ಬೆಂಗಳೂರು(ಮಾ.26): ನನ್ನ ಜೇಬಿನಲ್ಲಿರುವ ದಾಖಲೆಗಳನ್ನು ಹೊರಗೆ ತೆಗೆದರೆ ಎಲ್ಲರಿಗೂ ಶಾಕ್‌ ಆಗಲಿದೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಹತ್ತು ಸಿ.ಡಿ. ಬರಲಿ. ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ನನ್ನ ಬಳಿ ಹಲವು ಸಾಕ್ಷ್ಯಗಳಿವೆ. ಸೂಕ್ತ ಕಾಲಕ್ಕೆ ಎಲ್ಲವೂ ಹೊರ ಬರಲಿದೆ. ಪ್ರಸ್ತುತ ನನ್ನ ಜೇಬಿನಲ್ಲಿಯೇ ಆ ದಾಖಲೆ ಇದೆ. ದಾಖಲೆ ಹೊರಗೆ ತೆಗೆದರೆ ಎಲ್ಲರಿಗೂ ಶಾಕ್‌ ಆಗಲಿದೆ ಎಂದರು.

ಕಾಂಗ್ರೆಸ್‌ ನಾಯಕರ ಸಹಕಾರವನ್ನು ಯುವತಿ ಕೇಳುತ್ತಿದ್ದಾರೆ. ಯುವತಿ ಯಾರ ಕೈಗೊಂಬೆಯಾಗಿದ್ದಾಳೆ ಎಂದು ಗೊತ್ತಾಗುತ್ತಿದೆ. ನಾನು ತಪ್ಪು ಮಾಡಿಲ್ಲ. ಷಡ್ಯಂತ್ರ ಮಾಡಿರುವವರನ್ನು ಜೈಲಿಗೆ ಕಳುಹಿಸುವ ತನಕ ಬಿಡುವುದಿಲ್ಲ. ದೇವರ ಆಶೀರ್ವಾದದಿಂದ ದೋಷ ಮುಕ್ತನಾಗಿ ಪ್ರಕರಣದಿಂದ ಹೊರ ಬರುತ್ತೇನೆ ಎಂದು ಹೇಳಿದರು.

ಮಹಾ ನಾಯಕನ ಹೆಸರು ಉಪಯೋಗಿಸಿ ಇತರರು ಷಡ್ಯಂತ್ರ ಎಸಗಿರುವ ಸಾಧ್ಯತೆ ಕೂಡ ಇದೆ. ಯಾರೊಬ್ಬರ ಹೆಸರನ್ನೂ ಹೇಳಲು ಸಾಧ್ಯವಿಲ್ಲ. ಉನ್ನತ ಸ್ಥಾನದಲ್ಲಿರುವವರ ಹೆಸರನ್ನು ಏಕಾಏಕಿ ಹೇಳಬಾರದು. ನಾನು ಹೇಳಿದ ಮೇಲೆ ಅದು ಸುಳ್ಳು ಆಗಬಾರದು. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ನನಗೆ ಅಪಾರ ಗೌರವ ಇದೆ. ಅತ್ಯಾಚಾರ ಪ್ರಕರಣದಡಿ ದೂರು ದಾಖಲಿಸಿ ತನಿಖೆ ನಡೆಸುವಂತೆ ವಿಧಾನಸಭೆಯಲ್ಲಿ ಆಗ್ರಹಿಸಿರುವುದು ಅಚ್ಚರಿ ತರಿಸಿದೆ. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದು ಮಾರ್ಮಿಕವಾಗಿ ಹೇಳಿದರು.

ಕಾಂಗ್ರೆಸ್‌ ನಾಯಕರ ಸಹಕಾರವನ್ನು ಯುವತಿ ಕೇಳುತ್ತಿದ್ದಾರೆ. ಯುವತಿ ಯಾರ ಕೈಗೊಂಬೆಯಾಗಿದ್ದಾಳೆ ಎಂದು ಗೊತ್ತಾಗುತ್ತಿದೆ. ನಾನು ತಪ್ಪು ಮಾಡಿಲ್ಲ. ಷಡ್ಯಂತ್ರ ಮಾಡಿರುವವರನ್ನು ಜೈಲಿಗೆ ಕಳುಹಿಸುವ ತನಕ ಬಿಡುವುದಿಲ್ಲ.

- ರಮೇಶ್‌ ಜಾರಕಿಹೊಳಿ, ಮಾಜಿ ಸಚಿವ