ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಒಂದೇ ಇದ್ದಾರೆ. ಕಳೆದ ವರ್ಷವೆ ದುಬೈಗೆ ಹೋಗುವ ಕಾರ್ಯಕ್ರಮ ಇತ್ತು. ಸಿದ್ದರಾಮಯ್ಯನವರ ನಿರ್ದೇಶನದಂತೆ ಎಲ್ಲ ನಡೆದಿರುತ್ತದೆ. ಕಾಂಗ್ರೆಸ್ ನಲ್ಲಿ ಗುಂಪು ರಾಜಕೀಯ ಇದೆ. 

ವಿಜಯಪುರ (ಜ.18): ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಒಂದೇ ಇದ್ದಾರೆ. ಕಳೆದ ವರ್ಷವೆ ದುಬೈಗೆ ಹೋಗುವ ಕಾರ್ಯಕ್ರಮ ಇತ್ತು. ಸಿದ್ದರಾಮಯ್ಯನವರ ನಿರ್ದೇಶನದಂತೆ ಎಲ್ಲ ನಡೆದಿರುತ್ತದೆ. ಕಾಂಗ್ರೆಸ್ ನಲ್ಲಿ ಗುಂಪು ರಾಜಕೀಯ ಇದೆ. ರಾಷ್ಟ್ರೀಯ ಅಧ್ಯಕ್ಷರು ಎಚ್ಚರಿಕೆ ಕೊಟ್ಟರು ಕೇರ್ ಮಾಡದಷ್ಟು ಅಸಮಾಧಾನ ಇದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದ ಯತ್ನಾಳ್ ಹೇಳಿಕೆ: ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ, ಕಾಂಗ್ರೆಸ್ ಶಾಸಕರೇ ನಮ್ಮನ್ನು ಅಪ್ರೋಚ್ ಮಾಡಿ ಇಷ್ಟು ಜನ ಬರುತ್ತೇವೆ. ಈ ಸರ್ಕಾರ ತೆಗೆದು ಹಾಕೋಣ ಎಂದಿದ್ದರು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಆಗುತ್ತಿಲ್ಲ. ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ನಮ್ಮ ಬಳಿ ಹೇಳಿದರು. ಕಾಂಗ್ರೆಸ್ನ 40- 50 ಶಾಸಕರನ್ನು ತೆಗೆದುಕೊಂಡು ಮತ್ತೆ ಅದೇ ಹೊಲಸು ಕೆಲಸ ಮಾಡುವುದು ಬೇಡ. ಜನರು ಅವರಿಗೆ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ತೊಂದರೆ ಮಾಡುವುದು ಬೇಡ ಎಂದು ಯಾವುದೇ ಆಪರೇಷನ್ ಮಾಡಲು ನಾವು ಮುಂದೆ ಬಂದಿಲ್ಲ. ಅವರಲ್ಲಿಯೇ ಜಗಳ ಹತ್ತಿದೆ. ಸಿಎಂ ಅಧಿಕಾರ ಹಂಚಿಕೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಪ್ಪಂದ ಆಗಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ಗೊಂದಲಗಳಿಂದ ಕಾಂಗ್ರೆಸ್ ಸರ್ಕಾರ ಕೆಲವೇ ದಿನಗಳಲ್ಲಿ ಪತನ ಆಗುವುದು ನಿಶ್ಚಿತ.
ಮಧ್ಯಂತರ ಚುನಾವಣೆಯಾದರೂ ಆಶ್ಚರ್ಯವಿಲ್ಲ ಎಂದು‌ ಯತ್ನಾಳ‌ ಭವಿಷ್ಯ ನುಡಿದರು.

ಕರ್ನಾಟಕ ಗಂಡಸರು ಕಾಂಗ್ರೆಸ್‌ಗೆ ಮತ ಹಾಕಬೇಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಎಸ್ಸಿ, ಎಸ್ಟಿ ಸಮಾಜದ ಶಾಸಕರೇ ನಮ್ಮನ್ನು ಸಂಪರ್ಕಿಸಿದ್ದರು: ಅರ್ಹತೆ ಇರುವವರು ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಆಗಲಿಲ್ಲ. ಎಸ್ಸಿ, ಎಸ್ ಟಿ ಹಣವನ್ನೇ ತಿನ್ನಲಾಗುತ್ತಿದೆ. ಹಣವನ್ನೆಲ್ಲ ಗ್ಯಾರೆಂಟಿ ಯೋಜನೆಗಳಿಗೆ ಹಾಕಿಕೊಂಡಿರಿ. ಅಂಬೇಡ್ಕರ್ ಬಗ್ಗೆ ಗೌರವ ತೋರಿಸುವ ಫೋಟೋ, ಸಂವಿಧಾನ ಪ್ರತಿ ಹಿಡಿಯುವ ನಿಮಗೆ ನಾಚಿಕೆಯಾಗಬೇಕು. ಎಲ್ಲ ನಿಗಮ ಮಂಡಳಿಗಳಲ್ಲಿ ಅವ್ಯವಹಾರ ನಡೆದಿದೆ. ಕಾಂಗ್ರೆಸ್ ಪಕ್ಷ ಎಸ್ಸಿ,ಎಸ್ಟಿ ಸಮಾಜದ ವಿರೋಧಿಯಾಗಿದೆ. ಹಾಗಾಗಿ ಎಸ್ಸಿ ಎಸ್ಟಿ ಸಮಾಜದ ಶಾಸಕರೇ ನಮ್ಮನ್ನು ಸಂಪರ್ಕಿಸಿದ್ದರು ಎಂದು ಯತ್ನಾಳ ಹೇಳಿಕೆ ನೀಡಿದರು.

ನಿಷ್ಪಕ್ಷರಿಗೆ ಚುನಾವಣೆ ಉಸ್ತುವಾರಿ ಮಾಡಿ: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರ ಆಯ್ಕೆಗೆ ಕೇಂದ್ರದಿಂದ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಉಸ್ತುವಾರಿ ಹಾಗೂ‌ ಚುನಾವಣೆ ನಡೆಸುವುದಾಗಿ ಹೇಳಿರುವ ವಿಚಾರಕ್ಕೆ‌ ಶಾಸಕ ಯತ್ನಾಳ‌ ಮಾತನಾಡಿ, ಶಿವರಾಜ್ ಸಿಂಗ್ ಚವ್ಹಾಣ್ ಅವರು ಹೇಳಿದಂತೆ‌ ಚುನಾವಣೆ ನಡೆಸುವುದು ಸೂಕ್ತ, ಹಾಲಿ ಅಧ್ಯಕ್ಷರಿಗೆ ಅಧಿಕಾರ ಕೊಡಬಾರದು. ಪಕ್ಷದ ಅಧ್ಯಕ್ಷರುಗಳ ಆಯ್ಕೆ‌ಗೆ ಯಾರದೋ ಒತ್ತಡಕ್ಕೆ‌ ಮಣೆಹಾಕದೇ, ಯಾರ ಮಾತು ಕೇಳದೇ ಪಾರದರ್ಶಕವಾಗಿ ಚುನಾವಣೆ ನಡೆಸುವವರನ್ನು ಅಥವಾ ಹೊರ ರಾಜ್ಯದವರನ್ನು ಜಿಲ್ಲಾ‌ ಉಸ್ತುವಾರಿಗಳನ್ನಾಗಿ ನೇಮಿಸಬೇಕೆಂದು ಮನವಿ ಮಾಡಿಕೊಂಡರು. 

ರಾಜ್ಯಾಧ್ಯಕ್ಷ ಸ್ಥಾನಕ್ಕೆ‌ ನಮ್ಮ ತಂಡದಿಂದ ಅಭ್ಯರ್ಥಿ ನಿಲ್ಲಿಸುವ ಚಿಂತನೆ: ಇದೇ ವೇಳೆ ಬಿ.ವೈ.ವಿಜಯೇಂದ್ರ ಮತ್ತೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳಿಗೆ ಯತ್ನಾಳ ಪ್ರತಿಕ್ರಿಯಿಸಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಸ್ಪರ್ಧಿಸುವ ಹಕ್ಕಿದೆ. ರಾಜ್ಯಾಧ್ಯಕ್ಷ ಚುನಾವಣೆ ಬಂದಾಗ ನಾವು ಒಂದು ಪ್ರಕಟಣೆ ನೀಡಲಿದ್ದೇವೆ ಎಂದ ಅವರು, ಚುನಾವಣೆ ಆಗುವುದಾದರೆ ನಮ್ಮ ಗುಂಪಿನಲ್ಲೂ ಸಿದ್ದತೆ ಮಾಡಿಕೊಂಡಿದ್ದೇವೆ. ಬಿಜೆಪಿಯ ಮೂಲ ಸಿದ್ದಾಂತ, ನಿಷ್ಠಾವಂತ ಕಾರ್ಯಕರ್ತರು ಹಾಗೂ ಹಿಂದೂಗಳ ರಕ್ಷಣೆಗಾಗಿ, ವಕ್ಪ್ ವಿರುದ್ಧ ಹೋರಾಟಕ್ಕೆ ಬಲ‌ ತುಂಬುವಂತಹ ಮತ್ತು ಬಿಜೆಪಿಯನ್ನು ಕಲುಷಿತ ವ್ಯಕ್ತಿಗಳಿಂದ‌ ಮುಕ್ತ ಮಾಡಲು ನಮ್ಮ ತಂಡದಿಂದ ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸಲು ಗಂಭೀರ ಚಿಂತನೆ ನಡೆಸಿದ್ದೇವೆ ಎಂದರು. ಯತ್ನಾಳ‌ ಅವರೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಲ್ಲುತ್ತಾರೆ ಎಂಬ ಮಾತಿಗೆ, ಯಾರು ನಿಲ್ಲುತ್ತಾರೆ ಗೊತ್ತಿಲ್ಲ, ಎಲ್ಲರೂ ಸೇರಿ ನಿರ್ಣಯಿಸುವವರು ಸ್ಪರ್ಧಿಸಬಹುದು ಎಂದರು.

ಬಿಎಸ್ವೈ ಸಿಎಂ‌ ಆಗುವಲ್ಲಿ ಜಾರಕಿಹೊಳಿ ಕಾರಣ: ಬಿಎಸ್ ಯಡಿಯೂರಪ್ಪ ಅವರು ಹಿರಿಯ ಮುತ್ಸದಿ, ಸೈಕಲ್ ತುಳಿದು ಪಕ್ಷ ಕಟ್ಟಿದ್ದಾರೆ ಎಂಬ ಕೆಲ ನಾಯಕರ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ, ರಮೇಶ ಜಾರಕಿಹೊಳಿ ಅವರು‌ 17 ಜನ ಬಿಜೆಪಿಗೆ ಬರದಿದ್ದರೆ ಯಡಿಯೂರಪ್ಪ ಸಿಎಂ ಆಗುತ್ತಿದ್ದರಾ ವಿಜಯೇಂದ್ರ ಅವರೇ.?. ಯಡಿಯೂರಪ್ಪ ಸಿಎಂ ಆಗಲು, ನೀವು ಇಷ್ಟು ದುಡ್ಡು ಮಾಡಲು ರಮೇಶ ಜಾರಕಿಹೊಳಿ ಅವರೇ ಕಾರಣ, ನೀವು ಎಷ್ಟು ದುಡ್ಡು ಮಾಡಿದ್ದೀರಿ ಇಡಿ‌ ಜಗತ್ತಿಗೆ ಗೊತ್ತಿದೆ. ರಮೇಶ ಜಾರಕಿಹೊಳಿ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ, ಅವರು ಎಸ್ಟಿ ಸಮುದಾಯದ ನಾಯಕರು, ನೀರಾವರಿ ಮಂತ್ರಿಯಾಗಿ ಅವರು ಉತ್ತಮ ಕೆಲಸ ಮಾಡುತ್ತಿದ್ದರು. ಅವರನ್ನು ಬಲಿ ಕೊಡುವಲ್ಲಿ ನಿಮ್ಮ ಪಾಲು ಎಷ್ಟಿದೆ ಗೊತ್ತಿದೆ. ಇಡಿ ಅವರಿಗೆ ಕಂಡಕ್ಟರ್ ಮನೆಯಲ್ಲಿ ಸಿಕ್ಕ ಸಾವಿರಾರು ಕೋಟಿ ಹಣ, ಬಾಂಡ್ ಯಾರದು ವಿಜಯೇಂದ್ರ ಅವರೇ ಎಂದು ಯತ್ನಾಳ‌ ಪ್ರಶ್ನಿಸಿದರು.

ಎಷ್ಟೋ ಕಾರ್ಯಕರ್ತರು ನಡೆದಾಡಿ, ಉಪವಾಸವಿದ್ದು, ಕೆಲವು ಹಳ್ಳಿಗಳಲ್ಲಿ ನೀರು ಸಿಗದೇ ಕಷ್ಟಪಟ್ಟು ಹೋರಾಟ ಮಾಡಿದ್ದಾರೆ. ಜಗನ್ನಾಥ ರಾವ್ ಜೋಶಿ, ಬಸವರಾಜ ಪಾಟೀಲ ಸೇಡಂ, ಅನಂತಕುಮಾರ್, ಈಶ್ವರಪ್ಪ, ರಾಮಚಂದ್ರ ವೀರಪ್ಪ ಹೀಗೆ ಅನೇಕರನ್ನು ಸ್ಮರಣೆ ಮಾಡಿಕೊಳ್ಳಬೇಕು. ಎಲ್ಲ ಸಮುದಾಯದವರು ಬಿಜೆಪಿಗೆ ಬಂದಿದ್ದರಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ನಾನು ಸೈಕಲ್ ತುಳಿದಿದ್ದೇನೆ, ಎಲ್ಲಾ‌ ಅನುಭವಿಸಿದ್ದೇವೆ‌. ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರು ಯಾವ ಅಧಿಕಾರ, ಹುದ್ದೆ ಅನುಭವಿಸಿಲ್ಲ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೆ ಯಾವ ನಾಯಕರು ಹೋಗಿ‌ ಕನಿಷ್ಠ ಸಾಂತ್ವಾನ ಹೇಳಿಲ್ಲ ಎಂಬ ಕೊರಗಿನಲ್ಲಿ ಸತ್ತಿದ್ದಾರೆ. ವಿಜಯೇಂದ್ರ ಅವರೇ ಇಂತಹವರ ಬಗ್ಗೆ ಯೋಚಿಸಿ, ಕೇವಲ‌ ನಿಮ್ಮ‌ ಪೂಜ್ಯ ತಂದೆಯವರ ಬಗ್ಗೆ ಅಲ್ಲ ಎಂದರು. 

ಮತ್ತೆ ಪಕ್ಷ ಸೇರುವಲ್ಲಿ ಯಡಿಯೂರಪ್ಪ ನನ್ನ ಜೂನಿಯರ್: ಪೂಜ್ಯ ತಂದೆಯವರು ನಾಲ್ಕು ಬಾರಿ ಸಿಎಂ ಆಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಸೋತಾಗ ವಿಧಾನ ಪರಿಷತ್ ಸದಸ್ಯ ಮಾಡಿದ್ದೆ ಪಕ್ಷ. ರಮೇಶ್ ಜಾರಕಿಹೊಳಿ ಮೊನ್ನೆ ಬಂದಿದ್ದಾರೆ ಅಂತ ಹೇಳುತ್ತೀರಿ. ಪಕ್ಷ ಬಿಟ್ಟ ಬಳಿಕ ಮೊದಲು ನಾನು ಬಿಜೆಪಿ ಸೇರಿದೆ. ಆಗ ಒಂದು ತಿಂಗಳ ನಂತರ ಯಡಿಯೂರಪ್ಪ ಬಿಜೆಪಿ‌ ಸೇರಲು ಬಿಜೆಪಿ‌ ವರಿಷ್ಠರಿಗೆ ಶಿಫಾರಸ್ಸು ಮಾಡಿದ್ದೇ ನಾನು. ಯಡಿಯೂರಪ್ಪ ನನ್ನ ಜೂನಿಯರ್. ವಿಜಯೇಂದ್ರ ಧೀಮಂತ ಪೂಜ್ಯ ತಂದೆಯವರನ್ನು ಜೈಲಿಗೆ ಕಳಿಸಿದೆ ಮಹಾನ್ ನಾಯಕ. ಕಲೆಕ್ಷನ್ ಏಜೆಂಟ್ ಆಗಿರುವ ವಿಜಯೇಂದ್ರ ರಾಜ್ಯಾಧ್ಯಕ್ಷ ಅಗುವವರೆಗೂ ಪಕ್ಷಕ್ಕೆ ಏನು ಮಾಡಿಲ್ಲ, ಜವಾಬ್ದಾರಿ ನೀಗದಿದ್ದರೆ ರಾಜೀನಾಮೆ ಕೊಡು, ಹೊಸ‌ ರಾಜ್ಯಾಧ್ಯಕ್ಷ ಬರುತ್ತಾರೆ. ನಮ್ಮ ಕೈಯಲ್ಲಿ ಪಕ್ಷ ಬಂದರೆ 130 ಸೀಟ್ ತರದಿದ್ದರೆ ರಾಜೀನಾಮೆ ಕೊಟ್ಟು ಹೊರಗೆ ಹೋಗುತ್ತೇವೆ. ತಾಕತ್ ಇದ್ದರೆ ಬಾ ಎಂದು ಬಿ.ವೈ.ವಿಜಯೇಂದ್ರ ಅವರಿಗೆ ಯತ್ನಾಳ ನೇರ ಸವಾಲು ಹಾಕಿದರು.

ವಕ್ಫ್ ಮಂಡಳಿ ದೇಶಕ್ಕಂಟಿದ ಕ್ಯಾನ್ಸರ್‌ ಇದ್ದಂತೆ, ಅದನ್ನು ದೇಶದಿಂದ ತೊಲಗಿಸಬೇಕು: ಶಾಸಕ ಯತ್ನಾಳ್

ನೋ ಆಪರೇಷನ್, ಓನ್ಲಿ ಕಾಂಗ್ರೆಸ್ ಡೈವರ್ಶನ್: ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಜಾರಕಿಹೊಳಿ ಕುಟುಂಬ ಸುತ್ತಲಿರುತ್ತವೆ ಎಂಬ ಮಾತಿಗೆ ಯತ್ನಾಳ, ಜಾರಕಿಹೊಳಿಯವರು ಶಕ್ತಿಯಾಗಿ ಬೆಳೆದಿದ್ದಾರೆ. ಶಕ್ತಿ ಇದ್ದವರನ್ನು ರಾಜಕಾರಣದಲ್ಲಿ ಹೋಲಿಕೆ ಮಾಡುತ್ತಾರೆ. ಆ ಕಡೆ ಸತೀಶ್ ಜಾರಕಿಹೊಳಿ ಈ ಕಡೆ ರಮೇಶ್ ಜಾರಕಿಹೊಳಿ ಶಕ್ತಿಯಾಗಿ ಬೆಳೆದಿದ್ದಾರೆ. 17 ಜನರನ್ನು ತರುವುದು ಸಾಮಾನ್ಯವಲ್ಲ. ಈಗಲೂ 60 ಮಂದಿ ಬಿಜೆಪಿಗೆ ಬರಲು ರೆಡಿಯಾಗಿದ್ದಾರೆ. ಆದರೆ ದೇವರಾಣೆ ನಮಗೆ ಆ ಇಚ್ಚೆ ಇಲ್ಲ, ಕಾರಣ ಬಿಜೆಪಿಯ ಸಿದ್ಧಾಂತಗಳು ಹಾಳಾಗುತ್ತಿವೆ, ಹಿಂದುಗಳ ಮೇಲೆ ಅತ್ಯಾಚಾರವಾಗುತ್ತಿದೆ. ಈ ಬಾರಿ ಬಲಿಯಾಗುವುದು ಬೇಡ. ನೇರವಾಗಿ ಜನರ ಮುಂದೆ ಹೋಗುತ್ತೇವೆ. ನರೇಂದ್ರ ಮೋದಿಯವರ ಶಕ್ತಿ ಇದೆ, ಯಾರು ಮನೆಗೆ ಹೋಗಿ ಕೈ ಹಿಡಿದು ಕರೆದುಕೊಂಡು ಬರುವುದಿಲ್ಲ. ನಮ್ಮ ಕಾರ್ಯಕರ್ತರನ್ನೇ ಶಾಸಕರನ್ನಾಗಿ ಮಾಡುತ್ತೇವೆ. ನೋ ಆಪರೇಷನ್ ಎಂದ ಯತ್ನಾಳ ಓನ್ಲಿ ಕಾಂಗ್ರೆಸ್ ಡ್ರೈವರ್ಷನ್, ಮುಂದೆ ರಾಜ್ಯದಲ್ಲಿ ಬಿಜೆಪಿಗೆ ಜನ ಪರ್ಮಿಷನ್ ಕೊಡುತ್ತಾರೆ, ನಾವು ಸೆಲೆಕ್ಷನ್ ಆಗುತ್ತೇವೆ, ಸರ್ಕಾರ ನಡೆಸುತ್ತೇವೆ ಎಂದರು.