ಬಿಜೆಪಿ ಟಿಕೆಟ್‌ ವಂಚಿತ ಚಿಕ್ಕನಗೌಡರ್‌ ಭೇಟಿ, ಕಾಂಗ್ರೆಸ್‌ ಸೇರುವ ಬಗ್ಗೆ ಚರ್ಚೆ, ಉಮಾಶ್ರೀ, ರಾಮಪ್ಪ ಅವರಿಂದಲೂ ಟಿಕೆಟ್‌ಗೆ ಲಾಬಿ. 

ಬೆಂಗಳೂರು(ಏ.14):  ಬಿಜೆಪಿ ಟಿಕೆಟ್‌ ವಂಚಿತರಾಗಿರುವ ಕುಂದಗೋಳದ ಬಿಜೆಪಿ ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡರ ಸೇರಿದಂತೆ ಹಲವು ಟಿಕೆಟ್‌ ಆಕಾಂಕ್ಷಿಗಳು ಗುರುವಾರ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಬಿಜೆಪಿ ಟಿಕೆಟ್‌ ವಂಚಿತರಾದ ಸಿದ್ದನಗೌಡ ಈಶ್ವರಗೌಡ ಚಿಕ್ಕನಗೌಡರ (ಎಸ್‌.ಐ.ಚಿಕ್ಕನಗೌಡರ) ಅವರು ಕಾಂಗ್ರೆಸ್‌ ಪಕ್ಷದ ಸಂಪರ್ಕದಲ್ಲಿದ್ದರು. ಗುರುವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನವಲಗುಂದ: ಟಿಕೆಟ್ ಘೋಷಣೆಗೂ ಮುನ್ನವೇ ಪ್ರಚಾರಕ್ಕಿಳಿದ ಕೋನರೆಡ್ಡಿ..!

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸಂಬಂಧಿಯಾಗಿರುವ ಚಿಕ್ಕನಗೌಡ ಅವರು 2018, 2019ರ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಕಾಂಗ್ರೆಸ್‌ ವಿರುದ್ಧ ಸೋತಿದ್ದರು. ಈ ಬಾರಿ ಚಿಕ್ಕನಗೌಡರ ಅವರಿಗೆ ಪೂರಕ ವಾತಾವರಣ ಇದ್ದ ಹೊರತಾಗಿಯೂ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಇನ್ನು ಕಾಂಗ್ರೆಸ್‌ ಸಮೀಕ್ಷೆಯಲ್ಲಿ ಕುಸುಮಾ ಶಿವಳ್ಳಿಗೆ ಈ ಬಾರಿ ಚುನಾವಣಾ ಕಣ ಕಷ್ಟವಿದೆ ಎಂಬ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕನಗೌಡರ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡುವ ಬಗ್ಗೆ ಚರ್ಚೆಯಾಗಿದೆ. ಆದರೆ, ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.

ಉಮಾಶ್ರೀ ಅವರಿಂದ ಲಾಬಿ:

ಪಕ್ಷದ ಟಿಕೆಟ್‌ ಇನ್ನೂ ಖಚಿತವಾಗದ ಹಿನ್ನೆಲೆಯಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರು ಗುರುವಾರವೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಟಿಕೆಟ್‌ಗಾಗಿ ಲಾಬಿ ನಡೆಸಿದರು. ಹರಿಹರ ಶಾಸಕ ರಾಮಪ್ಪ ಅವರೂ ಟಿಕೆಟ್‌ಗಾಗಿ ಲಾಬಿ ನಡೆಸುವಂತೆ ಮನವಿ ಮಾಡಿದ್ದಾರೆ.

ನಾಡಿದ್ದು ಕರ್ನಾಟಕಕ್ಕೆ ರಾಹುಲ್‌ ಗಾಂಧಿ: ಕೋಲಾರದಲ್ಲಿ ಜೈ ಭಾರತ್‌ ರ‍್ಯಾಲಿ

ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಎಸ್‌.ರಾಮಪ್ಪ, ಮೂರನೇ ಪಟ್ಟಿಯಲ್ಲಿ ನನಗೆ ಟಿಕೆಟ್‌ ಖಚಿತ. ಕೆಪಿಸಿಸಿ ಅಧ್ಯಕ್ಷರು, ಸುರ್ಜೆವಾಲಾ ಹಾಗೂ ಸಿದ್ದರಾಮಯ್ಯ ಮೂರೂ ಮಂದಿ ಕೆಲಸ ಮಾಡುವಂತೆ ತಿಳಿಸಿದ್ದಾರೆ. ಹೀಗಾಗಿ ಟಿಕೆಟ್‌ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.