ಮೈಸೂರು, (ಡಿ.15): ಬನ್ನಿ ಇಬ್ಬರು ಪಕ್ಷೇತರವಾಗಿ ಸ್ಪರ್ಧೆ ಮಾಡೋಣ ಎಂದು ಎಂಎಲ್​​ಸಿ ರಘು ಆಚಾರ್ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಬಹಿರಂಗ ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು,  ಮೋದಿ ಫೋಟೋ ಇಟ್ಟುಕೊಂಡು ಗೆಲ್ಲುವುದಲ್ಲ. ಬನ್ನಿ ಇಬ್ಬರೂ ಪಕ್ಷೇತರವಾಗಿ ಸ್ಪರ್ಧೆ ಮಾಡೋಣ. ಜನರು ಯಾರಿಗೆ ಮತ ಹಾಕ್ತಾರೆ ನೋಡೋಣ. ಪಾಲಿಕೆ ಚುನಾವಣೆ ಆದ್ರು ಓಕೆ, ಎಂಎಲ್​​ಸಿ ಆದ್ರು ಓಕೆ, ಇಲ್ಲ ಎಂಪಿ ಚುನಾವಣೆಗೂ ಸೈ. ಇಬ್ಬರು ರಾಜೀನಾಮೆ ನೀಡಿ ಸ್ಪರ್ಧೆ ಮಾಡೋಣ. ಮತ್ತೆ ನಾನು ಮೈಸೂರು ರಾಜಕಾರಣಕ್ಕೆ ಬರುತ್ತೇನೆ ಎಂದು ಹೇಳಿದರು.

'ರೋಹಿಣಿ ಸಿಂಧೂರಿ IAS ಪಾಸ್ ಮಾಡಿರುವ ಬಗ್ಗೆ ಅನುಮಾನ' 

ಪ್ರತಾಪ್ ಸಿಂಹ ನನಗೆ ಪ್ರಿವಿಲೇಜ್ ಬಗ್ಗೆ ಹೇಳುತ್ತಾರೆ. ಇವರಿಗೆ ಪ್ರಿವಿಲೇಜ್ ಬಗ್ಗೆ ಗೊತ್ತಾ? ಪಾರ್ಲಿಮೆಂಟ್ ಮತ್ತು ಕೌನ್ಸಿಲ್ ಬಗ್ಗೆ ಮೊದಲು ತಿಳಿದವರಿಂದ ಇವರು ಕೇಳಿ ತಿಳಿಯಲಿ. ನಂತರ ಪ್ರಿವಿಲೇಜ್ ಬಗ್ಗೆ ಮಾತನಾಡಲಿ. ಇವರು ಹೇಳಿರುವುದು ಪ್ರಿವಿಲೇಜ್‌ನಲ್ಲಿ ಇದ್ದರೆ ನಾನು ರಾಜೀನಾಮೆ ನೀಡುತ್ತೇನೆ. ಇಲ್ಲದಿದ್ದರೆ ನೀವು ರಾಜೀನಾಮೆ ಕೊಡಿ ಎಂದು ವಾಗ್ದಾಳಿ ನಡೆಸಿದರು.

ಇವರು ಬೆತ್ತಲೆ ಜಗತ್ತು ಎಂಬ ಪುಸ್ತಕ ಬರೆದಿದ್ದಾರೆ. ಯಾಕೋ ಆ ಪುಸ್ತಕವನ್ನ ಅವರು ಬರೆದಿಲ್ಲ ಅನಿಸುತ್ತದೆ. ಯಾರೋ ಬರೆದಿರುವ ಪುಸ್ತಕಕ್ಕೆ ಇವರು ಸಹಿ ಹಾಕಿದ್ದಾರೆ ಎಂದು ರಘು ಆಚಾರ್ ಆರೋಪಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧವೂ ಅಸಮಾಧಾನ ಹೊರಹಾಕಿದ ರಘು ಆಚಾರ್, ರೋಹಿಣಿ ಸಿಂಧೂರಿ ಅವರು ಐಎಎಸ್ ಪಾಸ್ ಮಾಡಿರುವುದರ ಬಗ್ಗೆ ನನಗೆ ಈಗಲೂ ಅನುಮಾನವಿದೆ. ಐಎಎಸ್ ಪಾಸ್ ಮಾಡಿದ್ರೆ ಅವರು ಸಂವಿಧಾನದ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ನನಗೆ ಅನಿಸುವುದನ್ನ ನಾನು ಹೇಳುತ್ತಿದ್ದೇನೆ. ಬೇರೆಯವರ ಹೇಳಿಕೆಗಳು ನನಗೆ ಮುಖ್ಯವಲ್ಲ. ಡಿಸಿ ಆ ರೀತಿ ನಡೆದುಕೊಂಡಿದ್ದಾರೆ. ಅವರ ನಡತೆಯ ಮೇಲೆ ನಾನು ಈ ರೀತಿ ಮಾತನಾಡಿದ್ದೇನೆ ಎಂದು ತಮ್ಮ ಈ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡರು.