ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಈಗಾಗಲೇ ನಾಲ್ಕು ರಾಜ್ಯ ಪ್ರವೇಶಿಸಿ ಭಾರಿ ಸದ್ದು ಮಾಡುತ್ತಿದೆ. ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಯಾತ್ರೆ ಕಾಂಗ್ರೆಸ್ ಪಾಲಿಗೆ ಅತ್ಯಂತ ಮುಖ್ಯವಾಗಿದೆ. ಸದ್ಯ ಕರ್ನಾಟಕ ಮುಗಿಸಿ ಆಂಧ್ರ ಪ್ರದೇಶಕ್ಕೆ ತೆರಳಿರುವ ಈ ಯಾತ್ರೆ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿ ಅಂತ್ಯವಾಗಲಿದೆ. ಆದರೆ ಈಗಲೇ ಈ ಯಾತ್ರೆ ನಿಲ್ಲಿಸಲು ಆಗ್ರಹ ಕೇಳಿಬಂದಿದೆ. 

ನವದೆಹಲಿ(ಅ.17): ಭಾರತ್ ಜೋಡೋ ಯಾತ್ರೆ ಕೇರಳದಿಂದ ಆರಂಭಿಸಿ ಇದೀಗ ಆಂಧ್ರ ಪ್ರದೇಶದಲ್ಲಿ ಸಂಚರಿಸುತ್ತಿದೆ. ಇದರ ನಡುವೆ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಯಾತ್ರೆ ಮುಗಿಸಿದೆ. ಯಾತ್ರೆ ಯುದ್ದಕ್ಕೂ ಬಿಜೆಪಿ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂಬರುವ ಚುನಾವಣೆಗೆ ಅಖಾಡ ಸಜ್ಜುಗೊಳಿಸುತ್ತಿದ್ದಾರೆ. ಬರೋಬ್ಬರಿ 3,570 ಕಿಲೋಮೀಟರ್, 150 ದಿನ ಈ ಯಾತ್ರೆ ಸಂಚರಿಸಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರೆ ಸಮಾಪ್ತಿಯಾಗಲಿದೆ. ಸದ್ಯ ನಾಲ್ಕನೇ ರಾಜ್ಯಕ್ಕೆ ಕಾಲಿಟ್ಟಿರುವಾಗಲೇ ಯಾತ್ರೆ ನಿಲ್ಲಿಸುವಂತೆ ಕಾಂಗ್ರೆಸ್ ನಾಯಕ,ಗೋವಾದ ಮಾಜಿ ಮುಖ್ಯಮಂತ್ರಿ ಫ್ರಾನ್ಸಿಸ್ಕೋ ಸರ್ದಿನ್ಹ ಸೂಚಿಸಿದ್ದಾರೆ. ರಾಹುಲ್ ಗಾಂಧಿ ಈಗ ಯಾತ್ರೆ ಮುಂದುವರಿಸುವುದಕ್ಕಿಂತ ನಿಲ್ಲಿಸುವುದು ಸೂಕ್ತ. ಇದರಿಂದ ಪಕ್ಷಕ್ಕೆ ನೆರವಾಗಲಿದೆ ಎಂದಿದ್ದಾರೆ. 

ಫ್ರಾನ್ಸಿಸ್ಕೋ ಸರ್ದಿನ್ಹ ಪ್ರಕಾರ, ಬಿಜೆಪಿ(BJP) ಸೋಲಿಸುವ ಶಕ್ತಿ ಇರುವ ಏಕೈಕ ಪಾರ್ಟಿ ಕಾಂಗ್ರೆಸ್(Congress). ಅದು ಲೋಕಸಭೆಯಾಗಿರಲಿ ಅಥವಾ ಯಾವುದೇ ವಿಧಾನಸಭಾ ಚುನಾವಣೆಯಾಗಿರಲಿ, ಬಿಜೆಪಿಯನ್ನು ಸೋಲಿಸುವ ಶಕ್ತಿ ಕಾಂಗ್ರೆಸ್‌ಗೆ ಇದೆ. ಸದ್ಯ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ(Bharat Jodo Yatra) ನಿಲ್ಲಿಸಿ ನೇರವಾಗಿ ಹಿಮಾಚಲ(Himachal Pradesh) ಹಾಗೂ ಗುಜರಾತ್ ವಿಧಾನಸಭಾ(Gujarat Assembly Election) ಚುನಾವಣೆಗೆ ಗಮನ ಕೇಂದ್ರೀಕರಿಸಬೇಕು. ರಾಹುಲ್ ಗಾಂಧಿ(Rahul Gandhi) ಈ ಎರಡು ರಾಜ್ಯಗಳಲ್ಲಿ ಪ್ರಚಾರ ಸಭೆ, ರ್ಯಾಲಿಗಳನ್ನು ಆಯೋಜಿಸಬೇಕು. ಇದರಿಂದ ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದ್ದಾರೆ.

Congress Presidential Election: ರಾಹುಲ್‌, ಸೋನಿಯಾ, ಡಿಕೆಶಿ ಸೇರಿ ಹಲವು ‘ಕೈ’ ನಾಯಕರಿಂದ ಮತದಾನ

ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಪಾಲಿಗೆ ಅತೀ ಮುಖ್ಯ ಯಾತ್ರೆಯಾಗಿದೆ. ಇದರಿಂದ ಭಾರತವನ್ನು ಒಗ್ಗೂಡಿಸುವ ಕಾರ್ಯಮಾತ್ರವಲ್ಲ, ಮುಂಬರುವ ಚುನಾವಣೆಗೆ ಕಾಂಗ್ರೆಸ್ ಮೈಕೊಡವಿ ನಿಲ್ಲಲು ಸಹಕಾರಿಯಾಗಿದೆ. ಸದ್ಯ ಯಾತ್ರೆಯಲ್ಲಿ ಮುಳುಗಿದರೆ, ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ. ಈ ಕಾರಣದಿಂದ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸುವುದು ಸೂಕ್ತ ಎಂದು ಫ್ರಾನ್ಸಿಸ್ಕೋ ಹೇಳಿದ್ದಾರೆ.

ಹಿಮಾಚಲಕ್ಕೆ ನ.12ರಂದು ಚುನಾವಣೆ: ಡಿ.8ಕ್ಕೆ ರಿಸಲ್ಟ್‌
ಕಳೆದ ಐದು ವರ್ಷಗಳಿಂದ ಬಿಜೆಪಿ ಅಧಿಕಾರ ನಡೆಸುತ್ತಿರುವ ಹಿಮಾಚಲಪ್ರದೇಶಕ್ಕೆ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ನ.12ರಂದು ಒಂದು ಹಂತದ ಚುನಾವಣೆ ನಡೆಯಲಿದ್ದು, ಡಿ.8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಹಿಮಾಚಲಪ್ರದೇಶ ವಿಧಾನಸಭೆಯಲ್ಲಿ 68 ವಿಧಾನಸಭಾ ಕ್ಷೇತ್ರಗಳು ಇವೆ. 55 ಲಕ್ಷ ಮತದಾರರು 68 ಕ್ಷೇತ್ರಗಳ ನೂತನ ಶಾಸಕರನ್ನು ಆಯ್ಕೆ ಮಾಡಲಿದ್ದಾರೆ. 1.86 ಲಕ್ಷ ನವ ಮತದಾರರು, 1.22 ಲಕ್ಷ 80 ವರ್ಷದ ದಾಟಿದವರು ಹಾಗೂ 1184 ಮಂದಿ 100 ವರ್ಷ ಮೀರಿದ ಮತದಾರರು ಹಿಮಾಚಲದಲ್ಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ತಿಳಿಸಿದರು.