ಬೆಂಗಳೂರು[ಜ.03]  ದೋಸ್ತಿ ಸಂಪುಟದಲ್ಲಿದ್ದ ಸಚಿವ ಸ್ಥಾನ ಈಗಾಗಲೇ ಕೈತಪ್ಪಾಗಿದೆ.. ಆಪ್ತ ಶಾಸಕರು ಕೈಕೊಡ್ತಿದ್ದಾರೆ.. ಮುಂದೇನು ಮಾಡಬೇಕೋ ಎಂಬ ದಾರಿಯ ಬಾಗಿಲು ಮುಚ್ಚಿಯಾಗಿದೆ. ಇದೇ ಕೋಪದ ಕಡಲಲ್ಲಿ ಮುಳುಗಿ ಏಳುತ್ತಿದ್ದಾರೆ ರಮೇಶ್ ಜಾರಕಿಹೊಳಿ. ಆದರೆ ತಮ್ಮ ಕೋಪವನ್ನೆಲ್ಲ ಮಾಧ್ಯಮದವರ ಮೇಲೆ ತೋರಿಸಿದ್ದಾರೆ.

10 ದಿನಗಳಿಂದ ನಾಪತ್ತೆಯಾಗಿ, ನಿನ್ನೆಯಷ್ಟೇ ಪ್ರತ್ಯಕ್ಷ್ಯವಾಗಿ, ಇಂದು ಮಾಧ್ಯಮಗಳ ಎದುರು ಬಂದಿದ್ದ ರಮೇಶ್ ಜಾರಕಿಹೊಳಿ, ವಿನಾಕಾರಣ ನನಗಾಗಿ ಕಾಯಬೇಡಿ.. ನಾಲ್ಕು ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ತೀನಿ  ಎಂದರು.

ನಾಪತ್ತೆಯಾಗಿದ್ದ ರಮೇಶ್ ಜಾರಕಿಹೊಳಿ ಎಲ್ಲಿದ್ದರು?

ಇನ್ನು ರಮೇಶ್ ಜಾರಕಿಹೊಳಿ ಸಾಹೇಬ್ರಿಗೆ ಕೇಳೋದಕ್ಕೆ ಒಂದಿಷ್ಟು ಪ್ರಶ್ನೆಗಳಿವೆ. 14 ಸಂಪುಟ ಸಭೆಗಳಿಗೆ ಸಾಹಾಕಾರರು ಹೋಗ್ಲಿಲ್ಲ.. ಅದಕ್ಕೆ ನಾವೇನ್ ಮಾಡ್ಬೇಕು ಹೇಳಿ? ಸಚಿವ ಸ್ಥಾನ ಸಿಕ್ಕಿತ್ತಲ್ವಾ? ಕೆಲಸ ಯಾಕ್ ಮಾಡ್ಲಿಲ್ಲ..? ಹೆಬ್ಬಾಳ್ಕರ್ ಜತೆ ವೈಯಕ್ತಿಕ ಪ್ರತಿಷ್ಠೆಗೆ ಬಿದ್ದು ಕೆಲಸ ಮಾಡಲಿಲ್ವಲ್ಲ ಅದ್ಕೆ ಏನ್ ಹೇಳ್ಬೇಕು?ಮೂರ್ನಾಲ್ಕು ದಿನಗಳಲ್ಲಿ ರಾಜೀನಾಮೆ ಕೊಡ್ತೀನಿ ಎಂದಿದ್ದು ನೀವಾ.. ನಾವಾ..? ಕಣ್ತಪ್ಪಿಸಿ ಓಡಾಡೋದ್ಯಾಕೆ..? ಬಚ್ಚಿಟ್ಟುಕೊಳ್ಳುವಂತದ್ದು ಏನಿದೆ? ಮಾಧ್ಯಮದ ಪ್ರಶ್ನೆಗೆ ಸಾಹೇಬರು ಉತ್ತರಿಸುತ್ತಾರೋ ಗೊತ್ತಿಲ್ಲ.

ರಮೇಶ್ ಜಾರಕಿಹೊಳಿಯವ್ರನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ನಾನಾ ತಂತ್ರ ಹೆಣೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ಸತೀಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾತಾಡಿದ ಗುಂಡೂರಾವ್, ಅವ್ರು ನೇರವಾಗಿ ಬಂದು ಮಾತಾಡ್ಬೇಕಲ್ವಾ ಅಂದಿದ್ದಾರೆ. ಒಟ್ಟಾರೆ, ಕಾಂಗ್ರೆಸ್ ಬಂಡಾಯದ ಕುದುರೆ ಅರ್ಥಾತ್ ರಮೇಶ್ ಜಾರಕಿಹೊಳಿ ಬಂಡಾಯದ ಕಥನ ಎಂದೂ ಮುಗಿಯದ ಧಾರಾವಾಹಿಯಾಗಿ ಬದಲಾಗಿದೆ.