Asianet Suvarna News Asianet Suvarna News

Karnataka Politics: ಒಕ್ಕಲಿಗರ ಮತ ಸೆಳೆಯಲು ಕಾಂಗ್ರೆಸ್‌ ತಂತ್ರಗಾರಿಕೆ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರು ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ, ಒಕ್ಕಲಿಗ ಮತದಾರರನ್ನು ಸೆಳೆಯುವುದು ಹಾಗೂ ಒಕ್ಕಲಿಗರ ಸಮಾವೇಶ ನಡೆಸುವ ಕುರಿತು ಗುರುವಾರ ರಾತ್ರಿ ಕಾಂಗ್ರೆಸ್‌ನ ಒಕ್ಕಲಿಗ ನಾಯಕರು ಮಹತ್ವದ ಸಭೆ ನಡೆಸಿದರು. 

Congress strategy to get the votes of Vokkaligas gvd
Author
First Published Dec 16, 2022, 10:04 AM IST

ಬೆಂಗಳೂರು (ಡಿ.16): ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರು ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ, ಒಕ್ಕಲಿಗ ಮತದಾರರನ್ನು ಸೆಳೆಯುವುದು ಹಾಗೂ ಒಕ್ಕಲಿಗರ ಸಮಾವೇಶ ನಡೆಸುವ ಕುರಿತು ಗುರುವಾರ ರಾತ್ರಿ ಕಾಂಗ್ರೆಸ್‌ನ ಒಕ್ಕಲಿಗ ನಾಯಕರು ಮಹತ್ವದ ಸಭೆ ನಡೆಸಿದರು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ಎನ್‌. ಚೆಲುವರಾಯಸ್ವಾಮಿ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್‌ ನಾಯಕರು ಹಾಗೂ ಇಬ್ಬರು ಜೆಡಿಎಸ್‌ ಶಾಸಕರೂ (ಪಕ್ಷದಿಂದ ಉಚ್ಚಾಟಿತ) ಭಾಗವಹಿಸಿದ್ದರು.

ಒಕ್ಕಲಿಗರ ಮೀಸಲಾತಿ ಹೆಚ್ಚಳದ ಬೇಡಿಕೆ ಬಗ್ಗೆ ಯಾವ ರೀತಿಯಲ್ಲಿ ಸ್ಪಂದಿಸಬೇಕು. ಜೆಡಿಎಸ್‌ನ ಸಾಂಪ್ರದಾಯಿಕ ಮತಗಳಂತಾಗಿರುವ ಒಕ್ಕಲಿಗ ಮತಗಳನ್ನು ಈ ಬಾರಿಯ ಚುನಾವಣೆಯಲ್ಲಿ ಹೇಗೆ ಸೆಳೆಯಬೇಕು. ಒಕ್ಕಲಿಗ ಪ್ರಾಬಲ್ಯವಿರುವ ಮಂಡ್ಯ, ಹಾಸನದಂತಹ ಜಿಲ್ಲೆಗಳಲ್ಲಿ ಯಾವ ರೀತಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವಂತೆ ಮಾಡಬೇಕು ಎಂಬ ಬಗ್ಗೆ ಚರ್ಚೆಯಾಗಿದೆ. ಇದೇ ವೇಳೆ ಕಾಂಗ್ರೆಸ್‌ನ ಒಕ್ಕಲಿಗರ ಸಮಾವೇಶ ನಡೆಸುವ ಮೂಲಕ ಒಕ್ಕಲಿಗರ ಸಂಘಟಿಸುವ ಕುರಿತೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಓಲೈಕೆಗಾಗಿ ಉಗ್ರನ ಪರ ಡಿಕೆಶಿ ವಕಾಲತ್ತು: ಸಚಿವ ಆರಗ ಜ್ಞಾನೇಂದ್ರ

ಸಭೆ ಆರಂಭಕ್ಕೂ ಮೊದಲು ಮಾತನಾಡಿದ ಚೆಲುವರಾಯಸ್ವಾಮಿ, ಚುನಾವಣೆ ಹತ್ತಿರ ಬರುತ್ತಿದ್ದು ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಸಮುದಾಯದ ಮತಗಳನ್ನು ಸೆಳೆಯಬೇಕಿದೆ. ಈ ನಿಟ್ಟಿನಲ್ಲಿ ರಾಜಕೀಯವಾಗಿ ಯಾವ ನಡೆ ಅನುಸರಿಸಬೇಕು ಎಂಬ ಬಗ್ಗೆ ಚರ್ಚೆಯಾಗಲಿದೆ. ಸಹಜವಾಗಿ ಒಕ್ಕಲಿಗ ಮೀಸಲಾತಿ ಬಗ್ಗೆಯೂ ಚರ್ಚೆಯಾಗಲಿದೆ. ಕೆಲವು ಕಡೆ ಜಾತಿ ಆಧಾರಿತವಾಗಿಯೇ ಟಿಕೆಟ್‌ ನೀಡಬೇಕಾಗುತ್ತದೆ. ಆದರೆ, ಗೆಲುವು ಮುಖ್ಯ. ಕಳೆದ ಬಾರಿ ಮಂಡ್ಯ ಜಿಲ್ಲೆಯಲ್ಲಿ 7 ಸ್ಥಾನ ಕಳೆದುಕೊಂಡಿದ್ದೆವು. ಬಳಿಕ ಮಂಡ್ಯ ರಾಜಕಾರಣ ಬದಲಾಗಿದೆ. ಇದರ ಸದುಪಯೋಗ ಹೇಗೆ ಪಡೆಯಬೇಕು ಎಂಬ ಬಗ್ಗೆ ಚರ್ಚಿಸುತ್ತೇವೆ ಎಂದರು.

ಎಚ್‌.ಡಿ. ದೇವೇಗೌಡರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಒಕ್ಕಲಿಗರ ಮೀಸಲಾತಿ ಹೆಚ್ಚಳದ ಬಗ್ಗೆ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಅವರು ಪ್ರಧಾನಮಂತ್ರಿಗಳಾಗಿ ಕೆಲಸ ಮಾಡಿದವರು. ಮೀಸಲಾತಿ ಯಾವಾಗ ಕೊಡಬೇಕು, ಕೊಡಬಾರದು ಹಾಗೂ ಕೊಡಲು ಅವಕಾಶವಿದೆಯೇ ಎಂಬ ಬಗ್ಗೆ ಅವರಿಗೆ ಅನುಭವವಿದೆ. ಅವರು ಚುನಾವಣೆಗಾಗಿ ಹೋಗಿದ್ದಾರಾ? ನಿಜವಾಗಿಯೂ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ಅವರ ಮೇಲೆ ಗೌರವವಿದೆ’ ಎಂದು ಹೇಳಿದರು. ಸಭೆಯಲ್ಲಿ ಮಾಜಿ ಸಚಿವರಾದ ಎಂ. ಕೃಷ್ಣಪ್ಪ, ಕಿಮ್ಮನೆ ರತ್ನಾಕರ್‌, ಟಿ.ಬಿ. ಜಯಚಂದ್ರ, ಸಂಸದ ಡಿ.ಕೆ. ಸುರೇಶ್‌, ಮಾಜಿ ಶಾಸಕ ಪ್ರಿಯಾ ಕೃಷ್ಣ, ಪರಿಷತ್‌ ಸದಸ್ಯರಾದ ಮಧು ಮಾದೇಗೌಡ, ದಿನೇಶ್‌ಗೂಳಿಗೌಡ ಸೇರಿದಂತೆ ಹಲವರು ಹಾಜರಿದ್ದರು.

Karnataka Politics: ಒಗ್ಗಟ್ಟು ತೋರಿ ಮುನಿಸು ಮುಚ್ಚಿದ ಬಿಜೆಪಿ ದಿಗ್ಗಜರು

ಬಜೆಟ್‌ ಅಧಿವೇಶನದ ಬಳಿಕ ರಾಜೀನಾಮೆ: ಜೆಡಿಎಸ್‌ನವರು ನನ್ನ ಕ್ಷೇತ್ರಕ್ಕೆ ಬಂದು ನನ್ನ ವಿರುದ್ಧವೇ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಹೀಗಾಗಿ ನಾನು ಎಲ್ಲಿಗೆ ಬೇಕಾದರೂ ಹೋಗಬಹುದು. ಬಜೆಟ್‌ ಅಧಿವೇಶನದ ಬಳಿಕ ಶಾಸಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗುಬ್ಬಿ ಶಾಸಕ ಶ್ರೀನಿವಾಸ್‌ ಹೇಳಿದ್ದಾರೆ. ಕಾಂಗ್ರೆಸ್‌ನ ಒಕ್ಕಲಿಗ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ಅವರು, ಜೆಡಿಎಸ್‌ ಜತೆಗಿನ ಮನವೊಲಿಕೆ ಪ್ರಯತ್ನ ಮುಗಿದ ಅಧ್ಯಾಯ. ಒಕ್ಕಲಿಗ ಸಮುದಾಯದ ನಾಯಕರ ಸಭೆ ಇದೆ ಬನ್ನಿ ಎಂದು ಕರೆದಿದ್ದರು. ಹೀಗಾಗಿ ಸಭೆಗೆ ಬಂದಿದ್ದೇನೆ. ನಾನು ಮುಂದಿನ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಬಹುದು ಎಂದು ಹೇಳಿದರು.

Follow Us:
Download App:
  • android
  • ios