Asianet Suvarna News Asianet Suvarna News

5 ಗ್ಯಾರಂಟಿಗಳ ಜಾರಿಗೆ ಕಾಂಗ್ರೆಸ್‌ ಶಾಸಕಾಂಗ ಸಭೆ ನಿರ್ಣಯ: ದಕ್ಷ, ಪಾರದರ್ಶಕ ಆಡಳಿತ ನೀಡಲು ನಿರ್ಧಾರ

ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಹೈಕಮಾಂಡ್‌ ನಿರ್ಧಾರಕ್ಕೆ ಬಿಡುವುದು ಸೇರಿದಂತೆ ನಾಡಿನ ಜನರಿಗೆ ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡುವುದು. ಪ್ರಣಾಳಿಕೆಯಲ್ಲಿ ನೀಡಿದ್ದ 5 ಗ್ಯಾರಂಟಿ ಯೋಜನೆ ಜಾರಿಗೊಳಿಸುವುದು.

Congress Legislative Assembly resolution for implementation of 5 guarantees gvd
Author
First Published May 15, 2023, 8:26 AM IST

ಬೆಂಗಳೂರು (ಮೇ.15): ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಹೈಕಮಾಂಡ್‌ ನಿರ್ಧಾರಕ್ಕೆ ಬಿಡುವುದು ಸೇರಿದಂತೆ ನಾಡಿನ ಜನರಿಗೆ ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡುವುದು. ಪ್ರಣಾಳಿಕೆಯಲ್ಲಿ ನೀಡಿದ್ದ 5 ಗ್ಯಾರಂಟಿ ಯೋಜನೆ ಜಾರಿಗೊಳಿಸುವುದು. ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ಮರು ಸ್ಥಾಪಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕೈಗೊಂಡಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಂಡಿದ್ದು, ನಾಡಿನ ಜನರಿಗೆ ಜವಾಬ್ದಾರಿಯುತ, ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡಲು ಪರಿಶ್ರಮಪಡಬೇಕು. ಒಗ್ಗಟ್ಟಿನ ಮೂಲಕ ಕೆಲಸ ಮಾಡಬೇಕು. ರಾಜ್ಯದ 6.5 ಕೋಟಿ ಕನ್ನಡಿಗರ ಹಿತ ರಕ್ಷಣೆ ಹಾಗೂ ಸೇವೆ ನಮ್ಮ ಆದ್ಯ ಕರ್ತವ್ಯವಾಗಿದೆ. ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆ ಸರ್ಕಾರದ ನೀತಿಗಳ ಮೂಲ ಉದ್ದೇಶವಾಗಿರಲಿದೆ. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮರು ಸ್ಥಾಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಿದ್ದು VS ಡಿಕೆಶಿ: ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್‌ ಅಂಗಳಕ್ಕೆ

ಪಕ್ಷವು ರಾಜ್ಯದ ಜನರಿಗೆ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ನಾಡಿನ ಸಂಸ್ಕೃತಿ, ಭಾಷೆ ಹಾಗೂ ಭವ್ಯ ಪರಂಪರೆಯನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಕನ್ನಡಿಗರು ಪಕ್ಷದ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಪಕ್ಷಕ್ಕೆ ನೀಡಿರುವ ಪ್ರಚಂಡ ಬಹುಮತಕ್ಕೆ ಅಭಾರಿಯಾಗಿದ್ದೇವೆ ಎಂದು ಮೊದಲ ಶಾಸಕಾಂಗ ಪಕ್ಷದ ಸಭೆಯಲ್ಲೇ ಹೃತ್ಪೂರ್ವಕ ಧನ್ಯವಾದ ಸಲ್ಲಿಸಲಾಯಿತು.

ಸಿಎಂ ಹುದ್ದೆ: ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ವಾದವೇನು?

ರಾಜ್ಯದ ಒಳಗೆ ಹಾಗೂ ಹೊರಗೆ ದ್ವೇಷ ಹಾಗೂ ವಿಭಜನೆ ರಾಜಕೀಯದಿಂದಾಗಿ ಅಪಾಯದಲ್ಲಿ ಸಿಲುಕಿರುವ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗೆ ಫಲಿತಾಂಶದ ಮೂಲಕ ಮತ್ತೊಮ್ಮೆ ಕರ್ನಾಟಕ ಶಕ್ತಿ ತುಂಬಿದೆ. ಪಕ್ಷದ ಗೆಲುವಿಗೆ ಶ್ರಮಿಸಿದ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಕೆಪಿಸಿಸಿ ಮತ್ತು ಎಐಸಿಸಿ ತಂಡ, ಪಕ್ಷದ ಕಾರ್ಯಕರ್ತರ ಕಾರ್ಯ ವೈಖರಿಗೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

Follow Us:
Download App:
  • android
  • ios