* ಹಾನಿ, ಮುಂಜಾಗ್ರತೆ ಬಗ್ಗೆ ಮಾಹಿತಿ ಸಂಗ್ರಹ* ಮಳೆಪೀಡಿತ ಜಿಲ್ಲೆಗಳ ಅಧಿಕಾರಿ, ಮಂತ್ರಿಗಳು ಭಾಗಿ* ಮಳೆ ಮತ್ತು ಅದರಿಂದ ಉಂಟಾಗುವ ಹಾನಿ ಕುರಿತು ಮಾಹಿತಿ ಪಡೆದುಕೊಳ್ಳಲಿರುವ ಸಿಎಂ
ಬೆಂಗಳೂರು(ಜು.08): ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಸಂಭವಿಸಿದ ಹಾನಿ ಮತ್ತು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆಯುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳ ಜತೆ ಶುಕ್ರವಾರ ವಿಡಿಯೋ ಸಂವಾದ ನಡೆಸಲಿದ್ದಾರೆ.
ಇಂದು(ಶುಕ್ರವಾರ) ಮಧ್ಯಾಹ್ನ 2.30ಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದ ನಡೆಯಲಿದೆ. ಮಳೆಯಿಂದ ಹಾನಿಗೊಳಗಾಗಿರುವ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಸಿಇಒಗಳು, ಸಂಬಂಧಪಟ್ಟಸಚಿವರು, ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ಇತರೆ ಹಿರಿಯ ಅಧಿಕಾರಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕಂಗಾಲಾಗಿರುವ ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ, ಸುರಕ್ಷಿತ ಸ್ಥಳಕ್ಕೆ ತೆರಳಲು ಜನರಿಗೆ ಮನವಿ
ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮತ್ತು ಅದರಿಂದ ಉಂಟಾಗುವ ಹಾನಿ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಮಳೆಯಾಗಿದೆ? ಎಷ್ಟು ಹಾನಿಯಾಗಿದೆ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಅಲ್ಲದೇ, ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆದ ನಂತರ ಸೂಕ್ತ ನಿರ್ದೇಶನ ನೀಡಲಿದ್ದಾರೆ.
ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಬೆಳಗಾವಿ, ಬೀದರ್, ಕಲಬುರಗಿ, ಹಾವೇರಿ, ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ವರುಣನ ಆರ್ಭಟದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಾಕಷ್ಟುಮನೆಗಳು ಕುಸಿದಿದ್ದು, ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಎದುರಾಗಿದೆ. ಈ ಎಲ್ಲದರ ಕುರಿತು ಮುಖ್ಯಮಂತ್ರಿಗಳು ಶುಕ್ರವಾರ ನಡೆಯುವ ಸಭೆಯಲ್ಲಿ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲೂ ವರುಣನ ಅಬ್ಬರ, 91 ಮನೆಗಳಿಗೆ ಹಾನಿ, ಬೀಡುಬಿಟ್ಟ SDRF ತಂಡ
ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಯಲ್ಲಿನ ಮಳೆಯ ಅಬ್ಬರ ಮುಂದುವರಿದಿದ್ದು, ಮಳೆಯ ಜತೆಗೆ ಬಿರುಗಾಳಿಯೂ ಬೀಸುತ್ತಿದೆ. ಪರಿಣಾಮ ಜನತೆ ಕಂಗಲಾಗಿದ್ದಾರೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಚ್ ಘೋಷಿಸಿದರೆ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಆರೆಂಜ್ ಅಲರ್ಚ್ ನೀಡಲಾಗಿದೆ. ಇನ್ನು, ಹಾಸನ, ಹಾವೇರಿ, ಬೆಳಗಾವಿ, ಧಾರವಾಡ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗೆ ಯಲ್ಲೋ ಅಲರ್ಚ್ ಪ್ರಕಟಿಸಲಾಗಿದೆ.
ನದಿಪಾತ್ರ ಮತ್ತು ತಗ್ಗುಪ್ರದೇಶದಲ್ಲಿರುವ ಜನರಿಗೆ ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತಗಳು ಸೂಚನೆ ನೀಡಿವೆ. ಜನರ ಸುರಕ್ಷತೆಗಾಗಿ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು, ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಂತೆ ಸರ್ಕಾರ ಸೂಚಿಸಿದೆ. ರಸ್ತೆ ಬದಿಯಲ್ಲಿ ಮಣ್ಣು ಕುಸಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.
