ಕಾಂಗ್ರೆಸ್‌ ನಾಯಕರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. 

ನವದೆಹಲಿ (ಆ.19): ಮತ ಕಳ್ಳತನ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಕಾಂಗ್ರೆಸ್‌ ನಾಯಕರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಯಾತ್ರೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿಯಾಗಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಾಗಲಿ ನ್ಯಾಯಾಂಗ ಹಾಗೂ ಆಯೋಗದ ಬಗ್ಗೆ ಅಪನಂಬಿಕೆ ರೀತಿ ವರ್ತನೆ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವುದಲ್ಲದೆ ಜನರ ಮನಸ್ಸು ಕೆಡಿಸುವ ಕೆಲಸವಾಗಿದೆ.

ಕಾಂಗ್ರೆಸ್ ಗೆದ್ದಾಗ ಚುನಾವಣಾ ಆಯೋಗ ಸರಿಯಿರುತ್ತದೆ, ಸೋತಾಗ ಚುನಾವಣಾ ಆಯೋಗ ಸರಿ ಇಲ್ಲವೆಂದು ವಾದಿಸುತ್ತಾರೆ ಎಂದು ಕಿಡಿಕಾರಿದರು. ಚುನಾವಣಾ ಆಯೋಗ ಒಂದು ಪಕ್ಷಕ್ಕೆ, ವ್ಯಕ್ತಿಗೆ ಕೆಲಸ ಮಾಡುವುದಿಲ್ಲ. ಸಂವಿಧಾನ ಬದ್ದವಾಗಿ, ವೈಜ್ಞಾನಿಕವಾಗಿ ಕೆಲಸ ಮಾಡುತ್ತದೆ. 60 ವರ್ಷ ಕಾಂಗ್ರೆಸ್‌ ಆಡಳಿ‌ತ ಮಾಡಿದಾಗ ಆಯೋಗ ದುರ್ಬಳಕೆ ಮಾಡಿಕೊಂಡಿದ್ರಾ? ನ್ಯಾಯಾಂಗ ವ್ಯವಸ್ಥೆ ಮೇಲೆ 140 ಕೋಟಿ ಜನರಿಗೆ ನಂಬಿಕೆ ಇದೆ. ಜನರಿಗೆ ಅಪನಂಬಿಕೆ ಬರುವ ಕೆಲಸ ಮಾಡಬಾರದು. ರಾಹುಲ್ ಗಾಂಧಿಗೆ ಅಧಿಕಾರದ ಹುಚ್ಚು ಹಿಡಿದಿದ್ದು, ಆಸ್ಪತ್ರೆಯಿಂದ ಬಂದ ರೋಗಿಗಳ ರೀತಿಯ ವರ್ತನೆ ಮಾಡಬಾರದು ಎಂದರು.

ಒಳಮೀಸಲಾತಿ ಜಾರಿ ಮಾಡದಿದ್ರೆ ಉಗ್ರ ಹೋರಾಟ: ಸುಪ್ರೀಂಕೋರ್ಟ್‌ ನೀಡಿರುವ ಆದೇಶದಂತೆ ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಆ.11 ಒಳಗಾಗಿ ಜಾರಿ ಮಾಡದಿದ್ದರೆ ಸಮುದಾಯದ ಮುಖಂಡರು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲು ಚಿಂತಿಸಿದ್ದಾರೆ. ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಶೇ.15 ರಿಂದ 17ಕ್ಕೆ ಹೆಚ್ಚಿಸಲಾಗಿದೆ. ಎಸ್ಟಿಯ ಮೀಸಲಾತಿ ಶೇ.3 ರಿಂದ 7ಕ್ಕೆ ಏರಿಸಲಾಗಿದೆ. ಈಗಾಗಲೇ ಇದು ಅನುಷ್ಠಾನದಲ್ಲಿಯೂ ಇದೆ ಎಂದು ಹೇಳಿದರು.

ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಆರ್.ಬಿ. ತಿಮ್ಮಾಪೂರ ಪಕ್ಷ ಮತ್ತು ಸರ್ಕಾರದಲ್ಲಿ ಚಲಾವಣೆಯಲ್ಲಿಲ್ಲದ ನಾಣ್ಯದಂತಿದ್ದಾರೆ. ಇವರಿಗೆ ಯಾವೂರ ದಾಸಯ್ಯ ಎನ್ನುವವರೂ ಕೂಡ ಇಲ್ಲ ಎಂದು ಕಿಚಾಯಿಸಿದರು. ಮಾಜಿ ಸಚಿವ ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಒಳಮೀಸಲಾತಿ ನೀಡುವುದು ಇದೇ ಮೊದಲಲ್ಲ. ಪಂಜಾಬ್ ಸರ್ಕಾರ ವಾಲ್ಮೀಕಿ ಜನಾಂಗಕ್ಕೆ ಒಳಮೀಸಲಾತಿ ನೀಡಿದೆ. ಹೀಗಿದ್ದಾಗ ಒಳಮೀಸಲಾತಿ ಜಾರಿಯಾಗುವುದರಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ಒಳಮೀಸಲಾತಿ ಜಾರಿ ಮಾಡುವಂತೆ ಸುಪ್ರೀಂಕೋರ್ಟ್‌ 2024ರ ಆಗಸ್ಟ್ 1ರಂದು ಆದೇಶಿಸಿದೆ. ಆದರೆ, ರಾಜ್ಯ ಸರ್ಕಾರ ಜಾರಿಗೆ ಮಾಡುತ್ತಿಲ್ಲ. ಜನರ ದಾರಿ ತಪ್ಪಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ ಸಂಸದರು, ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕಾಂಗ್ರೆಸ್ ಹೆಚ್ಚಳ ಮಾಡಲಿಲ್ಲ, ಅದನ್ನು ನಾವು (ಬಿಜೆಪಿ) ಮಾಡಿದೆವು, ಕಾಂಗ್ರೆಸ್ ನವರು ದಲಿತರನ್ನ ಕೇವಲ ವೋಟ್ ಬ್ಯಾಂಕ್‌ ಮಾಡಿಕೊಂಡರು, ಅಕ್ಕಿ, ಬ್ಯಾಳಿ ಕೊಡ್ತೇವೆ, ಕೋಳಿ ಕೊಡ್ತೇವೆ, ಕೊಯ್ದುಕೊಂಡು ತಿನ್ನಿ ಅಂದ್ರಿ., ಬದಲಿಗೆ ನೀವು ವಿದ್ಯಾವಂತರು ಆಗಿ, ಬುದ್ಧಿವಂತರಾಗಿ, ಸರ್ಕಾರಿ ಅಧಿಕಾರಿಗಳಾಗಿ ನಿಮ್ಮ ಕಾಲ ಮೇಲೆ ನಿಲ್ಲಿ ಎಂದು ಕಾಂಗ್ರೆಸ್ ಯಾವತ್ತೂ ಹೇಳಲಿಲ್ಲ, ಕೈ ಕೆಳಗೆ ಮಾಡುವುದನ್ನು ಹೇಳಿದ್ರೆ ಹೊರತು ಕೈ ಮೇಲೆ ಮಾಡುವ ಯೋಜನೆಗಳನ್ನು ತರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.