ಕಾಂಗ್ರೆಸ್‌ ಪಕ್ಷದ ಆಶ್ವಾಸನೆಗಳು ಮತ್ತು ಗ್ಯಾರಂಟಿಗಳು ಆಮ್‌ ಆದ್ಮಿ ಪಕ್ಷದ ಶೇಡಕ 90 ನಕಲು ಎಂದು ರಾಜ್ಯ ಆಪ್‌ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಬ್ರಿಜೇಶ್‌ ಕಾಳಪ್ಪ ವ್ಯಂಗ್ಯವಾಡಿದ್ದಾರೆ. 

ಬೆಂಗಳೂರು (ಮೇ.28): ಕಾಂಗ್ರೆಸ್‌ ಪಕ್ಷದ ಆಶ್ವಾಸನೆಗಳು ಮತ್ತು ಗ್ಯಾರಂಟಿಗಳು ಆಮ್‌ ಆದ್ಮಿ ಪಕ್ಷದ ಶೇಡಕ 90 ನಕಲು ಎಂದು ರಾಜ್ಯ ಆಪ್‌ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಬ್ರಿಜೇಶ್‌ ಕಾಳಪ್ಪ ವ್ಯಂಗ್ಯವಾಡಿದ್ದಾರೆ. ನಗರದ ರಾಜ್ಯ ಆಮ್‌ ಆದ್ಮಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರಿಜೇಶ್‌ ಕಾಳಪ್ಪ ಅವರು, ದೆಹಲಿ ಮಾದರಿಯ ಗ್ಯಾರಂಟಿಗಳನ್ನು ಕರ್ನಾಟಕದಲ್ಲಿ ಈಡೇರಿಸಲು ಕಾಂಗ್ರೆಸ್‌ಗೆ ಸಂಪೂರ್ಣ ಸಹಾಯಹಸ್ತ ನೀಡಲು ಆಮ್‌ ಆದ್ಮಿ ಪಕ್ಷ ಸಿದ್ಧವಿದೆ ಎಂದರು.

ಕಾಂಗ್ರೆಸ್‌ ಪಕ್ಷದ ಆಶ್ವಾಸನೆಗಳು ಮತ್ತು ಗ್ಯಾರಂಟಿಗಳು ಆಮ್‌ ಆದ್ಮಿ ಪಕ್ಷದ ಶೇ.90 ನಕಲುಗಳಾಗಿವೆ. ಇವುಗಳನ್ನು ರಾಜ್ಯದ ಜನತೆಗೆ ಸಂಪೂರ್ಣವಾಗಿ ತಲುಪಿಸಲು ನಾವು ಸದಾ ಸಿದ್ಧರಿದ್ದೇವೆ. ಈಗಾಗಲೇ ದೆಹಲಿ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಜಾರಿಗೆ ಬಂದಿರುವ ಗ್ಯಾರಂಟಿಗಳ ಅಧ್ಯಯನಕ್ಕೆ ಅನಧಿಕೃತವಾಗಿ ಉನ್ನತ ಅಧಿಕಾರಿಗಳನ್ನು ಆ ರಾಜ್ಯಗಳಿಗೆ ಕಳಿಸುವುದನ್ನು ಬಿಟ್ಟು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರಿಗೆ ಪತ್ರ ಬರೆದರೆ ತಾಂತ್ರಿಕ ಸಹಕಾರ ನೀಡುತ್ತೇವೆ ಎಂದು ಹೇಳಿದರು. ಜನತೆಯಿಂದ ಸಂಪೂರ್ಣ ತಿರಸ್ಕರಿಸಲ್ಪಟ್ಟಿರುವ ಬಿಜೆಪಿ ಇಂದು ರಾಜ್ಯದ ಜನತೆಗೆ ಪ್ರಚೋದಿಸಿ ಗಲಾಟೆ ಮಾಡಿ ಎನ್ನುವ ಮೂಲಕ ಅಶಾಂತಿಯನ್ನು ಮೂಡಿಸಲು ಯತ್ನಿಸುತ್ತಿರುವುದು ಹೇಯಕರ ಕೃತ್ಯವಾಗಿದೆ ಎಂದು ಕಿಡಿಕಾರಿದರು. 

ತಮ್ಮ ಅನುಕೂಲಕ್ಕೆ ತಕ್ಕಂತೆ ಸಚಿವ ಸಂಪುಟ ರಚನೆ ಮಾಡಿಕೊಂಡ ಸಿದ್ದು: ಬಿ.ಕೆ.ಹರಿಪ್ರಸಾದ್‌ ಆಕ್ರೋಶ

ರೈತರ ಆದಾಯ ದ್ವಿಗುಣ, ಸರ್ವರಿಗೂ ವಸತಿ, ವಿದೇಶಗಳಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೂ .15 ಲಕ್ಷ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ, 5 ಟ್ರಿಲಿಯನ್‌ ಆರ್ಥಿಕತೆ, ಬುಲೆಟ್‌ ಟ್ರೈನ್‌, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಸುವಲ್ಲಿ ವೈಫಲ್ಯದಂತಹ ಯಾವುದೇ ಆಶ್ವಾಸನೆಗಳನ್ನು ಇದುವರೆಗೂ ಈಡೇರಿಸದೆ ನೈತಿಕತೆ ಇಲ್ಲದೆ ಬಿಜೆಪಿಯವರು ಏಕಾಏಕಿ ರಾಜ್ಯದ ಶಾಂತಿಗೆ ಭಂಗ ತರುವ ರೀತಿಯಲ್ಲಿ ಅಶಾಂತಿಯನ್ನು ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಕಾಳಪ್ಪ ಆಕ್ರೋಶ ವ್ಯಕ್ತಪಡಿಸಿದರು. 

2 ಬಾರಿ ಗೆದ್ದವರನ್ನಷ್ಟೆ ಮಂತ್ರಿ ಮಾಡಿದ್ದು, ಸಚಿವ ಸ್ಥಾನ ಸಿಗದ್ದಕ್ಕೆ ಪಕ್ಷದಲ್ಲಿ ಅಸಮಾಧಾನವಿಲ್ಲ: ಸಿದ್ದು

ಕಾಂಗ್ರೆಸ್‌ ಪಕ್ಷವು ಇನ್ನು ಒಂದು ತಿಂಗಳಲ್ಲಿ ತಾನು ನೀಡಿರುವ ಗ್ಯಾರಂಟಿಗಳನ್ನು ಈಡೇರಿಸದಿದ್ದಲ್ಲಿ ಆಮ್‌ ಆದ್ಮಿ ಪಕ್ಷವು ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ಉಸ್ತುವಾರಿ ಜಗದೀಶ್‌.ವಿ.ಸದಂ ಹಾಗೂ ಕಾರ್ಯಾಧ್ಯಕ್ಷ ಶಿವರಾಯಪ್ಪ ಜೋಗಿನ್‌ ಉಪಸ್ಥಿತರಿದ್ದರು.