ತಮ್ಮ ಅನುಕೂಲಕ್ಕೆ ತಕ್ಕಂತೆ ಸಚಿವ ಸಂಪುಟ ರಚನೆ ಮಾಡಿಕೊಂಡ ಸಿದ್ದು: ಬಿ.ಕೆ.ಹರಿಪ್ರಸಾದ್‌ ಆಕ್ರೋಶ

ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದವರು ಸರ್ಕಾರ ಬಂದಾಗ ಸಚಿವರಾಗಿ ಸಭಾ ನಾಯಕರಾಗುವುದು ಸಂಪ್ರದಾಯ. ಆದರೆ, ಈಗ ಅದನ್ನು ಮುರಿಯಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Congress Leader BK Hariprasad Slams On CM Siddaramaiah gvd

ಬೆಂಗಳೂರು (ಮೇ.28): ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದವರು ಸರ್ಕಾರ ಬಂದಾಗ ಸಚಿವರಾಗಿ ಸಭಾ ನಾಯಕರಾಗುವುದು ಸಂಪ್ರದಾಯ. ಆದರೆ, ಈಗ ಅದನ್ನು ಮುರಿಯಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಗದ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ತಮಗೆ ಅನುಕೂಲಕ್ಕೆ ತಕ್ಕಂತೆ ಸಚಿವ ಸಂಪುಟ ರಚನೆ ಮಾಡಿಕೊಂಡಿದ್ದಾರೆ. ಅದು ಅವರ ಪರಮಾಧಿಕಾರ. ಆದರೆ, ಸಂಪ್ರದಾಯದ ಪ್ರಕಾರ ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದವರು ಸರ್ಕಾರ ಬಂದಾಗ ಸಚಿವರಾಗಿ ಸಭಾನಾಯಕರಾಗಬೇಕು. 

ಈಗ ಆ ಸಂಪ್ರದಾಯ ಮುರಿದಿದೆ. ನಾನು ಯಾರ ಬಳಿಯೂ ಸಚಿವ ಸ್ಥಾನಕ್ಕಾಗಿ ಕೇಳಿದವನಲ್ಲ. ಪಕ್ಷದಲ್ಲಿ ಸಕ್ರಿಯರಾಗಿರುವವರಿಗೆ ಮನ್ನಣೆ ಸಿಗಬೇಕು ಎಂಬುದು ನನ್ನ ಆಗ್ರಹ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೆ ಎಂಬುದು ಕೇವಲ ಊಹಾಪೋಹ. ವಾಟ್ಸ್‌ಆ್ಯಪ್‌ ಮತ್ತು ಮಾಧ್ಯಮಗಳಲ್ಲಿ ಮಾತ್ರ ಸಂಭವನೀಯ ಪಟ್ಟಿಗಳು ಹರಿದಾಡಿದವು. ಈಗ ವಿಧಾನಪರಿಷತ್‌ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂಬ ವಿಷಯವೂ ಹರಿದಾಡುತ್ತಿದೆ. ಆದರೆ, ಪಕ್ಷ ಎಲ್ಲಿಯವರೆಗೆ ವಿಧಾನಪರಿಷತ್‌ ಸದಸ್ಯನಾಗಿರಲು ಹೇಳುತ್ತದೆಯೋ ಅಲ್ಲಿಯವರೆಗೆ ಇರುತ್ತೇನೆ. ನಾನು ರಾಜೀನಾಮೆ ನೀಡುತ್ತೇನೆ ಎಂಬುದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಅಶ್ವತ್ಥ್‌, ಪೂಂಜಾ ವಿರುದ್ಧ ಕೇಸು ಕಾಂಗ್ರೆಸ್ಸಿಗರ ದ್ವೇಷ ರಾಜಕಾರಣ: ಬೊಮ್ಮಾಯಿ

ಅಧಿಕಾರಕ್ಕೆ ಬರಲು ಡಿಕೆಶಿ ಕಾರಣ: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದೇ ಪ್ರಮುಖ ಕಾರಣ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದಲಿತ ನಾಯಕರಾದ ಡಾ.ಜಿ.ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ ಸಂಯೋಜನೆಯೂ ಪಕ್ಷಕ್ಕೆ ಪ್ರಯೋಜನವಾಯಿತು ಎಂದು ಬಿ.ಕೆ.ಹರಿಪ್ರಸಾದ್‌ ಹೇಳಿದರು. ಅದರ ಜತೆಗೆ ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಜೆಡಿಎಸ್‌ ಮತಗಳು ಕಾಂಗ್ರೆಸ್‌ ಪರವಾಗಿ ಚಲಾವಣೆಗೊಂಡವು. ಬಿಜೆಪಿಗೆ ಹಿಂದಿನ ಚುನಾವಣೆಯಲ್ಲಿ ದೊರೆತಷ್ಟೇ ಈ ಬಾರಿಯೂ ಶೇ.36 ಮತಗಳು ಬಂದಿವೆ. 

ಆದರೆ, ಜೆಡಿಎಸ್‌ನ ಮತಗಳು ಕಡಿಮೆಯಾಗಿ, ಅವೆಲ್ಲವೂ ಕಾಂಗ್ರೆಸ್‌ಗೆ ಬಂದಿವೆ. ಇದು ಸರಳ ಲೆಕ್ಕಾಚಾರ. ಅದರ ಜತೆಗೆ ಗ್ಯಾರಂಟಿ ಕಾರ್ಡ್‌ಗಳು ನಮಗೆ ನೆರವಾದವು ಎಂದು ಕಾಂಗ್ರೆಸ್‌ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರವಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು. ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿಯಾಗಲು ಒಂದು ಹೆಜ್ಜೆಯನ್ನಿಡಬೇಕು. ಅಧಿಕಾರ ಹಂಚಿಕೆ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್‌, ರಣದೀಪ್‌ ಸುರ್ಜೇವಾಲಾ ಅವರಿಗೆ ಮಾತ್ರ ತಿಳಿದಿದೆ. 

ಇಂದಿರಾ ಕ್ಯಾಂಟೀನ್‌ಗೆ ಪ್ರತ್ಯೇಕ ಅಧಿಕಾರಿ ನೇಮಕಕ್ಕೆ ಶಿಫಾರಸು: ಸಚಿವ ರಾಮಲಿಂಗಾರೆಡ್ಡಿ

ಈ ಏಳು ಮಂದಿ ಅಧಿಕೃತವಾಗಿ ಹೇಳಿಕೆ ನೀಡಿದರಷ್ಟೇ ಅಧಿಕಾರ ಹಂಚಿಕೆ ಬಗ್ಗೆ ಗೊತ್ತಾಗಲಿದೆ. ಉಳಿದವರು ನೀಡುವ ಹೇಳಿಕೆ ಯಾರನ್ನೋ ಮೆಚ್ಚಿಸುವುದಕ್ಕೆ ಮಾತನಾಡುತ್ತಿದ್ದಾರೆ ಎಂದೇ ಅರ್ಥ ಎಂದು ಎಂ.ಬಿ.ಪಾಟೀಲ್‌ ಹೇಳಿಕೆಗೆ ಟಾಂಗ್‌ ನೀಡಿದರು. ಸಾರ್ವಜನಿಕ ಜೀವನದಲ್ಲಿ ಬೇರೆ ಪಕ್ಷದಲ್ಲಿದ್ದವರು ಕಾಂಗ್ರೆಸ್‌ಗೆ ಬಂದು ಯಾವುದೇ ಅಧಿಕಾರ ಪಡೆಯಬಹುದು. ಎಲ್ಲರೂ ಅವರವರ ರೀತಿಯಲ್ಲಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಆದರೆ, ಪಕ್ಷ ಸಂಘಟನೆಯಲ್ಲಿ ತೊಡಗಿದವರಿಗೆ ಮನ್ನಣೆ ನೀಡಬೇಕು ಎಂಬುದು ನನ್ನ ವಾದ. ಪಕ್ಷದಲ್ಲಿ ಹಲವಾರು ರೀತಿಯ ಬೆಳವಣಿಗೆಗಳು ನಡೆದಿರುತ್ತವೆ. ಅವನ್ನೆಲ್ಲ ಕಾಲ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದರು.

Latest Videos
Follow Us:
Download App:
  • android
  • ios