ಬೆಂಗಳೂರು, (ಮಾ.26): ಸಾಕ್ಷ್ಯವನ್ನು ಮುಚ್ಚಿಡುವುದು ಕೂಡ ಅಪರಾಧ. ಹಾಗಾಗಿ ರಮೇಶ್ ಜಾರಕಿಹೊಳಿ ತಮ್ಮ ಬಳಿ ಇರುವ ಬೆಚ್ಚಿಬೀಳುವ ಸಾಕ್ಷ್ಯವನ್ನು ಬಹಿರಂಗಪಡಿಸಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 

ಇದರ ಹಿಂದೆ ದೊಡ್ಡ ಪ್ರಮಾಣದ ಷಡ್ಯಂತ್ರ ನಡೆಯುತ್ತಿದೆ. ಈಗ ನನ್ನ ಜೇಬಿನಲ್ಲಿಯೇ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿರುವುದರ ಕುರಿತು ಸಾಕ್ಷಿ ಇದೆ. ಷಡ್ಯಂತ್ರ ನಡೆಯುತ್ತಿರುವುರ ಕುರಿತು ಸಾಕ್ಷಿ ಬಿಡುಗಡೆ ಮಾಡಿದರೆ ನೀವು ಸಹ ದಂಗಾಗುತ್ತೀರಿ ಎಂದು ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. 

ಜೇಬಲ್ಲೇ ದಾಖಲೆ ಇದೆ, ತೆಗೆದರೆ ಶಾಕ್‌ ಆಗುತ್ತೆ: ರಮೇಶ್ ಜಾರಕಿಹೊಳಿ 'ಹೊಸ ಬಾಂಬ್'!

ಇನ್ನು ಈ ಬಗ್ಗೆ ನಗರದಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಪ್ರಸ್ತಾಪಿಸಿರುವ ಮಹಾನಾಯಕರು ಯಾರು ಎಂದು ಗೊತ್ತಿಲ್ಲ. ಕಾಂಗ್ರೆಸ್‍ನಲ್ಲಿ ತುಂಬಾ ಜನ ನಾಯಕರಿದ್ದಾರೆ. ಬಿಜೆಪಿಯಲ್ಲೂ ಮಹಾನಾಯಕರಿದ್ದಾರೆ. ಸುಮ್ಮನೆ ಗುಮ್ಮ ಬಿಡಬಾರದು. ಸತ್ಯವನ್ನು ಬಹಿರಂಗಪಡಿಸಬೇಕೆಂದರು.

ತಮ್ಮ ಬಳಿ ಮಾಹನಾಯಕ ಬೆಚ್ಚಿಬೀಳುವ ಸಾಕ್ಷ್ಯಗಳಿವೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅದನ್ನು ಕೂಡಲೇ ಬಹಿರಂಗ ಮಾಡಲಿ. ಸಾಕ್ಷ್ಯ ಮುಚ್ಚಿಡುವುದೂ ಅಪರಾಧವಾಗುತ್ತದೆ ಎಂದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟ ಪ್ರಕರಣದಲ್ಲಿ ಯುವತಿ ವಿಡಿಯೋ ಮೂಲಕ ಹೇಳಿಕೆ ನೀಡುತ್ತಿದ್ದರು. ಎಲ್ಲೋ ಮರೆಯಲ್ಲಿ ನಿಂತು ಹೇಳಿಕೆ ನೀಡುವುದು ಸರಿಯಲ್ಲ. ನೇರವಾಗಿ ಪೊಲೀಸರ ಮುಂದೆ ಹಾಜರಾಗಿ ಸತ್ಯ ಹೇಳಿದರೆ ಅದರ ಗೌರವ ಹೆಚ್ಚುತ್ತದೆ ಎಂದು ನಾನು ಸಲಹೆ ನೀಡಿದ್ದೆ. ಯುವತಿ ಮತ್ತು ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜತೆ ದೂರವಾಣಿ ಮೂಲಕ ಮಾತನಾಡಿ ಸಲಹೆ ನೀಡಿದ್ದೇನೆ. ರಾಜ್ಯದ ಪ್ರತಿಯೊಬ್ಬರಿಗೂ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಬೇಕೆಂದು ಹೇಳಿದ ಬಳಿಕ ಸಿದ್ದರಾಮಯ್ಯ ಅವರ ಮೇಲಿದ್ದ ಗೌರವ ಕಡಿಮೆಯಾಗಿದೆ ಎಂದು ರಮೇಶ್ ಜಾರಕಿಹೊಳಿ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಸತ್ಯ ಹೇಳುವುದರಿಂದ ಗೌರವ ಕಡಿಮೆಯಾಗುವುದಾದರೆ ನಾನೇನು ಮಾಡಲು ಸಾಧ್ಯವಿಲ್ಲ. ಪ್ರತಿಪಕ್ಷದ ನಾಯಕನಾಗಿ, ವಕೀಲನಾಗಿ ಸತ್ಯ ಹೇಳುವುದು ನನ್ನ ಕರ್ತವ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.