'ರೋಹಿಣಿ ಸಿಂಧೂರಿ IAS ಪಾಸ್ ಮಾಡಿರುವ ಬಗ್ಗೆ ಅನುಮಾನ'
ಮೈಸೂರು ಜಿಲ್ಲೆಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವೆ ವಾಕ್ಸಮರ ಮುಂದುವರೆದಿದೆ.
ಮೈಸೂರು, (ನ.27): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಐಎಎಸ್ ಪಾಸ್ ಮಾಡಿರುವ ಬಗ್ಗೆ ನನಗೆ ಅನುಮಾನ ಇದೆ. ನಿಜವಾಗಿಯೂ ಪಾಸ್ ಆಗಿದ್ದರೆ ಆಡಳಿತದ ಬಗ್ಗೆ ಸಾಮಾನ್ಯ ಜ್ಞಾನವಾದರೂ ಇರಬೇಕಲ್ವಾ ಎಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಪ್ರಶ್ನಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಾಂಗ್ರೆಸ್ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಇಂದು (ಶುಕ್ರವಾರ) ಜಂಟಿ ಸುದ್ದಿಗೋಷ್ಠಿಯ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದು, ರೋಹಿಣಿ ಸಿಂಧೂರಿ ಪ್ರಭಾವ ಬಳಸಿ ಪಾಸ್ ಆಗಿದ್ದಾರಾ? ಎಂಬ ಅನುಮಾನವಿದೆ. ಅವರು ಸರ್ವಾಧಿಕಾರಿಯಂತೆ ನಡೆದುಕೊಳ್ಳುವುದು ಬಿಟ್ಟು ಜಿಲ್ಲಾಧಿಕಾರಿಯಂತೆ ನಡೆದುಕೊಳ್ಳಲಿ. ಇದನ್ನು ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಇದನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ರೋಹಿಣಿ ಸಿಂಧೂರಿ ಜೊತೆಗೆ ಶಾಸಕರ ಗುದ್ದಾಟ : ಪತ್ರ ಬರೆದು ಟಾಂಗ್ ನೀಡದ್ರು ಡಿಸಿ
ಕಾಂಗ್ರೆಸ್ ಶಾಸಕ ಹೆಚ್ಪಿ ಮಂಜುನಾಥ್ ಅವರ ವಿರುದ್ಧ ವೈಯಕ್ತಿಕವಾಗಿ ದಾಳಿ ನಡೆಸುತ್ತಿರುವುದಕ್ಕೆ ಇನ್ನು ಎರಡು ದಿನದಲ್ಲಿ ಅವರು ಕ್ಷಮೆ ಕೇಳಬೇಕು. ಅಥವಾ ಅವರು ಶಾಸಕ ಮಂಜುನಾಥ್ ಅವರಿಗೆ ಬರೆದ ಪತ್ರ ಹೇಗೆ ಹೊರಗೆ ಬಂತು? ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ಡಿ. 7ರಂದು ನಾನು ಹಕ್ಕು ಚ್ಯುತಿ ಮಂಡಿಸುತ್ತೇನೆ. ಅವರು ಬಂದು ಉತ್ತರ ಕೊಡಲಿ. ಸುಮ್ಮನೆ ಶೋ ಮಾಡಿಕೊಂಡು ರಥ ಎಳೆದುಕೊಂಡು ಓಡಾಡುವುದಲ್ಲ. ಕೋವಿಡ್ ಬಿಕ್ಕಟ್ಟನ್ನು ನೀವು ಒಬ್ಬರೇ ನಿರ್ವಹಣೆ ಮಾಡುತ್ತಿಲ್ಲ. ನೀವು ಅದರ ಒಂದು ಭಾಗ ಅಷ್ಟೇ. ಈ ತರದವರು ಡಿಸಿ ಆದರೆ ದೇವರೇ ಕಾಪಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಜೆಡಿಎಸ್ ನಾಯಕರಾದ ಎಚ್.ಡಿ.ರೇವಣ್ಣ ಹಾಗೂ ಸಾರಾ ಮಹೇಶ್ ಕಿಡಿಕಾರಿದ್ದರು. ಬಳಿಕ ಹುಣಸೂರು ಕಾಂಗ್ರೆಸ್ ಶಾಸಕ ಮಂಜುನಾಥ್ ಗರಂ ಆಗಿದ್ರು. ಈಗ ಕಾಂಗ್ರೆಸ್ ನಾಯಕರಾದ ಮಂಜುನಾಥ್ ಹಾಗೂ ವಿಧಾನಪರಿಷತ್ ಸದಸ್ಯ ರಘು ಆಚಾರ್ ಸರದಿ.