ಹೊಸ ಸಮಿತಿ ರಚಿಸಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಶಶಿ ತರೂರ್ ಗಿಲ್ಲ ಮಣೆ!
ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಕುರಿತು ಚರ್ಚಿಸಲು ಹೊಸದಾಗಿ ನೇಮಕಗೊಂಡ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆಸಿದರು.
ನವದೆಹಲಿ (ಅ.26):ನೂತನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಒಳಗೊಂಡ 47 ಸದಸ್ಯರ ಸ್ಟೀರಿಂಗ್ ಸಮಿತಿಯನ್ನು ರಚಿಸಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಕೆಲಸವನ್ನು ಈ ಸ್ಟೀರಿಂಗ್ ಸಮಿತಿ ನೋಡಿಕೊಳ್ಳಲಿದೆ. ಇದು ಅಧ್ಯಕ್ಷರಾದ ಬಳಿಕ ತೆಗೆದುಕೊಂಡ ಅತ್ಯಂತ ಮಹತ್ವದ ನಿರ್ಧಾರ ಎನಿಸಿದೆ. ಇದು ಪಕ್ಷದ ಸರ್ವೋಚ್ಚ ಸಭೆಯಲ್ಲಿ ಖರ್ಗೆ ಅವರ ಆಯ್ಕೆಯನ್ನು ಅಂಗೀಕರಿಸಿದ ನಂತರ ಹೊಸ ಸಿಡಬ್ಲ್ಯುಸಿ ರಚನೆಯಾಗುವವರೆಗೆ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ.ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಖರ್ಗೆ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಘೋಷಿಸಲಾದ ಸಮಿತಿಯಲ್ಲಿ ಕಳೆದ ಸಿಡಬ್ಲ್ಯುಸಿಯ ಬಹುತೇಕ ಸದಸ್ಯರನ್ನು ಉಳಿಸಿಕೊಳ್ಳಲಾಗಿದೆ. ಪಕ್ಷದ ಎಲ್ಲಾ ಸಿಡಬ್ಲ್ಯಸಿ ಸದಸ್ಯರು ಮತ್ತು ಪದಾಧಿಕಾರಿಗಳು, ಕಾಂಗ್ರೆಸ್ ಅಧ್ಯಕ್ಷರು ತಮ್ಮ ತಮ್ಮ ಸ್ವಂತ ತಂಡವನ್ನು ಆಯ್ಕೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಅವರು ನೀಡಿರುವ ಮಾಹಿತಿಯ ,ಸಮಿತಿಯ ಸದಸ್ಯರಲ್ಲಿ ಪಕ್ಷದ ಹಿರಿಯ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ, ಎ ಕೆ ಆಂಟನಿ, ಅಂಬಿಕಾ ಸೋನಿ, ಆನಂದ್ ಶರ್ಮಾ, ಕೆ ಸಿ ವೇಣುಗೋಪಾಲ್, ರಣದೀಪ್ ಸುರ್ಜೆವಾಲಾ ಮತ್ತು ದಿಗ್ವಿಜಯ ಸಿಂಗ್ ಇದ್ದಾರೆ. "ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಂವಿಧಾನದ XV (ಬಿ) ಪರಿಚ್ಛೇದದ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಬದಲಿಗೆ ಕಾರ್ಯನಿರ್ವಹಿಸುವ ಸ್ಟೀರಿಂಗ್ ಸಮಿತಿಯನ್ನು ರಚಿಸಿದ್ದಾರೆ" ಎಂದು ವೇಣುಗೋಪಾಲ್ ಆದೇಶದಲ್ಲಿ ತಿಳಿಸಿದ್ದಾರೆ.
ಸಿಡಬ್ಲ್ಯುಸಿಯು ಕಾಂಗ್ರೆಸ್‌ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದ್ದು, ಎಲ್ಲಾ ಪಿಸಿಸಿ ಪ್ರತಿನಿಧಿಗಳು ಭಾಗವಹಿಸುವ ಪಕ್ಷದ ಪ್ಲಾನರಿ ಅಧಿವೇಶನದಲ್ಲಿ ಖರ್ಗೆ ಅವರ ಆಯ್ಕೆಯನ್ನು ಅನುಮೋದಿಸುವವರೆಗೆ ಸ್ಟೀರಿಂಗ್ ಸಮಿತಿಯು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಅಧಿವೇಶನ ನಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್‌ನಲ್ಲಿನ ಪ್ರತಿಯೊಂದು ಪ್ರಮುಖ ನಿರ್ಧಾರವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ತಗೆದುಕೊಳ್ಳುತ್ತಿತ್ತು. ಆ ಸಮಿತಿಯಲ್ಲಿ ಒಟ್ಟು 23 ಸದಸ್ಯರಿದ್ದರು. ಆದರೆ ಈಗ ಮಲ್ಲಿಕಾರ್ಜುನ ಖರ್ಗೆ ಆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯುಸಿ) ರದ್ದುಗೊಳಿಸಿದ್ದಾರೆ. ಅದರ ಜಾಗದಲ್ಲಿ ನೂತನ ಸಮಿತಿ ರಚಿಸಿದ್ದು, ಅದರಲ್ಲಿ 47 ಸದಸ್ಯರಿಗೆ ಸ್ಥಾನ ನೀಡಲಾಗಿದೆ. ಇದೀಗ ಈ ಸಮಿತಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
Ramya: ಖರ್ಗೆಗೆ ಸೇರಿ ಒಂದೇ ಟ್ವೀಟ್‌ನಲ್ಲಿ ಹೋಲ್‌ಸೇಲ್ ಶುಭಾಶಯ ಕೋರಿದ ಸ್ಯಾಂಡಲ್‌ವುಡ್ ಕ್ವೀನ್!
ಖರ್ಗೆ ಅವರು ಪಕ್ಷದ ಹಲವು ದೊಡ್ಡ ಮುಖಗಳಿಗೆ ಸ್ಥಾನ ನೀಡಿದ್ದಾರೆ. ಅಭಿಷೇಕ್ ಮನು ಸಿಂಘ್ವಿ, ಆನಂದ್ ಶರ್ಮಾ, ರಣದೀಪ್ ಸುರ್ಜೆವಾಲಾ, ಅಜಯ್ ಮಾಕನ್, ದಿಗ್ವಿಜಯ್ ಸಿಂಗ್, ಅಂಬಿಕಾ ಸೋನಿ, ಹರೀಶ್ ರಾವತ್, ಜೈರಾಮ್ ರಮೇಶ್, ಕೆಸಿ ವೇಣುಗೋಪಾಲ್, ಮೀರಾ ಕುಮಾರ್, ಪಿಎಲ್ ಪುನಿಯಾ, ಪ್ರಮೋದ್ ತಿವಾರಿ, ಸಲ್ಮಾನ್ ಖುರ್ಷಿದ್, ರಾಜೀವ್ ಶುಕ್ಲಾ ಕೂಡ ಈ ಪಟ್ಟಿಯಲ್ಲಿದ್ದಾರೆ. ಆದರೆ ಈ ಸಮಿತಿಯಲ್ಲಿ ಶಶಿ ತರೂರ್ ಯಾಕೆ ಸ್ಥಾನ ಪಡೆದಿಲ್ಲ ಎನ್ನುವುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಅವರ ಹೆಸರು ಬಹಳ ದಿನಗಳಿಂದ ಚರ್ಚೆಯಾಗುತ್ತಿತ್ತು, ಆದರೆ ಅವರು ಸೇರ್ಪಡೆಯಾಗುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ತರೂರ್ ಅವರನ್ನು ಬೆಂಬಲಿಸುವ ಒಂದು ಬಣ ಇದ್ದರೆ, ಅವರನ್ನು ಸೇರಿಸಿಕೊಳ್ಳಲು ಬಯಸದ ಒಂದು ಬಣ ಇತ್ತು.
ಇಂದು ಎಐಸಿಸಿ ಚುಕ್ಕಾಣಿ ಹಿಡಿದ ಮಲ್ಲಿಕಾರ್ಜುನ ಖರ್ಗೆ
ಈಗ ಅಧ್ಯಕ್ಷ ಸ್ಥಾನದ ಚುನಾವಣೆಯ ಸಂದರ್ಭದಲ್ಲಿ ಶಶಿ ತರೂರ್ ಅವರಿಂದ ಹಲವು ರೀತಿಯ ಆರೋಪಗಳು ಕೇಳಿ ಬಂದಿದ್ದವು. ಮತ ಎಣಿಕೆ ವಿಚಾರದಲ್ಲೂ ಪ್ರಶ್ನೆಗಳನ್ನು ಎತ್ತಿದ್ದ ಅವರು, ಮಾಧ್ಯಮಗಳ ಮುಂದೆಯೂ ಕೆಲ ಹೇಳಿಕೆಗಳನ್ನು ನೀಡಿದ್ದರು, ಇಂತಹ ಪರಿಸ್ಥಿತಿಯಲ್ಲಿ ಹಲವು ಕಾಂಗ್ರೆಸ್ ನಾಯಕರು ಅವರ ಮೇಲೆ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳ ಮುಂದೆ ಪಕ್ಷದ ಪ್ರಕ್ರಿಯೆಯನ್ನೇ ಪ್ರಶ್ನಿಸಿದ್ದಕ್ಕೆ ಅಸಮಾಧಾನ ಹೆಚ್ಚಿತ್ತು.