ರಾಯಚೂರು: ಗಡಿ ಭಾಗದ ಅಭಿವೃದ್ಧಿಗೆ ಖರ್ಗೆ ಕೊಡುಗೆ ಅಪಾರ, ದದ್ದಲ್
ಮಲ್ಲಿಕಾರ್ಜುನ ಖರ್ಗೆ 7 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ ಅವರ ಸಾಮಾಜಿಕ ಸೇವೆ ಅಗಣಿತವಾಗಿದೆ ಎಂದು ಹೇಳಿದ ಬಸನಗೌಡ ದದ್ದಲ್
ರಾಯಚೂರು(ಡಿ.06): ಈ ಭಾಗದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಉದ್ಯೋಗ ಸೇರಿದಂತೆ ಸರ್ವಾಗಿಣ ಅಭಿವೃದ್ಧಿಗಾಗಿ 371 ಜೆ ವಿಶೇಷ ಸ್ಥಾನ ಮಾನ ಸಿಕ್ಕಿರುವುದು ಮಲ್ಲಿಕಾರ್ಜುನ್ ಖರ್ಗೆ ನಾಯಕತ್ವದ ಹೋರಾಟಕ್ಕೆ ಸಿಕ್ಕ ಫಲ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ತಿಳಿಸಿದರು.
ನಗರದ ಗ್ರಾಮೀಣ ಶಾಸಕ ಕಚೇರಿ ಹಾಗೂ ಡಿಸಿಸಿ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತ್ಯೇಕ ಸಭೆಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ 7 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ ಅವರ ಸಾಮಾಜಿಕ ಸೇವೆ ಅಗಣಿತವಾಗಿದೆ ಎಂದು ಹೇಳಿದರು.
ಮಸ್ಕಿ ಕಾಂಗ್ರೆಸ್‌ನಲ್ಲಿ ಬಿರುಕು; ಶಾಸಕ ತುರ್ವಿಹಾಳರ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರು!
ಬಿಜೆಪಿ ನೇತೃತ್ವದ ವಾಜಪೇಯಿ ಸರ್ಕಾರದ ಅವಧಿಯಲ್ಲಿ 371 ಜೆ ಅನುಮೋದಿಸಲು ಸಾಧ್ಯವಿಲ್ಲ ಎಂದಿದ್ದನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಅನುಮೋದಿಸಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿಯಾಡಿದ್ದಾರೆ. ಹಾಗಾಗಿ ನಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅವರಿಗೆ ಅಭಿನಂದಿಸಬೇಕೆಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಕಲ್ಬುರ್ಗಿ ನಗರಕ್ಕೆ ಆಗಮಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಿಂದ ಭಾಗವಹಿಸೋಣ ಎಂದು ಹೇಳಿದರು. ಸಭೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.