Asianet Suvarna News Asianet Suvarna News

ಮಸ್ಕಿ ಕಾಂಗ್ರೆಸ್‌ನಲ್ಲಿ ಬಿರುಕು; ಶಾಸಕ ತುರ್ವಿಹಾಳರ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರು!

  • ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಿರುಕು
  • ಮೂಲ ಮತ್ತು ವಲಸೆ ಕಾರ್ಯಕರ್ತರು ಎಂಬ ಬೇಧ ಶುರು
  • ಮಸ್ಕಿ ಶಾಸಕರ ನಡೆ ವಿರುದ್ಧ ಆಕ್ರೋಶ

 

karnataka assembly election congress karyakarta outraged agains mla basanagowda turvihal maski rav
Author
First Published Dec 5, 2022, 10:10 AM IST

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಡಿ.5) : 2023ರ ಚುನಾವಣೆಗಾಗಿ ರಾಜ್ಯಾದ್ಯಂತ ಎಲ್ಲಾ ಪಕ್ಷಗಳು ಬಿರುಸಿನ ಸಿದ್ದತೆ ನಡೆಸಿವೆ. ರಾಯಚೂರು ಜಿಲ್ಲೆಯಲ್ಲಿಯೂ ಸಹ ಎಲ್ಲಾ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಕಳೆದ ಬಾರಿ ನಡೆದ ಉಪ ಚುನಾವಣೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರ ಭಾರೀ ಸುದ್ದಿಯಲ್ಲಿತ್ತು. ಅಂದು ಗೆದ್ದು ಬೀಗಿದ್ದ ಕಾಂಗ್ರೆಸ್ ಇದೀಗ ಒಳಜಗಳ, ಅಸಮಾಧಾನದಿಂದ ನಲುಗುತ್ತಿದೆ.

ಕಾಂಗ್ರೆಸ್ -ಬಿಜೆಪಿ ಅಭ್ಯರ್ಥಿ ನಡುವೆ ನಿಧಾನವಾಗಿ ಮತಬೇಟೆ ಶುರುವಾಗಿದೆ. ಇಂತಹ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು ಶುರುವಾಗಿದ್ದು, ಯಾವ ಕಾರ್ಯಕರ್ತರು ಉಪಚುನಾವಣೆ ವೇಳೆ ಓಡಾಟ ‌ಮಾಡಿ ಆರ್. ಬಸನಗೌಡ ತುರ್ವಿಹಾಳರನ್ನು ಗೆಲ್ಲಿಸಿದ್ದರೋ ಅದೇ ಕಾರ್ಯಕರ್ತರು ಈಗ ಶಾಸಕರ ವಿರುದ್ಧ ಸಭೆ ನಡೆಸಿ ಶಾಸಕರ ನಡೆ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. 

ಮಸ್ಕಿ: ಖನಿಜ ಸಂಪತ್ತು ಲೂಟಿಗೆ ತಾಲೂಕಾಡಳಿತದಿಂದ ಬ್ರೇಕ್‌..!

ಶಾಸಕರು ತಮ್ಮ ಬೆಂಬಲಿಗರ ಅಸಮಾಧಾನವನ್ನು ತಡೆಯಲು ಸಭೆ ಕರೆದರೂ ಕಾರ್ಯಕರ್ತರು ಸಭೆಗೆ ಬಾರದೇ ಓಡಾಟ ನಡೆಸಿದ್ದಾರೆ. ಇದು ಹಾಲಿ ಶಾಸಕ ಆರ್‌. ಬಸನಗೌಡ ತುರ್ವಿಹಾಳಗೆ ಭಾರೀ ತಲೆನೋವು ತಂದಿದೆ. ಅಷ್ಟೇ ಅಲ್ಲದೇ ಮಸ್ಕಿ ಕ್ಷೇತ್ರದಲ್ಲಿ ಈ ವಿಚಾರ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

 ಮಸ್ಕಿ ಉಪ ಚುನಾವಣೆಯಲ್ಲಿ ಅನುಕಂಪದಿಂದ ಗೆದ್ದ ಬಸನಗೌಡ ತುರ್ವಿಹಾಳ : 

2008ರಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರವಾಗಿತ್ತು‌. ಅಂದಿನಿಂದ ಮೂರು ಬಾರಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಯ್ಕೆ ಆಗುತ್ತಾ ಬಂದಿದ್ರು‌. ಸುಮಾರು 12 ವರ್ಷಗಳ ಕಾಲ ಶಾಸಕರು ಆಗಿದ್ರೂ, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪ ಪ್ರತಾಪಗೌಡರ ಮೇಲೆ ಬಲವಾಗಿ ಇತ್ತು. ಮತ್ತೊಂದು ಕಡೆ ಪಕ್ಷಾಂತರ ಮಾಡಿರುವ ಆರೋಪ ಹೊತ್ತಿದ್ದರಿಂದ ಕಳೆದ ಉಪ ಚುನಾವಣೆಯಲ್ಲಿ ಹಾಲಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಗೆಲುವು ಕಂಡಿದ್ದರು. ಹಾಗೇ ಅವರ ಮೇಲೆ ಅನುಕಂಪದ ಅಲೆ ಕ್ಷೇತ್ರದಲ್ಲಿ ಕೆಲಸ ಮಾಡಿತ್ತು. ಈ ಅನುಕಂಪ ಸೃಷ್ಟಿ ಆಗಲು 2018ರಲ್ಲಿ ಮಸ್ಕಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿ ಆರ್. ಬಸನಗೌಡ ತುರ್ವಿಹಾಳ ಸ್ಪರ್ಧೆ ಮಾಡಿದ್ರು. ಕಾಂಗ್ರೆಸ್ ಅಭ್ಯರ್ಥಿ ಆದ ಪ್ರತಾಪ್ ಗೌಡ ಪಾಟೀಲ್ ಕೇವಲ 213 ಮತಗಳ ಅಂತರದಿಂದ ಗೆಲುವು ಸಾಧಿಸಿದ್ರು. ಹೀಗಾಗಿ ಆರ್. ಬಸನಗೌಡ ತುರ್ವಿಹಾಳ ವಿರುದ್ಧ ಇಡೀ ಕ್ಷೇತ್ರದಲ್ಲಿ ದೊಡ್ಡ ಅನುಕಂಪದ ಅಲೆಯೂ ಇತ್ತು. 

ಬದಲಾದ ರಾಜಕೀಯದಿಂದಾಗಿ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದರು. ಇತ್ತ ಆರ್. ಬಸನಗೌಡ ತುರ್ವಿಹಾಳ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬಂದ್ರೂ. ಉಪ ಚುನಾವಣೆ ನಡೆಯಿತು. ಉಪ ಚುನಾವಣೆಯಲ್ಲಿ ಬಸನಗೌಡ ಗೆಲುವಿಗೆ ಮಸ್ಕಿಯಲ್ಲಿ ಧ್ರುವನಾರಾಯಣ ಸೇರಿ ಗ್ರಾಮ ಪಂಚಾಯತಿವಾರು ಮುಖಂಡರಿಗೆ ಜವಾಬ್ದಾರಿ. ಸ್ಥಳೀಯ ಮುಖಂಡರಾದ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಎಂಎಲ್ ಸಿ ಬೋಸರಾಜು ‌ಮತ್ತು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಪ್ರಚಾರ ನಡೆಸಿದ್ದರು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡರ ಬಗ್ಗೆ ಇರುವ ಅನುಕಂಪವನ್ನು ಮತವಾಗಿ ಪರಿವರ್ತನೆ ಆಗಿ 30 ಸಾವಿರಕ್ಕೂ ಅಧಿಕ ಮತಗಳಿಂದ ಬಸನಗೌಡ ತುರ್ವಿಹಾಳ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.

 ಕಾರ್ಯಕರ್ತರ ನಂಬಿಕೆ ಹುಸಿ ಮಾಡಿದ ಶಾಸಕ ಬಸನಗೌಡ ತುರ್ವಿಹಾಳ: 

ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾದ ಆರ್. ಬಸನಗೌಡ ತುರ್ವಿಹಾಳ ಮೇಲೆ ಇಡೀ ಕ್ಷೇತ್ರದ ಜನರು ಹತ್ತಾರು ಭರವಸೆ ಇಟ್ಟಿದ್ದರು. ಆ ಭರವಸೆಯನ್ನ ನಮ್ಮ ಶಾಸಕರು ಈಡೇರಿಸುತ್ತಾರೆ ಎಂಬ ನಂಬಿಕೆ ಕಾರ್ಯಕರ್ತರಲ್ಲಿ ಇತ್ತು. ಆದ್ರೆ ಶಾಸಕರಾದ ಆರ್. ಬಸನಗೌಡ ತುರ್ವಿಹಾಳ ಜನರೊಂದಿಗೆ ಮಾತನಾಡುವುದು ತೀರ ಕಡಿಮೆ. ಅಷ್ಟೇ ಅಲ್ಲದೇ ಜನ ಸಂಪರ್ಕದಲ್ಲಿ ಇರುವ ಶಾಸಕರ ಸಹೋದರ ಆರ್. ಸಿದ್ದನಗೌಡ ತುರ್ವಿಹಾಳ ಜನರ ಮಧ್ಯೆ ಓಡಾಟ ಮಾಡುವುದು ಕಡಿಮೆ ಮಾಡಿದ್ರು. ಹೀಗಾಗಿ ಕಾರ್ಯಕರ್ತರ ಯಾವುದೇ ಕೆಲಸಗಳು ಇದ್ರೆ ಫೋನ್ ಮಾಡಿದ್ರೂ ಶಾಸಕರು ಫೋನ್ ಗೂ ಸಿಗದೇ ಇರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. 

Ticket Fight: ದಕ್ಷಿಣ ಕನ್ನಡ ಬಿಜೆಪಿ ಕೋಟೆಯಲ್ಲಿ ಕಾಂಗ್ರೆಸ್‌ ಪೈಪೋಟಿ

ಉಪ ಚುನಾವಣೆಯಲ್ಲಿ ಕಾರ್ಯಕರ್ತರು ಮನೆ - ಮನೆಗಳಿಗೆ ತೆರಳಿ ಚುನಾವಣೆಗೆ ದೇಣಿಗೆ ಸಂಗ್ರಹಿಸಿ ಮತ ಹಾಕಿಸಿ ಓಡಾಟ ಮಾಡಿದ ಕಾರ್ಯಕರ್ತರಿಗೆ ಶಾಸಕರ ನಡೆ ವಿರುದ್ಧ ಅಸಮಾಧಾನ ಶುರುವಾಗಿದೆ. ಅಷ್ಟೇ ಅಲ್ಲದೇ ಶಾಸಕರು ನೀಡಿದ ಭರವಸೆಗಳು ಕೂಡ ಈಡೇರಿಸಲು ಶಾಸಕರಿಗೆ ಆಗುತ್ತಿಲ್ಲ.  ಯಾಕಾದರೂ ಆರ್. ಬಸನಗೌಡ ತುರ್ವಿಹಾಳರನ್ನ\ ಶಾಸಕರಾಗಿ ಆಯ್ಕೆ ಮಾಡಿದ್ದೇವು ಎಂದು ಕಾರ್ಯಕರ್ತರು ಕ್ಷೇತ್ರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

 ಮುದಗಲ್ ಸಭೆಯಲ್ಲಿ ಚರ್ಚೆ ಆಗಿದ್ದೇನು? 

ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್. ಬಸನಗೌಡ ತುರ್ವಿಹಾಳ ವಿರುದ್ಧ ಕಾರ್ಯಕರ್ತರು ಅಸಮಾಧಾನಗೊಂಡು ಸಭೆ ನಡೆಸಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಮುದಗಲ್ ನಲ್ಲಿ ನಡೆದ ಸಭೆ ನಡೆಸಿದ ಕಾರ್ಯಕರ್ತರು ಮತ್ತು ಮುಖಂಡರು ಶಾಸಕರ ನಡೆ ವಿರುದ್ಧ ಆಕ್ರೋಶ ಹೊರಹಾಕಿದ್ರು. ಉಪ ಚುನಾವಣೆಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ಬೋಸರಾಜು ಅವರ ಮಾತಿನಂತೆ ನಾವು ಓಡಾಟ ಮಾಡಿ ಮಸ್ಕಿಯಲ್ಲಿ ಆರ್. ಬಸನಗೌಡ ತುರ್ವಿಹಾಳ ಗೆ ಗೆಲ್ಲಿಸಿದ್ದೇವೆ. ಆದ್ರೆ ಬಸನಗೌಡ ತುರ್ವಿಹಾಳ ಗೆದ್ದ ಬಳಿಕ ಕಾರ್ಯಕರ್ತರಿಗೆ ಕಡೆಗಣಿಸಲು ಶುರು ಮಾಡಿದ್ದಾರೆ. 

ನಮ್ಮ ಮುಖಂಡರು ಹೇಳಿದ್ರೂ ಅಂತ ನಮ್ಮ ಡಿಸೇಲ್ ಹಾಕಿಕೊಂಡು ಉಪ ಚುನಾವಣೆಯಲ್ಲಿ ಓಡಾಟ ಮಾಡಿ ಚುನಾವಣೆ ಮಾಡಿದ್ದೇವೆ. ಚುನಾವಣೆಯಲ್ಲಿ ಎಲ್ಲರೂ ತನು, ಮನ, ಧನ ಖರ್ಚು ಮಾಡಿ ಕಾಂಗ್ರೆಸ್ ಗೆಲ್ಲಿಸಿದ್ದೇವೆ. ಚುನಾವಣೆ ವೇಳೆ ಸಾಲ- ಸೂಲ ಮಾಡಿ ಎಲೆಕ್ಷನ್ ಮಾಡಿದ್ದೇವೆ. ಆದ್ರೆ ಈಗ ಶಾಸಕರು ನಮಗೆ ಕಾಲಾಗಿನ ಕಸಬರಿಗೆ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

 ಚುನಾವಣೆ ಮಾಡಿದ ಮೂವರು ‌ಮುಖಂಡರಿಗೆ ನಾವು ಫೋನ್ ಮಾಡಿ ನಮ್ಮ ಸಮಸ್ಯೆ ಹೇಳಿದ್ದೇವೆ. ಆದ್ರೂ ಶಾಸಕರು ಸ್ಪಂದಿಸುತ್ತಿಲ್ಲ. 2023ರ ಚುನಾವಣೆಗೆ 3-4 ತಿಂಗಳು ಬಾಕಿಯಿದೆ. ಬಿಜೆಪಿಯವರು ವಿವಿಧೆಡೆ ಓಡಾಟ ಮಾಡಿ ಕಾರ್ಯಕ್ರಮ ಶುರು ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ ನ ಮುಖಂಡರಿಗೆ ಶಾಸಕರು ಬೆಲೆ ಕೊಡುತ್ತಿಲ್ಲ‌. ಕಾಂಗ್ರೆಸ್ ಪಕ್ಷದ ಒಂದು ರೂಪಾಯಿ ನಾವು ತಿಂದಿಲ್ಲ.  ಮಸ್ಕಿ ಕ್ಷೇತ್ರದಲ್ಲಿ 450 ಕೋಟಿ ರೂಪಾಯಿ ಗುದ್ದಲಿ ಪೂಜೆ ಆಯ್ತು, ನಂದವಾಡಿ ಏತ ನೀರಾವರಿಗಾಗಿ 80 ಕೋಟಿ ರೂಪಾಯಿ ಬಂತು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಂದ 36 ಕೋಟಿ ಅನುದಾನ ಬಂತು, ಯಾವ ಭಾಗದಲ್ಲಿ ಭೂಮಿ ಪೂಜೆ ಮಾಡಿದ್ರಿ, ಯಾವ ಮುಖಂಡರಿಗೆ ಕರೆದು ಕಾಮಗಾರಿಗಳಿಗೆ ಚಾಲನೆ ನೀಡಿದ್ರಿ, ಕೇವಲ 2 ರೂಪಾಯಿ ಉದ್ದಿನ ಕಡ್ಡಿ ಹಂಚಿ ಮುಖಂಡರಿಗೆ ಕರೆಸಿ ಕಾಮಗಾರಿ ಬಗ್ಗೆ ತಿಳಿಸಿ..ಅದು ಮಾಡುತ್ತಿಲ್ಲ ಏಕೆ..ನೀವು ಪ್ರಧಾನ ಮಂತ್ರಿ ಅಷ್ಟು ಬ್ಯೂಸಿಯಾಗಿದ್ದೀರಾ? ಚುನಾವಣೆಯಲ್ಲಿ ಫೋನ್ ಮಾಡಲು ನಿಮಗೆ ಟೈಮ್ ಇತ್ತು. ಈಗ ಏಕೆ ಇಲ್ಲ. ಅಂತ ಕಾರ್ಯಕರ್ತರು ಶಾಸಕರ ನಡೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಸಭೆಯಲ್ಲಿ 300ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದರು.

 ಶಾಸಕರು ಸಭೆ ಕರೆದರೂ ಬಾರದ ಕಾರ್ಯಕರ್ತರು: 

ಮುದಗಲ್ ನಲ್ಲಿ ನಡೆದ ಸಭೆ ಬಳಿಕ ಮಸ್ಕಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಶುರುವಾಗಿದೆ. ಈ ಅಸಮಾಧಾನ ಕಡಿಮೆಗೊಳಿಸಲು ಶಾಸಕ ಆರ್. ಬಸನಗೌಡ ತುರ್ವಿಹಾಳ 3 ಬಾರಿ ಸಭೆಗೆ ಆಹ್ವಾನ ನೀಡಿದ್ರು‌. ಆದ್ರೂ ಅಸಮಾಧಾನಗೊಂಡ ಮುಖಂಡರು ಸಭೆಗೆ ಹಾಜರಾಗಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರು ಎಂಬ ಭೇದ ಶುರುವಾಗಿದೆ. ಮೂಲ ಕಾಂಗ್ರೆಸ್ ಕಾರ್ಯಕರ್ತರು ಯಾರು ಮುದಗಲ್ ಸಭೆಯಲ್ಲಿ ಇರಲಿಲ್ಲ. ವಲಸೆ ಅಂದ್ರೆ ಆರ್. ಬಸನಗೌಡ ತುರ್ವಿಹಾಳ ಜೊತೆಗೆ ಕಾಂಗ್ರೆಸ್ ಗೆ ಸೇರಿದವರೇ ಈ ರೀತಿಯಾಗಿ ಸಭೆ ನಡೆಸಿ ಪಕ್ಷಕ್ಕೆ ಡ್ಯಾಮೇಜ್ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಈ ತಂಡ ಇದೇ ಮೊದಲ ಬಾರಿಗೆ ಸಭೆ ಮಾಡುತ್ತಿಲ್ಲ. ಈ ಹಿಂದೆಯೂ  ಶಾಸಕ ಬಸನಗೌಡ ತುರ್ವಿಹಾಳ ವಿರುದ್ಧ ತಾವರಗೇರಾ ಮತ್ತು ಕುಷ್ಟಗಿಯಲ್ಲಿಯೂ ಸಭೆ ನಡೆಸಿದ್ರು. ಕಾರ್ಯಕರ್ತರ ಈ ಸಭೆ ರಾಜಕೀಯ ಮೂಲ ಕಾಂಗ್ರೆಸ್ ನ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದೆ. ಇದನ್ನು ಸಮನಗೊಳಿಸಲು ಶಾಸಕ ಆರ್.ಬಸನಗೌಡ ತುರ್ವಿಹಾಳ ಮೌನಮುರಿದು ಮಾತನಾಡಬೇಕಾಗಿದೆ.

Assembly election: ಬಂಡಾಯದ ನೆಲದಲ್ಲಿ ಬಿಸಿಯೇರಿದ ಟಿಕೆಟ್‌ ದಂಗಲ್‌

ಒಟ್ಟಿನಲ್ಲಿ ಕಳೆದ ಉಪ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ಚುನಾವಣೆ ನಡೆದಿತ್ತು. ಹೀಗಾಗಿ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಆರ್. ಬಸನಗೌಡ ತುರ್ವಿಹಾಳ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಆದ್ರೆ ಈಗ ಉಪ ಚುನಾವಣೆಯಲ್ಲಿ ಓಡಾಟ ಮಾಡಿದ ಕಾರ್ಯಕರ್ತರು ಬಸನಗೌಡ ತುರ್ವಿಹಾಳ ವಿರುದ್ಧ ಮಾತನಾಡಲು ಶುರು ‌ಮಾಡಿದ್ದಾರೆ. ಇದು ಹೀಗೆ ಮುಂದುವರೆದರೇ ಬಿಜೆಪಿಗೆ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಲಾಭವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

Follow Us:
Download App:
  • android
  • ios