ರಾಜ್ಯ ಸರ್ಕಾರದ ಮಳೆ ಹಾನಿ ನಿರ್ವಹಣೆ ಕ್ರಮಗಳ ಕುರಿತು ರಾಜ್ಯ ಕಾಂಗ್ರೆಸ್ ಕಿಡಿ ಕಾರಿದ್ದು, ‘ಮಳೆಯಿಂದ ಉಂಟಾಗಿರುವ ಮನೆ ಹಾನಿಗೆ ಕೇವಲ 10 ಸಾವಿರ ರು. ಪರಿಹಾರ ಘೋಷಣೆ ಸಾಕೆ? ಪ್ರಾಣ ಕಳೆದುಕೊಂಡ ಜನ, ಜಾನುವಾರುಗಳಿಗೆ ಏನು ಪರಿಹಾರ ನೀಡಿದ್ದೀರಿ?’ ಎಂದು ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು (ಜು.12): ರಾಜ್ಯ ಸರ್ಕಾರದ ಮಳೆ ಹಾನಿ ನಿರ್ವಹಣೆ ಕ್ರಮಗಳ ಕುರಿತು ರಾಜ್ಯ ಕಾಂಗ್ರೆಸ್ ಕಿಡಿ ಕಾರಿದ್ದು, ‘ಮಳೆಯಿಂದ ಉಂಟಾಗಿರುವ ಮನೆ ಹಾನಿಗೆ ಕೇವಲ 10 ಸಾವಿರ ರು. ಪರಿಹಾರ ಘೋಷಣೆ ಸಾಕೆ? ಪ್ರಾಣ ಕಳೆದುಕೊಂಡ ಜನ, ಜಾನುವಾರುಗಳಿಗೆ ಏನು ಪರಿಹಾರ ನೀಡಿದ್ದೀರಿ?’ ಎಂದು ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ‘ರಾಜ್ಯದಲ್ಲಿ ಮಳೆ ಹಾನಿಯಿಂದ ಜನರು ತತ್ತರಿಸುತ್ತಿದ್ದರೆ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ನಾಪತ್ತೆಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಆನ್‌ಲೈನ್ ಸಭೆಗಳಿಗೆ ಸೀಮಿತರಾಗಿದ್ದಾರೆ. ಹೀಗಾದರೆ ಜನರ ಕಷ್ಟಕೇಳುವವರಾರು?’ ಎಂದು ಪ್ರಶ್ನಿಸಿದೆ.
‘ರಾಜ್ಯದಲ್ಲಿ ಮಳೆ ಅಬ್ಬರದಿಂದ ಪ್ರವಾಹದ ಸ್ಥಿತಿ ಉಂಟಾಗಿದೆ. ಶೇ.40 ರಷ್ಟುಭ್ರಷ್ಟಾಚಾರ ನಡೆಸುವ ಬಿಜೆಪಿ ಸರ್ಕಾರಕ್ಕೆ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರದ ನೆರವು ಕೇಳಲು ಸಹ ಮೀನಾಮೇಷ ಎಣಿಸುತ್ತಿದೆ. ಈವರೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಇನ್ನೂ ಯಾಕೆ ಆಶ್ರಯ ಕೇಂದ್ರಗಳನ್ನು ತೆರೆದಿಲ್ಲ? ಮನೆ ಹಾನಿಗೆ ಕೇವಲ 10 ಸಾವಿರ ರು. ಪರಿಹಾರ ಘೋಷಿಸಿದ್ದಾರೆ. ಇದು ಸಾಕಾಗುತ್ತದೆಯೇ? ಪ್ರಾಣ ಕಳೆದುಕೊಂಡ ಜನ, ಜಾನುವಾರಿಗೆ ನೀಡಿದ ಪರಿಹಾರವೇನು?’ ಎಂದು ಕಿಡಿ ಕಾರಿದೆ.
ಕರ್ನಾಟಕದಲ್ಲಿ ಭಾರೀ ಮಳೆ: ಡಿಸಿ, ಸಿಇಒ ಜತೆ ಇಂದು ಸಿಎಂ ಸಭೆ
‘2019ರ ಪ್ರವಾಹ ಸಂದರ್ಭದಲ್ಲಿ ಸಂಪುಟವೇ ಇರಲಿಲ್ಲ. 2020ರ ಪ್ರವಾಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ತಿಕ್ಕಾಟದಿಂದ ಜನರನ್ನು ನಿರ್ಲಕ್ಷ್ಯ ಮಾಡಿದಿರಿ. 2021ರಲ್ಲಿ ಸಮರ್ಪಕ ನೆರೆ ಪರಿಹಾರ ನೀಡಲಿಲ್ಲ. ಇದೀಗ ಸಚಿವರಿದ್ದರೂ ಯಾರೊಬ್ಬರೂ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ಇದಕ್ಕೆ ಸರ್ಕಾರ ಯಾಕೆ ಬೇಕು?’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಪರಿಹಾರ ವಿತರಿಸಿದ ಸಚಿವ: ಕಡೆಗೂ ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಕೊಡಗಿಗೆ ಆಗಮಿಸಿ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಹಾನಿಯಾದ್ರೂ ಭೇಟಿ ನೀಡಿರಲಿಲ್ಲ. ಸಚಿವರು ಜಿಲ್ಲೆಗೆ ಭೇಟಿ ನೀಡದಿರುವುದಕ್ಕೆ ಸಾಕಷ್ಟುಆಕ್ರೋಶ ವ್ಯಕ್ತವಾಗಿತ್ತು. ಇದರ ನಡುವೆ ಸೋಮವಾರ ಜಿಲ್ಲೆಗೆ ಸಚಿವರು ಆಗಮಿಸಿದರು. ಕುಶಾಲನಗರ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿದರು. ಹಾರಂಗಿ ಜಲಾಶಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಲೆನಾಡಲ್ಲಿ ವ್ಯಾಪಕ ಮಳೆ: ಟಿಬಿ ಡ್ಯಾಂಗೆ ಒಂದೇ ದಿನ 5 ಟಿಎಂಸಿ ನೀರು..!
ಕುಶಾಲನಗರ ತಾಲೂಕಿನ 7ನೇ ಹೊಸಕೋಟೆ ಗ್ರಾಮದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದ ಕುಸಿದು ಹಾನಿಯಾಗಿರುವ ಮನೆ ಮಾಲೀಕರಿಗೆ ಸ್ಥಳದಲ್ಲೇ ಪರಿಹಾರ ಚೆಕ್ ವಿತರಿಸಿದರು. ಈ ವೇಳೆ ಶಾಸಕರಾದ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿ. ಪಂ. ಸಿಇಒ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
