ಬೆಂಗಳೂರು(ಫೆ.26): ರಾಜ್ಯ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ಕೊರೋನಾ ಸೋಂಕು ನಿರ್ವಹಣೆ ಹೆಸರಿನಲ್ಲಿ 36 ಸಾವಿರ ಕೋಟಿ ರು. ಸಾಲ ಮಾಡಿದ್ದು, ಖರ್ಚು ಮಾಡಿರುವ 6-7 ಸಾವಿರ ಕೋಟಿ ರು.ಗಳಲ್ಲಿ ಶೇ.50ಕ್ಕಿಂತ ಹೆಚ್ಚು ಹಣ ನುಂಗಿಬಿಟ್ಟಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಅಲ್ಲದೆ, ‘ಯಡಿಯೂರಪ್ಪ ನೀನು ನಿಂತು ಹೋಗಿರುವ ಡಕೋಟಾ ಬಸ್ಸಲ್ಲಿ ಕುಳಿತಿದ್ದೀಯ. ಆ ಬಸ್ಸಿನಲ್ಲೇ ಲೂಟಿ ಹೊಡೆಯಲು ಶುರು ಮಾಡಿದ್ದೀಯ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೇ ನೇರವಾಗಿ ಹೇಳಿದ್ದಾರೆ. ಇಂತಹ ಕೆಟ್ಟ ಸರ್ಕಾರವನ್ನು ತೆಗೆಯಲೇಬೇಕು. ಇದಕ್ಕೆ ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಕೂಡ ಕೈ ಜೋಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಮ್ಮವರೇ ಸೋಲಿಸಿದ್ರು: ಬಿಜೆಪಿ ನಾಯಕರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಶ್ರೀರಾಮುಲು

ಗುರುವಾರ ತಮ್ಮ ನಿವಾಸದಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ವಿಶೇಷ ಸಭೆಯಲ್ಲಿ ಶರತ್‌ ಬಚ್ಚೇಗೌಡ ಅವರಿಂದ ಬಾಹ್ಯ ಬೆಂಬಲ ಪತ್ರ ಪಡೆದು ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ಸತ್ತು ಹೋಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸತ್ತ ಸರ್ಕಾರವನ್ನು ಆಳುತ್ತಿದ್ದಾರೆ. 1 ರು. ಅಭಿವೃದ್ಧಿ ಕೆಲಸ ಮಾಡಲೂ ಹಣವಿಲ್ಲ ಎನ್ನುತ್ತಿದ್ದಾರೆ. ಇಂತಹವರು ಆಡಳಿತ ಏಕೆ ನಡೆಸಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಪ್ರತಿಯೊಂದು ಕಾಮಗಾರಿಗೂ ಕೊರೋನಾದಿಂದಾಗಿ ಖಜಾನೆ ಖಾಲಿಯಾಗಿದೆ ಎಂಬ ನೆಪ ನೀಡುತ್ತಿದ್ದಾರೆ. ಕೊರೋನಾ ನಿರ್ವಹಣೆಗಾಗಿಯೇ 36 ಸಾವಿರ ಕೋಟಿ ರು. ಸಾಲ ಮಾಡಿದ್ದಾರೆ. ಈವರೆಗೆ 6-7 ಸಾವಿರ ಕೋಟಿ ರು. ಖರ್ಚು ಮಾಡಿದ್ದು, ಇದರಲ್ಲಿ ಶೇ.50ಕ್ಕಿಂತ ಹೆಚ್ಚು ಹಣ ನುಂಗಿ ನೀರು ಕುಡಿದಿದ್ದಾರೆ. ಮಾನ, ಮರ್ಯಾದೆ ಇಲ್ಲದ ಲಜ್ಜೆಗೆಟ್ಟಸರ್ಕಾರವಿದು. ಹೀಗಾಗಿ ಹೇಗೆ, ಎಷ್ಟುಬೇಕಾದರೂ ನುಂಗಿ ನೀರು ಕುಡಿಯಬಹುದು ಎಂದು ದೂರಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ತೀವ್ರವಾಗಿ ವಿರೋಧಿಸಬೇಕು. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.