Kodagu: ಬಿಜೆಪಿಯಲ್ಲಿ ಸಾಮಾನ್ಯರಿಗೂ ಟಿಕೆಟ್, ಕಾಂಗ್ರೆಸ್‌ನಲ್ಲಿ ಸೂಟ್ ಕೇಸ್ ಕೊಡುವವರಿಗೆ ಮಾತ್ರ ಟಿಕೆಟ್
ಬಿಜೆಪಿ ಮನೆಯಲ್ಲಿ ವಾಸ ಮಾಡುತ್ತಿರುವ ಸಾಮಾನ್ಯರಿಗೆ ಟಿಕೆಟ್ ಕೊಡುತ್ತದೆ. ಆದರೆ ಕಾಂಗ್ರೆಸ್ ನಲ್ಲಿ ಸೂಟ್ ಕೇಸ್ ಕೊಡುವವರಿಗೆ ಮಾತ್ರ ಟಿಕೆಟ್ ಸಿಗುತ್ತದೆ ಎಂದು ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಹೇಳಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.24): ಭಾರತೀಯ ಜನತಾ ಪಕ್ಷ ಜನತಾ ಮನೆಯಲ್ಲಿ ವಾಸ ಮಾಡುತ್ತಿರುವ ಸಾಮಾನ್ಯರಿಗೆ ಟಿಕೆಟ್ ಕೊಡುತ್ತದೆ. ಆದರೆ ಕಾಂಗ್ರೆಸ್ ನಲ್ಲಿ ಸೂಟ್ ಕೇಸ್ ಕೊಡುವವರಿಗೆ ಮಾತ್ರ ಟಿಕೆಟ್ ಸಿಗುತ್ತದೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಹೇಳಿದ್ದಾರೆ. ಮಡಿಕೇರಿ ಕ್ಷೇತ್ರದಿಂದ ಆರನೇ ಬಾರಿ ಸ್ಪರ್ಧೆ ಮಾಡುತ್ತಿರುವ ಅಪ್ಪಚ್ಚು ರಂಜನ್ ಅವರ ಪರವಾಗಿ ಸೋಮವಾರಪೇಟೆಯಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.ಅಪ್ಪಚ್ಚು ರಂಜನ್ ಅಪ್ಪಟ ಅಪರಂಜಿ ಎಂದ ರಾಮಸ್ವಾಮಿ, ಬಿಜೆಪಿ ಇಂತಹವರಿಗಷ್ಟೇ ಟಿಕೆಟ್ ಕೊಡುತ್ತದೆ ಎಂದರು.
ಸುಳ್ಯದಲ್ಲಿ ಬಿಜೆಪಿ ಭಗೀರಥಿ ಮುರುಳ್ಯಯವರಿಗೆ ಟಿಕೆಟ್ ನೀಡಿರುವುದನ್ನು ಪ್ರಸ್ತಾಪಿಸಿದ ರಾಮಸ್ವಾಮಿ, ಜನತಾ ಮನೆಯಲ್ಲಿ ವಾಸಿಸುತ್ತಿರುವ ಅಭ್ಯರ್ಥಿ ಅತ್ಯಂತ ಸರಳ, ಸಜ್ಜನಿಕೆಯ ಮಹಿಳೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಕೆಲಸ-ಕಾರ್ಯಗಳಿಂದ ನಾನು ಪ್ರಭಾವಿತನಾಗಿ ಬಿಜೆಪಿ ಸೇರಿರುವುದಾಗಿ ತಿಳಿಸಿದರು.
ನರೇಂದ್ರ ಮೋದಿಯವರು ವಿಶ್ವನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಾಕಿಸ್ತಾನಿಗಳೇ ಮೋದಿಯವರನ್ನು ಹೊಗಳುತ್ತಿದ್ದಾರೆ. ಅವರಿಗೆ ಮೋದಿಯವರಂತಹ ಪ್ರಧಾನಿ ಬೇಕು ಎನ್ನುತ್ತಿದ್ದಾರೆ. ಇಡೀ ವಿಶ್ವದ ದೇಶಗಳೆಲ್ಲವೂ ಭಾರತದತ್ತ ತಿರುತಿರುಗಿ ನೋಡುತ್ತಿವೆ. ಇಂತಹ ಸಂಧರ್ಭದಲ್ಲಿ ಬಿಜೆಪಿ ಮಾತ್ರ ಭರವಸೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು ಎಂದರು.
ಮೇ.3ರಂದು ಮುಲ್ಕಿಗೆ ಪ್ರಧಾನಿ ಮೋದಿ, ಮೇ.6ರಂದು ದಕ್ಷಿಣ ಕನ್ನಡಕ್ಕೆ ಯೋಗಿ: ಬಿಜೆಪಿ ಮೆಗಾ
ಮಡಿಕೇರಿ ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್ ಬಿಟ್ಟರೆ ಅರ್ಹತೆ ಇರುವ ಯಾವ ಅಭ್ಯರ್ಥಿಯೂ ಕಣದಲ್ಲಿ ಇಲ್ಲ ಎಂದ ರಾಮಸ್ವಾಮಿ ರಂಜನ್ ಕೈಗೆಟಕುವ ಶಾಸಕ ಎಂದರು. ಬಸವಾಪಟ್ಟಣದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ ಮಡಿಕೇರಿ ಕ್ಷೇತ್ರದ ಜನ ಸುಖ, ಶಾಂತಿ, ನೆಮ್ಮದಿಯಿಂದ ಬಾಳಬೇಕಾದರೆ ಅಪ್ಪಚ್ಚು ರಂಜನ್ ಮತ್ತೆ ಆಯ್ಕೆಯಾಗಿ ಬರಬೇಕು, ಆದ್ದರಿಂದ ನಿಮ್ಮ ಮತಗಳನ್ನು ದಾನವಾಗಿ ಕೊಡಿ ಎಂದು ಕೇಳಿಕೊಂಡು ಬಂದಿದ್ದೇನೆ ಎಂದರು.
ಜಗದೀಶ್ ಶೆಟ್ಟರ್‌ಗೆ ಯಾಕೆ ಟಿಕೆಟ್ ನೀಡಿಲ್ಲವೆಂದು ಗೊತ್ತು, ಅದನ್ನು ಬಹಿರಂಗಪಡಿಸಲ್ಲ: ಅಮಿತ್ ಶಾ
ಬಹಿರಂಗ ಸಭೆಯಲ್ಲಿ ಮಡಿಕೇರಿ ಶಾಸಕ, ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಪರ ಮತ ಯಾಚಿಸಿದ ಸ್ವಾಮೀಜಿಗಳು ಶಾಸಕರ ಮರು ಆಯ್ಕೆ ಪ್ರಾಮಾಣಿಕತೆಗೆ ಸಲ್ಲುವ ಗೆಲುವು ಎಂದರು. ಅಪ್ಪಚ್ಚು ರಂಜನ್ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲದ ವ್ಯಕ್ತಿ. ಬಿಜೆಪಿ ಒಂದು ಶಕ್ತಿ. ಈ ವ್ಯಕ್ತಿ ಮತ್ತು ಶಕ್ತಿ ಮತ್ತೆ ಒಂದಾಗಿ ವಿಜಯ ಸಾಧಿಸಬೇಕಿದೆ ಎಂದರು. ಕೇವಲ ಹತ್ತು ವರ್ಷಗಳ ಹಿಂದೆ ನಾನು ಭಾರತೀಯ ಎಂದು ಹೇಳಿಕೊಳ್ಳುವಂತಹ ಪರಿಸ್ಥಿತಿ ಇರಲಿಲ್ಲ. ಈಗ ನರೇಂದ್ರ ಮೋದಿಯವರು ನಾನು ಭಾರತೀಯ ಎಂದು ಎದೆ ತಟ್ಟಿ ಹೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಭಾರತ ವಿಶ್ವಗುರು ಆಗುತ್ತಿದೆ ಎಂದರು. ಶಾಸಕ ಅಪ್ಪಚ್ಚು ರಂಜನ್, ಅರಕಲಗೂಡು ಮಾಜಿ ಶಾಸಕ ಎ. ಟಿ. ರಾಮಸ್ವಾಮಿ, ಎಲ್ಲಾ ಬಿಜೆಪಿ ಸ್ಥಳೀಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.