ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರು ಮೇ 6ರಂದು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಲಿದ್ದು, ಹುಬ್ಬಳ್ಳಿಯಲ್ಲಿ ಅಂದು ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. 

ಬೆಂಗಳೂರು (ಮೇ.04): ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರು ಮೇ 6ರಂದು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಲಿದ್ದು, ಹುಬ್ಬಳ್ಳಿಯಲ್ಲಿ ಅಂದು ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹೈಕಮಾಂಡ್‌ನ ಹಲವು ನಾಯಕರು ರಾಜ್ಯದ ವಿವಿಧ ಭಾಗಗಳಲ್ಲಿ ರಾಜ್ಯ ನಾಯಕರುಗಳೊಂದಿಗೆ ಭಾಗವಹಿಸಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. 

ಇದರ ಜತೆಗೆ ಪಕ್ಷದ ಸ್ಟಾರ್‌ ಪ್ರಚಾರಕರಲ್ಲಿ ಪ್ರಮುಖರಾದ ಸೋನಿಯಾ ಗಾಂಧಿ ಅವರು ಇದೇ ಮೊದಲ ಬಾರಿಗೆ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಶನಿವಾರ ಬೆಳಗ್ಗೆ ದೆಹಲಿಯಿಂದ ರಾಜ್ಯಕ್ಕೆ ಆಗಮಿಸಲಿರುವ ಅವರು ಹುಬ್ಬಳ್ಳಿಯಲ್ಲಿ ಪಕ್ಷ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಬಳಿಕ ಸಂಜೆ ದೆಹಲಿಗೆ ವಾಪಸ್ಸಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಭೀಮಾ ತೀರದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ಗೆ ‘ಪಕ್ಷೇತರ’ನ ಸೆಡ್ಡು?

ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಆಯೋಗ ನೋಟಿಸ್‌: ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ರಾಜಕೀಯ ಭಾಷಣದ ಘನತೆಯನ್ನು ಕಾಪಾಡಿಕೊಳ್ಳದೆ ಪ್ರತಿಸ್ಪರ್ಧಿ ಪಕ್ಷಗಳ ವ್ಯಕ್ತಿಯ ತೇಜೋವಧೆ ಮಾಡುವಂತಹ ಹೇಳಿಕೆಗಳನ್ನು ಕೇಂದ್ರ ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಆಡಳಿತಾರೂಢ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಂದ ಸ್ಪಷ್ಟನೆ ಕೋರಿ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ.

ಇಬ್ಬರೂ ಮುಖಂಡರು ನೀಡಿರುವ ಹೇಳಿಕೆಯು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಯಾವ ಕಾರಣಕ್ಕಾಗಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಗುರುವಾರ ಸಂಜೆ 5 ಗಂಟೆಯೊಳಗೆ ವಿವರಣೆ ನೀಡುವಂತೆ ನೋಟಿಸ್‌ ನೀಡಲಾಗಿದೆ. ಒಂದು ವೇಳೆ ಉತ್ತರ ನೀಡದಿದ್ದರೆ ಅವರು ಏನೂ ಹೇಳಲು ಸಾಧ್ಯವಿಲ್ಲ ಎಂದು ಭಾವಿಸಿ ಸೂಕ್ತ ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಆಯೋಗವು ಎಚ್ಚರಿಕೆ ರೂಪದಲ್ಲಿ ತಿಳಿಸಿದೆ.

ಯತ್ನಾಳ್‌, ಖರ್ಗೆ ಹೇಳಿದ್ದೇನು?: ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಏ.28ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಎಂದು ಟೀಕೆ ಮಾಡಿದ್ದಕ್ಕೆ ತಿರುಗೇಟು ನೀಡುವ ಭರದಲ್ಲಿ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಜರಿದಿದ್ದರು. ಅಲ್ಲದೇ, ಸೋನಿಯಾ ಗಾಂಧಿ ಚೀನಾ ಮತ್ತು ಪಾಕಿಸ್ತಾನದ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಇದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ರಾಜಕೀಯ ಭಾಷಣದ ಘನತೆ ಕಾಪಾಡಿಕೊಳ್ಳದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ ಚುನಾವಣಾ ಆಯೊಗವು ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ.

ಸೋಲಿಲ್ಲದ ಸರದಾರ ಸಿ.ಟಿ.ರವಿಗೆ ಕಮಲದ ಗರಡಿಯಲ್ಲಿ ಪಳಗಿದ ತಮ್ಮಯ್ಯ ಟಕ್ಕರ್‌

ಈ ನಡುವೆ, ಪ್ರಿಯಾಂಕ್‌ ಖರ್ಗೆ ಅವರು ಏ.30ರಂದು ಕಲಬುರಗಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಮೋದಿ ಅವರನ್ನು ಉದ್ದೇಶಿಸಿ ನಾಲಾಯಕ್‌ ಮಗ ಎಂಬುದಾಗಿ ಹೇಳಿದ್ದರು. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗವು ಚುನಾವಣಾ ವಾತಾವರಣವನ್ನು ಹಾಳು ಮಾಡುವಂತಹ ಹೇಳಿಕೆ ನೀಡಲಾಗಿದೆ ಎಂದು ನೋಟಿಸ್‌ ಜಾರಿಗೊಳಿಸಿದೆ.