೇ ನೇರವಾಗಿ ನೀಡಿದ ಈ ನಿರ್ದೇಶನಗಳಿಗೆ ಇಬ್ಬರು ನಾಯಕರು ಒಪ್ಪಿದ್ದಾರೆ ಎಂದು ಮೂಲಗಳು ಹೇಳಿವೆ.
ಏನಿದೆ ಸಮೀಕ್ಷಾ ವರದಿಯಲ್ಲಿ?:
ಕನ್ನಗೋಲು ಅವರ ಸಮೀಕ್ಷಾ ವರದಿ ಪ್ರಕಾರ ಈ ತಕ್ಷಣ ಚುನಾವಣೆ ನಡೆದರೆ ಕಾಂಗ್ರೆಸ್ ಸರಳ ಬಹುಮತ ಪಡೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಲಿಂಗಾಯತ ಸಮುದಾಯ ಬಿಜೆಪಿಯ ಬಗ್ಗೆ ಬೇಸರಗೊಂಡಿರುವುದು ಮತ್ತು ಸಂಪೂರ್ಣವಲ್ಲದಿದ್ದರೂ ಗಣನೀಯ ಎನಿಸುವ ಮಟ್ಟಿಗಿನ ಲಿಂಗಾಯತ ಮತದಾರರು ಬಿಜೆಪಿಯಿಂದ ವಿಮುಖವಾಗಬಹುದು. ಇನ್ನು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ದುರ್ಬಲಗೊಂಡು ಒಕ್ಕಲಿಗ ಸಮೂಹದ ಅನ್ಯ ಪಕ್ಷಗಳೆಡೆಗೆ ಚಲನಶೀಲತೆ ತೋರಿದೆ. ಇನ್ನು ಅಹಿಂದ ಮತ ವರ್ಗ ಕಾಂಗ್ರೆಸ್‌ನ ಬೆನ್ನಿಗೆ ಗಟ್ಟಿಯಾಗಿ ನಿಂತಿದೆ.
ಮುಂದಿನ ಚುನಾವಣೆಯಲ್ಲಿ ಕಮಲ ಅರಳಿಸಲು ಕೇಸರಿ ಪಡೆ ಬಿಗ್ ಪ್ಲಾನ್!
ಹೀಗಾಗಿ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ನಿಂದ ಹೊರ ಬರುವ ಮನಸ್ಥಿತಿಯಲ್ಲಿರುವ ಒಕ್ಕಲಿಗರನ್ನು ಬಿಜೆಪಿಯತ್ತ ಸಾಗದಂತೆ ತಡೆಯಬೇಕು ಹಾಗೂ ಬಿಜೆಪಿಯಿಂದ ಬೇಸತ್ತಿರುವ ಲಿಂಗಾಯತ ಸಮುದಾಯದ ಕೆಲವಂಶವನ್ನಾದರೂ ಸೆಳೆಯಬೇಕು. ಇದಕ್ಕಾಗಿ ಲಿಂಗಾಯತ ಸಮುದಾಯವನ್ನು ಸೆಳೆಯುವ ಹಾಗೂ ಒಕ್ಕಲಿಗ ಪರವಾಗಿರುವ ನಿಲುವುಗಳನ್ನು ಕಾಂಗ್ರೆಸ್ ಪ್ರದರ್ಶಿಸಬೇಕು ಎಂಬ ಸಲಹೆಯನ್ನು ವರದಿಯಲ್ಲಿ ನೀಡಲಾಗಿದೆ.
ರಾಜ್ಯದ ಪ್ರತಿ ಕ್ಷೇತ್ರದಲ್ಲೂ ತಲಾ ಮೂವರು ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸಿ ಅವರ ಬಲಾಬಲಗಳೇನು? ಯಾರಿಗೆ ಟಿಕೆಟ್ ಕೊಟ್ಟರೇ ಏನಾಗಬಹುದು ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ. ಅಲ್ಲದೆ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವಿಳಂಬ ಧೋರಣೆ ತೋರದಂತೆ ಹಾಗೂ ಸಾಧ್ಯವಾದಷ್ಟುಶೀಘ್ರವಾಗಿ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಖೈರುಗೊಳಿಸಿ ಅವರನ್ನು ಚುನಾವಣಾ ಸಿದ್ಧತೆಗೆ ತೊಡಗಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
