ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಬಲಿಷ್ಠವಾಗಿದ್ದು, ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಉತ್ಸಾಹಭರಿತರಾಗಿದ್ದಾರೆ. ಹೀಗಿರುವುದರಿಂದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಸಚಿವ ಎಚ್‌. ಆಂಜನೇಯ ಹೇಳಿದರು. 

ಸಿರಿಗೆರೆ (ಮಾ.29): ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಬಲಿಷ್ಠವಾಗಿದ್ದು, ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಉತ್ಸಾಹಭರಿತರಾಗಿದ್ದಾರೆ. ಹೀಗಿರುವುದರಿಂದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಸಚಿವ ಎಚ್‌. ಆಂಜನೇಯ ಹೇಳಿದರು. ಭರಮಸಾಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಪರಿಶಿಷ್ಟಜಾತಿಯ ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡ ಕೂಬ್ಯಾನಾಯಕ್‌ ಅವರಿಗೆ ಆದೇಶ ಪತ್ರ ನೀಡಿ ಮಾತನಾಡಿದರು. ಹೊಳಲ್ಕೆರೆ ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಪಕ್ಷದ ಬುನಾದಿ ಭದ್ರವಾಗಿದೆ. ಕಾರ್ಯಕರ್ತರು ಹುಮ್ಮನಸ್ಸಿನಲ್ಲಿದ್ದಾರೆ. 

ಈಗಾಗಲೇ ಬೂತ್‌ ಮಟ್ಟದಲ್ಲಿ ಕಾರ್ಯಕರ್ತರು ಪ್ರಚಾರ ಆರಂಭಿಸಿದ್ದಾರೆ. ಯುವಕರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಇದರಿಂದ ಹೊಳಲ್ಕೆರೆ ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಗೆಲ್ಲುವುದು ಗ್ಯಾರಂಟಿ ಎಂದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಹಾಗೂ ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಎಚ್‌.ಎನ್‌. ತಿಪ್ಪೇಸ್ವಾಮಿ, ಕೋಡಿ ರಂಗವನಹಳ್ಳಿ ಹನುಮಂತಪ್ಪ, ಶಿವಣ್ಣ, ಮಂಜುನಾಥ್‌, ಮೌನೇಶ್‌, ವಿಎಸ್‌ಎಸ್‌ಎನ್‌ ಸದಸ್ಯ ಚಂದ್ರಶೇಖರ್‌, ಮಂಜುನಾಥ್‌ ಬಾಬಣ್ಣ, ದುರ್ಗೇಶ್‌ ಪೂಜಾರ್‌, ರಹಮತ್‌ ಇತರರು ಉಪಸ್ಥಿತರಿದ್ದರು. ಭರಮಸಾಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಪರಿಶಿಷ್ಟಜಾತಿಯ ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡ ಕೂಬ್ಯಾನಾಯಕ್‌ ಇವರಿಗೆ ಮಾಜಿ ಸಚಿವ ಆಂಜನೇಯ ಅಧಿಕಾರ ಪತ್ರ ಹಸ್ತಾಂತರಿಸಿದರು.

ಸಿದ್ದರಾಮಯ್ಯ ರಾಜ್ಯದ ನಾಲ್ಕೂ ದಿಕ್ಕುಗಳಲ್ಲಿ ಸ್ಪರ್ಧಿಸಲಿ: ಸಚಿವ ಸುಧಾಕರ್‌ ವ್ಯಂಗ್ಯ

ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ ಬೆಂಬಲಿಸಿ: ಹಾಲಿ ಶಾಸಕರು ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ್ದು, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಮಾಜಿ ಸಚಿವ ಎಚ್‌. ಆಂಜನೇಯ ಮನವಿ ಮಾಡಿದರು. ಚಿಕ್ಕಜಾಜೂರಿನಲ್ಲಿ ನಡೆದ ಕಾಂಗ್ರೆಸ್‌ ಗ್ಯಾರಂಟಿ ಸಭೆಯಲ್ಲಿ ಮಾತನಾಡಿದ ಅವರು, ಹಾಲಿ ಶಾಸಕರು ತಮ್ಮ ಆಡಳಿತ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಡವರಿಗೆ ಒಂದೂ ಮನೆ ಕಟ್ಟಿಕೊಟ್ಟಿಲ್ಲ, ಕೊಳವೆ ಬಾವಿ ಕೊರೆಸಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಲ್ಲರಿಗೂ ಮನೆ ಕೊಟ್ಟಿದ್ದೆವು. ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆ ಬಾವಿ ಕೊರೆಸಿದ್ದೆವು, ಶಾಲೆಗಳನ್ನು ಕಟ್ಟಿದ್ದೆವು, ಹಾಸ್ಟೆಲ್‌ಗಳನ್ನು ಮಾಡಿದ್ದೆವು ಎಂದರು.

ನನ್ನ ಅಧಿಕಾರ ಅವಧಿಯಲ್ಲಿ ತಾಲೂಕಿನಲ್ಲಿ ನಡೆದ ಕಾಮಗಾರಿಗಳ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡಲಾಗುತ್ತಿತ್ತು. ಆದರೆ ಈ ಶಾಸಕರ ಅವಧಿಯಲ್ಲಿ ಕಮಿಷನ್‌ ಹೊಡೆಯಲು ಹೊರಗಿನವರಿಗೆ ಗುತ್ತಿಗೆ ನೀಡಲಾಗುತ್ತಿದೆ. ನಮ್ಮ ಆಡಳಿತ ಅವಧಿಯಲ್ಲಿ ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದೆವು. ಇದರಿಂದ ಭೋವಿ, ಲಂಬಾಣಿ ಸಮುದಾಯದವರು ಗುತ್ತಿಗೆಗಳನ್ನು ಪಡೆದುಕೊಂಡು ಆರ್ಥಿಕವಾಗಿ ಉತ್ತಮ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದರು. ಬಿಜೆಪಿ ಅವಧಿಯಲ್ಲಿ ವಿಪರೀತ ಪ್ರಮಾಣದಲ್ಲಿ ದರ ಏರಿಕೆ ಕಂಡಿದೆ. ಅನಿಲ ಒಂದು ಸಿಲಿಂಡರ್‌ ದರ 1000 ರು ದಾಟಿದೆ. ಪೆಟ್ರೋಲ್‌ ದರ 100 ರು. ಮುಟ್ಟಿದೆ. 

ಹಳೇ ಮೈಸೂರು ಭಾಗದಲ್ಲಿ ಹೊಂದಾಣಿಕೆ ಇಲ್ಲ: ಸಿ.ಪಿ.ಯೋಗೇಶ್ವರ್‌

ಯಾರೂ ನೆಮ್ಮದಿಯ ಜೀವನವನ್ನು ಮಾಡುತ್ತಿಲ್ಲ. ನಮ್ಮದು ನುಡಿದಂತೆ ನಡೆದ ಸರ್ಕಾರ. 2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಸರ್ಕಾರ ಅನ್ನಭಾಗ್ಯ ಸೇರಿದಂತೆ ನೀಡಿದ್ದ ಎಲ್ಲ ಭರವಸೆಗಳಲ್ಲಿ ಶೇಕಡಾ ನೂರರಷ್ಟುಈಡೇರಿಸಿತ್ತು. ಈ ಬಾರಿಯೂ ಅಧಿಕಾರಕ್ಕೆ ಬಂದು ನೀಡುವ ಎಲ್ಲ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯೊಡತಿಗೆ ಮಾಸಿಕ 2 ಸಾವಿರ ರು., ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ ರು., ಪ್ರತಿ ಕುಟುಂಬಕ್ಕೆ ಹತ್ತು ಕೆ.ಜಿ ಅಕ್ಕಿ, ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು. ಕಾಂಗ್ರೆಸ್‌ನ ಈ ಗ್ಯಾರಂಟಿಯನ್ನು ಅನುಷ್ಠಾನಕೆ ತರಲಾಗುವುದು ಎಂದು ಭರವಸೆ ನೀಡಿದರು.