ಬಿಜೆಪಿ-ಜೆಡಿಎಸ್ ಕ್ಷಮಾಯಾತ್ರೆ ಮಾಡಲಿ: ಸಲೀಂ ಅಹಮದ್
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ನಾಟಕವಷ್ಟೇ. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಬಿಜೆಪಿ ತನ್ನ ಆಡಳಿತದ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ, ಈಗ ಯಾವುದೇ ದಾಖಲೆಗಳಿಲ್ಲದಿದ್ದರೂ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಮುಖ್ಯಮಂತ್ರಿಗಳ 40 ವರ್ಷಗಳ ಭ್ರಷ್ಟಾಚಾರ ರಹಿತ ರಾಜಕೀಯ ಜೀವನಕ್ಕೆ ಕಳಂಕ ತರುವ ಯತ್ನವಷ್ಟೇ ಎಂದ ಸಲೀಂ ಅಹಮದ್
ಬೆಂಗಳೂರು(ಜು.31): ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪಾದಯಾತ್ರೆ ಮಾಡುವ ಬದಲು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ಖಂಡಿಸಿ ಹಾಗೂ ರಾಜ್ಯದ ಜನರ ಬಳಿ ಕ್ಷಮೆ ಕೋರಲು ಬೆಂಗಳೂರಿನಿಂದ ದೆಹಲಿಗೆ ಕ್ಷಮಾಯಾತ್ರೆ ಮಾಡಲಿ ಎಂದು ವಿಧಾನಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ನಾಟಕವಷ್ಟೇ. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಬಿಜೆಪಿ ತನ್ನ ಆಡಳಿತದ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ, ಈಗ ಯಾವುದೇ ದಾಖಲೆಗಳಿಲ್ಲದಿದ್ದರೂ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಮುಖ್ಯಮಂತ್ರಿಗಳ 40 ವರ್ಷಗಳ ಭ್ರಷ್ಟಾಚಾರ ರಹಿತ ರಾಜಕೀಯ ಜೀವನಕ್ಕೆ ಕಳಂಕ ತರುವ ಯತ್ನವಷ್ಟೇ ಎಂದರು.
ಗೊಡ್ಡು ಬೆದರಿಕೆಗೆ ನಾವು ಮಣಿಯಲ್ಲ, ಮುಡಾ ಪಾದಯಾತ್ರೆ ನಿಶ್ಚಿತ: ವಿಜಯೇಂದ್ರ ಕಿಡಿ
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಅದಕ್ಕೆ ಕೆಟ್ಟ ಹೆಸರು ತರಬೇಕು ಎಂದು ಕೇಂದ್ರ ಸರ್ಕಾರ ಷಡ್ಯಂತ್ರ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಾಗಿರುವ ಭ್ರಷ್ಟಾಚಾರಗಳನ್ನು ಬಹಿರಂಗ ಮಾಡಿ, ಅವರನ್ನು ಬೆತ್ತಲೆಗೊಳಿಸುತ್ತೇವೆ. ವಾಲ್ಮೀಕಿ ನಿಗಮ ಹಾಗೂ ಮುಡಾ ನಿವೇಶನ ಹಂಚಿಕೆ ಅಕ್ರಮಗಳ ಕುರಿತು ಈಗಾಗಲೇ ತನಿಖೆ ನಡೆಸಲಾಗುತ್ತಿದೆ. ಆದರೂ, ರಾಜಕೀಯ ದುರುದ್ದೇಶದಿಂದ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮುಡಾ ಹಗರಣ: ಬಿಜೆಪಿ ಪಾದಯಾತ್ರೆಗೆ ಅನುಮತಿ ನೀಡೋದಿಲ್ಲ, ಸಚಿವ ಜಿ.ಪರಮೇಶ್ವರ್
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾತನಾಡುತ್ತಿಲ್ಲ. ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಚಕಾರ ಎತ್ತುತ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಸಂಸದರು, ಕೇಂದ್ರ ಸಚಿವರು ರಾಜ್ಯದ ಜನರನ್ನು ಕ್ಷಮೆ ಕೇಳಬೇಕು. ಅದರ ಜತೆಗೆ ಬೆಂಗಳೂರಿನಿಂದ ದೆಹಲಿಗೆ ಕ್ಷಮಾಯಾತ್ರೆ ಮಾಡಬೇಕು. ಪ್ರಧಾನಮಂತ್ರಿ, ವಿತ್ತ ಸಚಿವೆ ಬಳಿ ರಾಜ್ಯಕ್ಕಾಗಿರುವ ಅನ್ಯಾಯ ಕೇಳುವ ಧೈರ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗಿಲ್ಲ. ಹೀಗಾಗಿಯೇ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ-ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆಗೆ ಅವರ ಪಕ್ಷದಲ್ಲಿಯೇ ಸಹಮತವಿಲ್ಲ. ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಪಾದಯಾತ್ರೆಗೆ ಹೋಗುವುದಿಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಅವರ ಕಾಲದಲ್ಲಾಗಿರುವ ಹಗರಣಕ್ಕೆ ಅವರೇ ಪಾದಯಾತ್ರೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೊದಲು ಅವರ ಮನೆಯನ್ನು ಸರಿಪಡಿಸಿಕೊಳ್ಳಲಿ. ಆನಂತರ ನಮ್ಮ ವಿರುದ್ಧ ಮಾತನಾಡಲಿ ಎಂದು ವ್ಯಂಗ್ಯವಾಡಿದರು.