ಬೆಂಗಳೂರು(ಫೆ.26): ರಾಜ್ಯದಲ್ಲಿ ಪಕ್ಷ ಸಂಘಟನೆ ಚುರುಕುಗೊಳಿಸುವ ಸಲುವಾಗಿ ಮಾ.3ರಿಂದ ಕಾಂಗ್ರೆಸ್‌ ನೂರು ಪರಾಜಿತ ಕ್ಷೇತ್ರಗಳಲ್ಲಿ ಹಮ್ಮಿಕೊಂಡಿರುವ ಪ್ರವಾಸಕ್ಕೆ ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿ ಮಾ.1ರಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಪ್ರವಾಸದ ಸಿದ್ಧತೆ ಕುರಿತು ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ ದಿನ ಘೋಷಿಸಿದಂತೆ ಇದು ಪಕ್ಷದ ಪಾಲಿಗೆ ಸಂಘಟನೆ ಹಾಗೂ ಹೋರಾಟದ ವರ್ಷ. ಹೀಗಾಗಿ ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡಿರುವ 100 ಕ್ಷೇತ್ರಗಳಲ್ಲಿ ಮಾ. 3ರಿಂದ ಪ್ರವಾಸ ಹಮ್ಮಿಕೊಳ್ಳುತ್ತಿದ್ದೇವೆ. ಮಾ.3ರಂದು ದೇವನಹಳ್ಳಿಯಲ್ಲಿ ನಡೆಯಲಿರುವ ಮೊದಲ ಕಾರ್ಯಕ್ರಮಕ್ಕೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಯಡಿಯೂರಪ್ಪ ಸರ್ಕಾರ ಸತ್ತಿದೆ, ಭ್ರಷ್ಟಾಚಾರ ಮಿತಿಮೀರಿದೆ: ಸಿದ್ದರಾಮಯ್ಯ

ನಾಡಿಗೆ ದೇವ ಮೂಲೆಯಾಗಿರುವ ಕೋಲಾರದ ಮುಳಬಾಗಿಲಿನ ಕುರುಡುಮಲೆಯಲ್ಲಿ ಮಾ. 1ರಂದು ಪೂಜೆ ಸಲ್ಲಿಸಲಿದ್ದೇನೆ. ಬಳಿಕ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದೇನೆ. ಮಾ.3 ರಂದು ಬೆಳಗ್ಗೆ 8 ಗಂಟೆಗೆ ಕೆಪಿಸಿಸಿ ಕಚೇರಿಯಿಂದ ಹೊರಟು ದೇವನಹಳ್ಳಿಯಲ್ಲಿ ಮೊದಲ ಕಾರ್ಯಕ್ರಮ ನಡೆಸಲಾಗುವುದು. ಬಳಿಕ ಮಧ್ಯಾಹ್ನ 3.30 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಎರಡನೇ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಪಾದಯಾತ್ರೆ ಮೂಲಕ ಹೋರಾಟ:

ಪ್ರತಿಯೊಂದು ಕ್ಷೇತ್ರದಲ್ಲೂ ಜನರ ಮಧ್ಯೆಯೇ ಕಾರ್ಯಕ್ರಮ ನಡೆಸಲಿದ್ದೇವೆ. ಸರ್ಕಾರದಿಂದ ಎಲ್ಲಾ ವರ್ಗದ ಜನರೂ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ತೆರಿಗೆಗಳು, ಇಂಧನ ಬೆಲೆ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಸೇರಿ ಎಲ್ಲವೂ ಗಗನಕ್ಕೇರಿದೆ. ಜನರ ಜೀವನ ದುಸ್ತರಗೊಂಡಿದ್ದು ಇವರೆಲ್ಲರ ಧ್ವನಿಯನ್ನು ಸೇರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತೇವೆ. ಇದಕ್ಕಾಗಿ ಪ್ರತಿ ಕ್ಷೇತ್ರದಲ್ಲಿ 2 ರಿಂದ 5 ಕಿ.ಮೀ.ನಷ್ಟು ಪಾದಯಾತ್ರೆ ನಡೆಸುತ್ತೇವೆ. ಈ ವೇಳೆ ನಾನೂ ಸೇರಿದಂತೆ ಯಾರೂ ಸಹ ವಾಹನಗಳಲ್ಲಿ ಸಂಚರಿಸುವುದಿಲ್ಲ. ಎಲ್ಲರೂ ಕಾಲ್ನಡಿಗೆಯಲ್ಲೇ ಜಾಥಾ ನಡೆಸಲಿದ್ದೇವೆ. ಈ ವೇಳೆ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು. ಇನ್ನು ಮಾ. 4 ರಿಂದ ಬಜೆಟ್‌ ಅಧಿವೇಶನ ಶುರುವಾಗಲಿದ್ದು, ಶಾಸಕರು ಅಧಿವೇಶನದ ನಡುವೆಯೇ ಬಿಡುವು ಮಾಡಿಕೊಂಡು ಅವರವರ ಜಿಲ್ಲೆಗಳ ವ್ಯಾಪ್ತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.