137 ವರ್ಷದ ಹಳೆ ಪಕ್ಷ ಕಾಂಗ್ರೆಸ್‌ಕ್ಕೆ ಇದು 6ನೇ ಅಧ್ಯಕ್ಷೀಯ ಚುನಾವಣೆ. ಈ ಬಾರಿಯ ಚುನಾವಣೆ ಯಶಸ್ವಿಯಾಗಿ ನಡೆದಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಸ್ಪರ್ಧಿಸಿದ್ದು ಶೇಕಡಾ 96 ರಷ್ಟು ಮತದಾನ ನಡೆದಿದೆ. ಮತದಾನ ಅಂತ್ಯವಾದ ಬೆನ್ನಲ್ಲೇ ತರೂರ್ ಮಾಡಿರುವ ಟ್ವೀಟ್ ಇದೀಗ ಸಂಚಲನ ಸೃಷ್ಟಿಸಿದೆ.

ನವದೆಹಲಿ(ಅ.17): ದೇಶದ ಅತ್ಯಂತ ಹಳೇ ರಾಜಕೀಯ ಪಕ್ಷ ಕಾಂಗ್ರೆಸ್‌ಗೆ ಅಧ್ಯಕ್ಷೀಯ ಚುನಾವಣೆ ನಡೆದಿದೆ. ಕೆಲ ದಶಕಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗಾಂಧಿಯೇತರ ನಾಯಕನಿಗೆ ಸಿಗುವ ಕಾಲ ಸನ್ನಿಹಿತವಾಗಿದೆ. ಈ ಬಾರಿಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಸ್ಪರ್ಧಿಸಿದ್ದಾರೆ. ಇಂದು ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇಕಡಾ 96 ರಷ್ಟು ಮತದಾನವಾಗಿದೆ. ಅಂದರೆ 9,900 ನಾಯಕರು ಮತ ಚಲಾಯಿಸಿದ್ದಾರೆ. 137 ವರ್ಷ ಹಳೇ ಕಾಂಗ್ರೆಸ್ ಪಕ್ಷಕ್ಕೆ 6ನೇ ಬಾರಿಗೆ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಇದೇ ವೇಳೆ ಚುನಾವಣೆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಮಧೂಸೂಧನ ಮಿಸ್ತ್ರಿ, ಕಾಂಗ್ರೆಸ್ ಪಕ್ಷದಲ್ಲಿರುವ ಆಂತರಿಕ ಪ್ರಜಾಪ್ರಭುತ್ವ ಇತರ ರಾಜಕೀಯ ಪಕ್ಷಗಳು ಕಲಿಯಬೇಕಿದೆ ಎಂದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಅಂತ್ಯಗೊಂಡ ಬೆನ್ನಲ್ಲೇ ಅಭ್ಯರ್ಥಿ ಶಶಿ ತರೂರ್ ಟ್ವೀಟ್ ಮೂಲಕ ವಿಡಿಯೋ ಸಂದೇಶ ಪೋಸ್ಟ್ ಮಾಡಿದ್ದಾರೆ. ಈ ಸಂದೇಶದಲ್ಲಿ ತರೂರ್ ಫಲಿತಾಂಕ್ಕೂ ಮೊದಲೇ ಸೋಲೋಪ್ಪಿಕೊಂಡಿದ್ದಾರಾ ಅನ್ನೋ ಮಾತುಗಳು ಕೇಳಿಬಂದಿದೆ. ವಿಡಿಯೋದ ಆರಂಭದಲ್ಲಿ ಕಾಂಗ್ರೆಸ್‌ಗೆ ಧನ್ಯವಾದ ಹೇಳಿದ್ದಾರೆ. ಪ್ರಚಾರದಲ್ಲಿ ಧೈರ್ಯವಾಗಿ ಪಾಲ್ಗೊಂಡ ಹಾಗೂ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಕಾರ್ಯಕರ್ತರು, ನಾಯಕರು ಹಾಗೂ ಹಿರಿಯರಿಗೆ ಧನ್ಯವಾದ ಹೇಳಿದ್ದಾರೆ. ಫಲಿತಾಂಶ ಏನೇ ಆದರೂ ಇದು ನಿಮ್ಮ ಗೆಲುವು. ಜೈ ಹಿಂದ್, ಜೈ ಕಾಂಗ್ರೆಸ್ ಎಂದು ತರೂರ್ ಪೋಸ್ಟ್ ಮಾಡಿದ್ದಾರೆ.

Scroll to load tweet…

ಭಾರತ್ ಜೋಡೋ ಯಾತ್ರೆ ನಿಲ್ಲಿಸಿ, ರಾಹುಲ್ ಗಾಂಧಿಗೆ ಕಾಂಗ್ರೆಸ್ ನಾಯಕನ ಸೂಚನೆ!

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಮತದಾನ
ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಮತದಾನ ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಸೇರಿದಂತೆ 50 ಮಂದಿ ಮತದಾನ ಮಾಡಿದ್ದಾರೆ.

22 ವರ್ಷ ಹಿಂದೆ ನಡೆದಿತ್ತು ‘ಕೈ’ ಅಧ್ಯಕ್ಷ ಚುನಾವಣೆ
ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ 2000ನೇ ಇಸವ್ಗಿವಿಯಲ್ಲಿ ಸ್ಪರ್ಧೆ ನಡೆದಿತ್ತು. ಇದಾದ ನಂತರ ಅವಿರೋಧ ಆಯ್ಕೆಗಳೇ ನಡೆದಿದ್ದವು. ಈಗ 22 ವರ್ಷ ಬಳಿಕ ಮತ್ತೆ ಚುನಾವಣಾ ಕಾಲ ಎದುರಾಗಿದೆ. 2000ನೇ ಇಸವಿಯಲ್ಲಿ ಸೋನಿಯಾ ಗಾಂಧಿ ಹಾಗೂ ಉತ್ತರ ಪ್ರದೇಶದ ಹಿರಿಯ ನಾಯಕ ಜಿತೇಂದ್ರ ಪ್ರಸಾದ ಸ್ಪರ್ಧಿಸಿದ್ದರು. ಅರ್ಹ 7,542 ಮತಗಳ ಪೈಕಿ ಜಿತೇಂದ್ರ ಪ್ರಸಾದ ಕೇವಲ 94 ಮತ ಪಡೆದರೆ ಸೋನಿಯಾ 7,448 ಮತ (ಶೇ.98.75ರಷ್ಟು) ಪಡೆದು ಜಯಶೀಲರಾಗಿದ್ದರು.

Congress Presidential Election: ರಾಹುಲ್‌, ಸೋನಿಯಾ, ಡಿಕೆಶಿ ಸೇರಿ ಹಲವು ‘ಕೈ’ ನಾಯಕರಿಂದ ಮತದಾನ

ಚುನಾವಣಾ ಪ್ರಚಾರದ ವೇಳೆ 80ರ ಹರೆಯದ ಖರ್ಗೆ ಅವರು ಪಕ್ಷದ ಪುನರುತ್ಥಾನಕ್ಕೆ ಶ್ರಮಿಸುವುದಾಗಿ ಹಾಗೂ ಸೋನಿಯಾ ಸೇರಿ ಎಲ್ಲರ ಸಲಹೆ ಪಡೆದುಕೊಂಡು ಪಕ್ಷ ಮುನ್ನಡೆಸುವುದಾಗಿ ಹೇಳಿದ್ದಾರೆ. ಇನ್ನು ತರೂರ್‌ ಅವರು, ‘ಹೈಕಮಾಂಡ್‌ ಸಂಸ್ಕೃತಿಗೆ ಕಡಿವಾಣ ಹಾಕಿ ಪಕ್ಷದಲ್ಲಿ ವಿಕೇಂದ್ರೀಕರಣ ಮಾಡುತ್ತೇನೆ. ಕಾಂಗ್ರೆಸ್ಸನ್ನು ಯುವಕರ ಪಕ್ಷ ಮಾಡುವೆ’ ಎಂದು ಭರವಸೆ ನೀಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ಸೆ.22ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಉಳಿದವರನ್ನು ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಆ ಕುಟುಂಬದ ಆಸೆಯಂತೆಯೇ ಈ ಚುನಾವಣೆ ನಡೆದಿದೆ.