ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರ ಉರುಳಿಸಲು ಯತ್ನ: ಈರಣ್ಣ ಕಡಾಡಿ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ವಾರಂಟಿ ಚುನಾವಣೆಯ ಫಲಿತಾಂಶದ ಬಳಿಕ ಮುಗಿಯುತ್ತದೆ. ಕಾಂಗ್ರೆಸ್ ಪಕ್ಷದ ಶಾಸಕರೇ ಈ ಸರ್ಕಾರವನ್ನು ಉರುಳಿಸಲು ಪ್ರಯತ್ನ ನಡೆಸಿದ್ದಾರೆ ಎಂದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
ಐಗಳಿ(ಮೇ.03): ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಈ ಬಾರಿಯೂ ಆಯ್ಕೆ ಮಾಡಬೇಕು. ಈ ಹಿನ್ನಲೆಯಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರಿಗೆ ನರೇಂದ್ರ ಮೋದಿಯವರ ಸಾಧನೆಗಳ ಬಗ್ಗೆ ತಿಳಿಸುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಕೋಹಳ್ಳಿ ಗ್ರಾಮದ ಹೊರ ವಲಯದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ವಾರಂಟಿ ಚುನಾವಣೆಯ ಫಲಿತಾಂಶದ ಬಳಿಕ ಮುಗಿಯುತ್ತದೆ. ಕಾಂಗ್ರೆಸ್ ಪಕ್ಷದ ಶಾಸಕರೇ ಈ ಸರ್ಕಾರವನ್ನು ಉರುಳಿಸಲು ಪ್ರಯತ್ನ ನಡೆಸಿದ್ದಾರೆ ಎಂದರು.
ಬಿಜೆಪಿಯದ್ದು ಜನ ವಿರೋಧಿ ಸರ್ಕಾರ: ಎಂಎಲ್‌ಸಿ ಉಮಾಶ್ರೀ
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಶಹಜಹಾನ ಡೊಂಗರಗಾಂವ ಮಾತನಾಡಿ, ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ದೇಶದ ಚಿತ್ರಣವನ್ನೇ ಬದಲು ಮಾಡಿದ್ದಾರೆ. ಪ್ರಧಾನ ಮಂತ್ರಿ ಮೋದಿಯವರ ಕೈ ಬಲಪಡಿಸಲು ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಇವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಕೋರಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಚಿಕ್ಕೋಡಿ ಕ್ಷೇತ್ರದಲ್ಲಿ 650 ಗ್ರಾಮಗಳಿದ್ದು, ಅದರಲ್ಲಿ 550 ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ಅಭಿವೃದ್ದಿಯ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದ ಪ್ರಕಾರ ಪ್ರತಿ ಗ್ರಾಮಕ್ಕೆ ₹ 5 ಲಕ್ಷ ಅನುದಾನ ಕೊಟ್ಟಿದ್ದೇನೆ. ಅಲ್ಲದೆ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ತಾಲೂಕಾಧಿಕಾರಿಗಳಿಂದ ಸಮಸ್ಯೆಗೆ ಪರಿಹಾರ ಒದಗಿಸಿದ್ದೇನೆ. ಎಲ್ಲವನ್ನು ಗಮನಿಸಿ ತನಗೆ ಮತ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಸಿದ್ದಪ್ಪ ಮುದಕಣ್ಣವರ, ಅಪ್ಪಾಸಾಬ ಅವತಾಡೆ, ಉಮೇಶರಾವ ಬಂಟೋಡಕರ, ಬಿಜೆಪಿ ತಾಲೂಕಾಧ್ಯಕ್ಷ ಡಾ.ರವಿ ಸಂಖ, ಸತ್ಯೆಪ್ಪಾ ಬಾಗೆನ್ನವರ, ರವಿ ಪೂಜಾರಿ, ನಿಂಗಪ್ಪ ಕೋಕಳೆ, ಗಿರೀಶ ಬುಟಾಳೆ, ಡಾ.ಎಸ್.ಐ.ಇಂಚಗೇರಿ, ಶಿವಾನಂದ ಸಿಂಧೂರ, ದೀಪಕ ಬುರ್ಲಿ, ತಾಲೂಕ ಮಂಡಳ ಉಪಾಧ್ಯಕ್ಷ ಶ್ರೀಶೈಲ ಮಿರ್ಜಿ, ಜಗದೀಶ ತೆಲಸಂಗ, ಭೀಮು ಕೇರಿ ಸೇರಿದಂತೆ ಕೋಹಳ್ಳಿ ಕಾರ್ಯಕರ್ತರು ಇದ್ದರು. ಕುಮಾರ ಮುಧೋಳ ಸ್ವಾಗತಿಸಿದರು, ಪ್ರಕಾಶ ಬಿರಾದಾರ ನಿರೂಪಿಸಿ ವಂದಿಸಿದರು.