ಬೆಳಗಾವಿ, (ಡಿ.11): ತೆಲಂಗಾಣ ವಿಧಾನಸಭಾ ಚುನಾವಣೆ ಉಸ್ತುವಾರಿ ಹೊತ್ತಿದ್ದ ಕರ್ನಾಟಕ ಕಾಂಗ್ರೆಸ್‌ ನ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿ.ಕೆ. ಶಿವಕುಮಾರ್ ಗೆ ತೀವ್ರ ನಿರಾಸೆಯಾಗಿದೆ.

ಯಾಕಂದ್ರೆ ತೆಲಂಗಾಣದಲ್ಲಿ ಕಾಂಗ್ರೆಸ್ ಮೆತ್ರಿಕೂಟವನ್ನ ಗೆಲ್ಲಿಸಲು ಇನ್ನಿಲ್ಲ ಕಸರತ್ತು ನಡೆಸಿದ್ದ ಡಿಕೆಶಿಗೆ ಭಾರೀ ಮುಖಭಂಗವಾಗಿದೆ.

ತೆಲಂಗಾಣದಲ್ಲಿ ನಡೆಯಲಿಲ್ಲ ಡಿಕೆಶಿ ಆಟ: ಟ್ರಬಲ್ ಶೂಟರ್ ಆಸೆಗೆ KCR ತಣ್ಣೀರು!

ಕೆಸಿಆರ್ ನೇತೃತ್ವದ ಟಿಆರ್ ಎಸ್ ಪಕ್ಷ 87 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅನ್ನು ಧೂಳೀಪಟ ಮಾಡಿ ಸರಳ ಬಹುಮತದತ್ತ ದಾಪುಗಾಲು ಇಟ್ಟಿದ್ದು ಕಾಂಗ್ರೆಸ್ 22 ಸ್ಥಾನಗಳಿಗೆ ತೃಪ್ತಿಪಟ್ಟಿದೆ.

ಇನ್ನು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ, ಅದರಲ್ಲೂ ನಿರ್ದಿಷ್ಟವಾಗಿ ತಾವು ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿದ್ದ ತೆಲಂಗಾಣ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ

ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ತೆಲಂಗಾಣದಲ್ಲಿ ಸಾಕಷ್ಟು ಶ್ರಮ ಹಾಕಿದ್ದೆವು. ಆದರೆ ಅಲ್ಲಿ ಯಾಕೆ ಇಂಥ ಫಲಿತಾಂಶ ಬಂತೋ ಗೊತ್ತಿಲ್ಲ.

ಪಕ್ಷಕ್ಕೆ ಉತ್ತಮ ಫಲಿತಾಂಶ ಬರಲಿದೆ‌ ಎಂಬ ನಿರೀಕ್ಷೆ ಇತ್ತು. ಪ್ರಜಾಪ್ರಭುತ್ವದಲ್ಲಿ ಇದನ್ನ ಒಪ್ಪಲೇಬೇಕು ಎಂದು ಸೋಲೋಪ್ಪಿಕೊಂಡರು.

ಜನರ ತೀರ್ಮಾನವೇ ಅಂತಿಮ. ಮಿಜೋರಾಂ ಬಿಟ್ಟು ಉಳಿದ ನಾಲ್ಕೂ ಕಡೆ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆ ಇತ್ತು. ಈ ಫಲಿತಾಂಶ ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಹೇಳಿದರು.