ಅಧ್ಯಕ್ಷನಾದರೆ ಕಾಂಗ್ರೆಸ್‌ಗೆ ಶಕ್ತಿ ತುಂಬುವೆ: ಖರ್ಗೆ ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಹೋರಾಡುವೆ ಆಸಕ್ತಿ ಇಲ್ಲದಿದ್ದರೂ ಕಾಂಗ್ರೆಸ್‌ ಚುನಾವಣೆ ಕಣಕ್ಕೆ

ಬೆಂಗಳೂರು (ಅ.17) : ಕಾಂಗ್ರೆಸ್‌ ಪಕ್ಷದ ಸಂಘಟನೆಗಾಗಿ ಹಿರಿಯ ನಾಯಕರ ಒತ್ತಾಯದ ಮೇರೆಗೆ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಿಂತಿದ್ದೇನೆ. ಅವಕಾಶ ದೊರೆತರೆ ಸಂವಿಧಾನ ವಿರೋಧಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಹೋರಾಡಲು ಕಾಂಗ್ರೆಸ್ಸನ್ನು ಶಕ್ತಿಶಾಲಿಯಾಗಿ ರೂಪಿಸಲು ಸಂಘಟಿತ ಪ್ರಯತ್ನ ನಡೆಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಸ್ಥಾನದ ಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

22 ವರ್ಷ ಬಳಿಕ ಇಂದು ಕಾಂಗ್ರೆಸ್ ಎಲೆಕ್ಷನ್!

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಚುನಾವಣೆಯಲ್ಲಿ ಆಸಕ್ತಿ ಇಲ್ಲದಿದ್ದರೂ ಗಾಂಧಿ ಕುಟುಂಬದಿಂದ ಯಾರೂ ಸ್ಪರ್ಧಿಸದ ಕಾರಣ ಹಾಗೂ ರಾಜ್ಯ, ರಾಷ್ಟ್ರ ಮಟ್ಟದ ಪ್ರಮುಖ ನಾಯಕರ ಒತ್ತಾಯದ ಮೇರೆಗೆ ಸ್ಪರ್ಧಿಸುತ್ತಿದ್ದೇನೆ. ಭಾರತ ಐಕ್ಯತಾ ಯಾತ್ರೆಯಿಂದಾಗಿ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಸಿಲ್ಲ. ಪ್ರತಿ ಹಂತದ ನನ್ನ ರಾಜಕೀಯ ಜೀವನ ಕರ್ನಾಟಕದಿಂದಲೇ ಆರಂಭವಾಗಿದೆ. ರಾಜ್ಯ ನಾಯಕರು ನನಗೆ ಬೆಂಬಲ ನೀಡುವುದರಲ್ಲಿ ಸಂಶಯವಿಲ್ಲ. ಆದರೂ ನನ್ನ ಕರ್ತವ್ಯವಾದ್ದರಿಂದ ರಾಜ್ಯದ ಎಲ್ಲಾ ಎಐಸಿಸಿ ಮತದಾರರಿಗೂ ಮತದಾನ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ದೇಶದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಬೆಂಬಲಿತ ಸರ್ಕಾರವು ಸಂವಿಧಾನಕ್ಕೆ ತಿಲಾಂಜಲಿ ಇಟ್ಟಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಐಟಿ, ಇಡಿ ಮೂಲಕ ಚುನಾಯಿತ ಸರ್ಕಾರ ಕೆಡವುತ್ತಿದ್ದಾರೆ. ಅವರ ಪಕ್ಷ ಸೇರಲು ಒಪ್ಪದಿದ್ದರೆ ಕೇಸ್‌ ಮುಂದುವರಿಸುತ್ತಾರೆ. ಇಲ್ಲಿ ಕಳಂಕಿತರು ಪಕ್ಷಾಂತರವಾದರೆ ಬಿಜೆಪಿಗೆ ಹೋಗಿ ಕ್ಲೀನ್‌ ಆಗುತ್ತಾರೆ ಎಂದರು.

ಇದೇ ರೀತಿ ದೇಶದ ಆರೇಳು ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಕೆಡವಿದ್ದಾರೆ. ಜತೆಗೆ ದೇಶದಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಇದೆಲ್ಲವನ್ನೂ ಎದುರಿಸಲು ಕಾಂಗ್ರೆಸ್‌ ಶಕ್ತಿಶಾಲಿಯಾಗಬೇಕು. ಇದು ಒಬ್ಬರಿಂದ ಆಗುವ ಕೆಲಸ ಅಲ್ಲ. ಎಲ್ಲರೂ ಒಟ್ಟಾಗಿ ಸೇರಿ ಸಂಘಟನೆ ಮಾಡಬೇಕು. ಆ ಮೂಲಕ ನಿರುದ್ಯೋಗ, ಹಣದುಬ್ಬರ, ಜಿಡಿಪಿ ಕುಸಿತ, ರೂಪಾಯಿ ಮೌಲ್ಯ ಕುಸಿತ, ಆರ್ಥಿಕ ಹಿನ್ನಡೆ, ಖಾಸಗೀಕರಣ, ಉದ್ಯೋಗ ನಷ್ಟದ ವಿರುದ್ಧ ಹೋರಾಡಬೇಕು. ವಿದ್ಯಾರ್ಥಿ ಘಟ್ಟದಿಂದ ಹೋರಾಡುತ್ತಿರುವ ನಾನು ಇದರ ವಿರುದ್ಧ ಹೋರಾಡಲು ಎಲ್ಲರೂ ಕೈ ಜೋಡಿಸಬೇಕು. ಇದು ಸಂಘಟಿತ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ರಾಹುಲ್‌ಗಾಂಧಿ ನೇತೃತ್ವದಲ್ಲಿ ನಾವು ಆರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದೆವು. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ಸಾಂವಿಧಾನಿಕ ಸಂಸ್ಥೆ ದುರ್ಬಳಕೆ ಮಾಡಿಕೊಂಡು ಒಂದೊಂದಾಗಿ ಸರ್ಕಾರ ಕೆಡವಿದರು. ಮೊದಲಿನಿಂದಲೂ ಆ ಕುಟುಂಬ ಪಕ್ಷಕ್ಕೆ ಸೇವೆ ಸಲ್ಲಿಸಿಕೊಂಡು ಬಂದಿದೆ. ಪಂಡಿತ್‌ ನೆಹರೂ ಅವರಿಂದ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಅವರ ಹತ್ತು ಹಲವು ಯೋಜನೆಗಳು ನೀಡಿದ್ದಲ್ಲದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನಂತರ ಪಕ್ಷ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಹಾಗೂ ರಾಹುಲ… ಗಾಂಧಿ ಅಧಿಕಾರ ಸ್ವೀಕಾರ ಮಾಡಲಿಲ್ಲ ಎಂದು ಖರ್ಗೆ ಕೊಂಡಾಡಿದರು.

ಪ್ರತಿಸ್ಪರ್ಧಿ ಶಶಿ ತರೂರ್‌ ಕುರಿತ ಪ್ರಶ್ನೆಗೆ, ನಾನು ವಿವಾದಾತ್ಮಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ನನ್ನ ವಿಚಾರ ಮಾತ್ರ ಮಾತನಾಡುತ್ತೇನೆ. ಇದು ನಮ್ಮ ಮನೆ ವಿಚಾರ. ಇಲ್ಲಿ ಅವರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಇದೆ. ಇದು ಪಕ್ಷದಲ್ಲಿ ಆಂತರಿಕವಾಗಿ ನಡೆಯುತ್ತಿರುವ ಸ್ನೇಹಯುತ ಸ್ಪರ್ಧೆ ಎಂದಷ್ಟೇ ಹೇಳಿದರು.

ಗಾಂಧಿ ಕುಟುಂಬದ ಸಲಹೆ ಪಡೆಯಲು ನಾಚಿಕೆಯಿಲ್ಲ: ಖರ್ಗೆ

ನಾನು ಎಐಸಿಸಿ ಅಧ್ಯಕ್ಷನಾದರೆ ಪಕ್ಷದ ವ್ಯವಹಾರಗಳನ್ನು ನಡೆಸುವಲ್ಲಿ ಗಾಂಧಿ ಕುಟುಂಬದಿಂದ ಒಳ್ಳೆಯ ಸಲಹೆಗಳು ಬಂದರೆ ಪಡೆಯುತ್ತೇನೆ. ಇದರಲ್ಲಿ ನಾಚಿಕೊಳ್ಳುವುದು ಏನೂ ಇಲ್ಲ. ನೀವು ಸಲಹೆ ನೀಡಿದರೂ ಪಡೆಯುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.

ರಾಹುಲ್‌ ಯಾತ್ರೆ ವೇಳೆ ವಿದ್ಯುತ್‌ ತಗುಲಿ ನಾಲ್ವರಿಗೆ ಗಾಯ: ಆಸ್ಪತ್ರೆಗೆ ದಾಖಲು

ಗಾಂಧಿ ಕುಟುಂಬದ ಸಲಹೆ ಪಡೆಯುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವೇಳೆ ನಾನು ಪಕ್ಷದ ಅಧ್ಯಕ್ಷನಾದರೆ, ಪಕ್ಷದ ಬೆಳವಣಿಗೆಗೆ ಹೋರಾಡಿ ತಮ್ಮ ಶಕ್ತಿಯನ್ನು ಹಾಕಿರುವ ಗಾಂಧಿ ಕುಟುಂಬದ ಸಲಹೆ ಮತ್ತು ಬೆಂಬಲವನ್ನು ತೆಗೆದುಕೊಳ್ಳುತ್ತೇನೆ. ಒಳ್ಳೆಯ ಸಲಹೆಗಳನ್ನು ಪಡೆಯುವುದರಲ್ಲಿ ನಾಚಿಕೊಳ್ಳುವುದು ಏನೂ ಇರುವುದಿಲ್ಲ ಎಂದರು.

ಬಿಜೆಪಿಯವರಿಗೆ ಚರ್ಚೆ ಮಾಡಲು ಬೇರೆ ವಿಚಾರವೇ ಇಲ್ಲ. ಕಳೆದ 20 ವರ್ಷಗಳಿಂದ ಸೋನಿಯಾ ಗಾಂಧಿ ಅವರು ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ತನ್ಮೂಲಕ ಬಡವರ ಹೊಟ್ಟೆತುಂಬುವ ಆಹಾರ ಭದ್ರತೆ, ಕಡ್ಡಾಯ ಶಿಕ್ಷಣ ಹಕ್ಕು, ನರೇಗಾದಂತಹ ಯೋಜನೆ ತಂದಿದ್ದಾರೆ. ಇಂತಹ ಯೋಜನೆಗಳಿಗೆ ಬೆಂಬಲ ನೀಡಬೇಕು. ಅವರ ಅನುಭವದಿಂದ ನೀಡುವ ಉತ್ತಮ ಸಲಹೆ ಪಡೆಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.