Mallikarjun Kharge facing internal fight in congress: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಶಶಿ ತರೂರ್‌ ಪಕ್ಷದ ಅಧ್ಯಕ್ಷ ಚುನಾವಣೆಯಲ್ಲಿ ನಿಂತು ಸೋಲು ಕಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಸಮರವಾಗಿತ್ತು. ಇದು ಖರ್ಗೆ ಅವರಿಗೆ ಮುಜುಗರವನ್ನುಂಟು ಮಾಡಿತ್ತು.

ಬೆಂಗಳೂರು: ಕಾಂಗ್ರೆಸ್‌ನ ಅತ್ಯಂತ ಪ್ರಮುಖ ಸ್ಥಾನವಾದ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಎರಡನೇ ಕನ್ನಡಿಗ ಎಂಬ ಕೀರ್ತಿಗೆ ಮಲ್ಲಿಕಾರ್ಜುನ ಖರ್ಗೆ ಭಾಜನರಾಗಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ನಂತರ ಮಾತನಾಡಿದ್ದ ಖರ್ಗೆ ಪಕ್ಷದ ಸಂಘಟನೆಗೆ ಒತ್ತು ನೀಡುವುದಾಗಿ ಹೇಳಿದ್ದರು. ಆದರೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಒಂದಲ್ಲಾ ಒಂದು ಸಮಸ್ಯೆ ಅವರನ್ನು ಕಾಡುತ್ತಿದೆ. ಗುಜರಾತಿನಲ್ಲಿ ಚುನಾವಣೆ ಇನ್ನೇನು ಆರಂಭವಾಗಲಿದೆ. ಈ ಸಂದರ್ಭದಲ್ಲಿ ಸ್ಟಾರ್‌ ಪ್ರಚಾರಕರ ತಂಡದಿಂದ ಶಶಿ ತರೂರ್‌ ಹಿಂದೆ ಸರಿದಿದ್ದಾರೆ. ತಾವು ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದರಿಂದ ಖರ್ಗೆ ಮತ್ತು ತರೂರ್‌ ನಡುವಿನ ವೈಮನಸ್ಸು ಮತ್ತೆ ಮುನ್ನಲೆಗೆ ಬಂದಿದೆ. ಚುನಾವಣೆ ವೇಳೆ ಖರ್ಗೆ ಕಾಂಗ್ರೆಸ್‌ನ ಗಾಂಧಿ ಕುಟುಂಬದ ಅಧಿಕೃತ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ಗಾಂಧಿ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ತರೂರ್‌ ಮೇಲೆ ಸಿಟ್ಟಾಗಿದ್ದರು. ಅದಾದ ನಂತರ ಶಶಿ ತರೂರ್‌ ಅವರ ಜೊತೆಗೆ ಮಾತನಾಡಿದ್ದೇನೆ, ಪಕ್ಷ ಸಂಘಟನೆಗೆ ಅವರು ಮಾಡಬೇಕೆಂದುಕೊಂಡಿದ್ದ ಕೆಲಸಗಳ ಕುರಿತು ಚರ್ಚಿಸಿದ್ದೇನೆ ಎಂದು ಖರ್ಗೆ ವಿವಾದಕ್ಕೆ ತೆರೆ ಎಳೆದಿದ್ದರು. 

ದಿನದಿಂದ ದಿನಕ್ಕೆ ಶಶಿ ತರೂರ್‌ ಕಾಂಗ್ರೆಸ್‌ನಿಂದ ದೂರವಾಗುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇ ತಪ್ಪು ಎಂಬುವಂತೆ ಪಕ್ಷದ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂಬ ಬೇಸರ ಅವರಲ್ಲಿತ್ತು. ಇದೇ ಕಾರಣಕ್ಕೆ ಪಕ್ಷದಿಂದ ಸ್ವಲ್ಪ ದೂರಾಗುತ್ತಿದ್ದಾರೆ ಎನ್ನಲಾಗಿದೆ. ಜತೆಗೆ ರಾಜಸ್ಥಾನ ಕಾಂಗ್ರೆಸ್‌ನ ಉಸ್ತುವಾರಿ ಅಜಯ್‌ ಮಾಕೆನ್‌ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮತ್ತೊಬ್ಬ ಹಿರಿಯ ನಾಯಕ ಪಕ್ಷದಿಂದ ಹೊರ ಹೋಗುವಂತಾಗಿದೆ. ಒಂದೆಡೆ ಸಚಿನ್‌ ಪೈಲಟ್‌ ಇನ್ನೊಂದೆಡೆ ಅಶೋಕ್‌ ಗೆಹ್ಲೋಟ್‌ ಪೈಪೋಟಿ ಬಹಿರಂಗವಾಗಿ ನಡೆಯುತ್ತಲೇ ಇದೆ. ಅದರ ನಡುವೆ ಅಜಯ್‌ ಮಾಕೆನ್‌ ಕೂಡ ಪಕ್ಷದಿಂದ ಹೊರಗೆ ಕಾಲಿಟ್ಟಿರುವುದು ಕಾಂಗ್ರೆಸ್‌ಗೆ ಚಿಂತೆಯುಂಟು ಮಾಡಿದೆ. ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಬಿರುಗಾಳಿಯನ್ನು ತಡೆಯಲು ಖರ್ಗೆ ಹರಸಾಹಸ ಪಡುತ್ತಿದ್ದಾರೆ. ಆದರೆ ಗಾಂಧಿ ಕುಟುಂಬದ ಮಾತಿಗೆ ನೀಡುವ ಬೆಲೆ ಅವರ ಮಾತಿಗೆ ಸಿಗುತ್ತದೆಯೇ ಎಂಬುದೇ ಪ್ರಶ್ನೆ. 

ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ್ತೊಂದು ಶಾಕ್, ರಾಜಸ್ಥಾನ ಉಸ್ತುವಾರಿ ಸ್ಥಾನಕ್ಕೆ ಅಜಯ್ ಮಾಕೆನ್ ರಾಜೀನಾಮೆ!

ಭಾರತ್‌ ಜೋಡೊ ಯಾತ್ರೆ ಇದೇ ತಿಂಗಳ ಅಂತ್ಯಕ್ಕೆ ರಾಜಸ್ಥಾನಕ್ಕೆ ತಲುಪಲಿದೆ. ಅಷ್ಟರೊಳಗೆ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆಯಿದೆ. ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹ್ಲೋಟ್‌ ಬಣಗಳ ನಡುವಿನ ಗುದ್ದಾಟಕ್ಕೆ ಹೈಕಮಾಂಡ್‌ ತಾರ್ಕಿಕ ಅಂತ್ಯ ನೀಡುವ ಅಗತ್ಯತೆಯಿದೆ. ಆದರೆ ಭಾರತ್‌ ಜೋಡೊ ಯಾತ್ರೆಯೊಳಗೇ ನಿರ್ಧರಿಸಬೇಕು ಎಂಬ ಯಾವುದೇ ತುರ್ತು ಸ್ಥಿತಿಯಿಲ್ಲ ಎಂದು ಪಕ್ಷದೊಳಗಿನ ಮೂಲಗಳು ಹೇಳುತ್ತಿದ್ದಾರೆ. ಪಕ್ಷದ ಹಿರಿಯ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಗೆಹ್ಲೋಟ್‌ ಹೇಳಿದ್ದರೂ ಅದು ಬಾಯಿ ಮಾತಿಗೆ ಮಾತ್ರ ಎಂಬುದು ತಿಳಿದ ವಿಚಾರ. ಯಾಕೆಂದರೆ ಪಕ್ಷ ಇನ್ನೇನು ಗೆಹ್ಲೋಟ್‌ರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೇರಿಸಿ ಸಚಿನ್‌ ಪೈಲಟ್‌ರನ್ನು ರಾಜಸ್ಥಾನದ ಮುಖ್ಯಮಂತ್ರಿ ಎಂದು ಘೋಷಿಸಬೇಕಾದ ಸಂದರ್ಭದಲ್ಲಿ ಶಾಸಕರ ಸಾಮೂಹಿಕ ರಾಜೀನಾಮೆ ಅಸ್ತ್ರವನ್ನು ಗೆಹ್ಲೋಟ್‌ ಪ್ರಯತ್ನಿಸಿದ್ದರು. 

ಇದನ್ನೂ ಓದಿ: ಕಾಂಗ್ರೆಸ್‌ನಲ್ಲೀಗ ಒಗ್ಗ​ಟ್ಟು ಪ್ರದ​ರ್ಶನ: ಸಾಮೂ​ಹಿಕ ನಾಯ​ಕ​ತ್ವದ ಮಂತ್ರ ಜಪ..!

ಈ ಎಲ್ಲಾ ಅಡೆತಡೆಗಳನ್ನೂ ಮಲ್ಲಿಕಾರ್ಜುನ ಖರ್ಗೆ ಎದುರಿಸಬೇಕಿದೆ. ಈಗಷ್ಟೇ ಕುರ್ಚಿಯ ಮೇಲೆ ಕುಳಿತಿರುವ ಖರ್ಗೆ ದಿನ ನಿತ್ಯ ಪಕ್ಷದೊಳಗಿನ ಅಸಮತೋಲನ, ವೈಮನಸ್ಸನ್ನು ಸರಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಪಕ್ಷ ಸಂಘಟನೆಗೆ ಇನ್ನೂ ಕೆಲಸ ಆರಂಭಿಸಲು ಅವರಿಗೆ ಸಾಧ್ಯವಾಗಿಲ್ಲ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯ ಚುನಾವಣೆ ಕೂಡ ಬರಲಿದೆ. ಇದರಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಖರ್ಗೆ ಅವರಿಗಿದೆ. ಅದು ಅವರ ಪ್ರತಿಷ್ಠೆಯ ಪ್ರಶ್ನೆಯೂ ಹೌದು.