ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು 26 ಎಕರೆ ಸರ್ಕಾರಿ ಗೋಮಾಳ ಭೂಮಿಯನ್ನು ಕಬಳಿಸಿ ಪತ್ನಿ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಒಟ್ಟು 108 ಎಕರೆ ಸರ್ಕಾರಿ ಗೋಮಾಳ ಭೂಮಿ ಕಬಳಿಕೆಯಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖವಿದೆ.
ಬೆಂಗಳೂರು (ಜು.31): ಬೆಂಗಳೂರು ದಕ್ಷಿಣ ಜಿಲ್ಲೆ (ಹಳೆಯ ರಾಮನಗರ) ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸರ್ಕಾರಿ ಗೋಮಾಳದ 26 ಎಕರೆ ಭೂಕಬಳಿಕೆ ಮಾಡಿ ಹೆಂಡತಿ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದಾಖಲೆಗಳ ಸಮೇತವಾಗಿ ದೂರು ಸಲ್ಲಿಕೆ ಮಾಡಿದ್ದಾರೆ.
ಸರ್ಕಾರಿ ಗೋಮಾಳ ಜಮೀನು ಪತ್ನಿ ಹೆಸರಿಗೆ?
ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ನೀಡಿದ ದೂರಿನಲ್ಲಿ ಭಾರೀ ಗಂಭೀರ ಆರೋಪಗಳಿದ್ದು, ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಸರ್ವೆ ನಂ. 233, 234, 235, 236ರೊಳಗಿನ ಒಟ್ಟು 26 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಕಬಳಿಸಿದ್ದಾರೆ. ಅವುಗಳಲ್ಲಿ 8 ಎಕರೆ (ಮೌಲ್ಯ ರೂ. 54 ಕೋಟಿ) ಜಮೀನನ್ನು ತಮ್ಮ ಪತ್ನಿ ರಾಧಾ ಬಾಲಕೃಷ್ಣ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪವನ್ನು ಹೊರಹಾಕಿದ್ದಾರೆ.
ನಕಲಿ ದಾಖಲೆ, ನಕಲಿ ದಾಖಲೆಗಳ ಆಧಾರದಲ್ಲಿ ಜಮೀನು ರಿಜಿಸ್ಟ್ರೇಷನ್?
ಇನ್ನು, ಜಮೀನಿನ ಮೌಲ್ಯ ಶೇ.165 ಕೋಟಿ ಆಗಿದ್ದು, ಈ ವಹಿವಾಟುಗಳೆಲ್ಲಾ ನಕಲಿ ದಾಖಲೆಗಳ ಆಧಾರದ ಮೇಲೆ ಮೂರನೇ ವ್ಯಕ್ತಿಗೆ ಮಂಜೂರು ಮಾಡಿದ ನಂತರ, ನಂತರ ಪತ್ನಿ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ. 2025ರ ಏಪ್ರಿಲ್ 3ರಂದು ಕೆಂಗೇರಿ ಉಪ ನೋಂದಣಿ ಕಚೇರಿಯಲ್ಲಿ ರಿಜಿಸ್ಟ್ರೇಷನ್ ನಡೆದಿದೆ ಎನ್ನಲಾಗಿದೆ. ಇದಿಷ್ಟು ಮಾತ್ರವಲ್ಲ, ಇಂತಹ ಭೂ ಹಗರಣಗಳಲ್ಲಿ ಒಟ್ಟು 22 ಮಂದಿ ವಿರುದ್ಧ ದೂರು ನೀಡಿರುವ ಎನ್.ಆರ್. ರಮೇಶ್, ಒಟ್ಟು 108 ಎಕರೆ (ಮೌಲ್ಯ ರೂ. 800 ಕೋಟಿ) ಸರ್ಕಾರಿ ಗೋಮಾಳ ಜಮೀನು ಕಬಳಿಕೆಯ ಆರೋಪ ಮಾಡಿದ್ದಾರೆ. ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರ ಆಪ್ತರ ಮೇಲೂ ಈ ದೂರುಗಳಲ್ಲಿ ಉಲ್ಲೇಖವಿದೆ.
