ಬೆಂಗಳೂರು(ಜೂ.28): ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ಜೂ.29ರಂದು ಸೈಕಲ್‌ ಚಳವಳಿ ನಡೆಸಲು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಹಿರಿಯ ನಾಯಕ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಸುದ್ದಿಗಾರರೊಂದಿಗೆ ಈ ಕುರಿತು ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ಜೂ.29ರಂದು ನಾನು ಮತ್ತು ಸಿದ್ದರಾಮಯ್ಯ ಅವರನ್ನೊಳಗೊಂಡು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಸೈಕಲ್‌ನಲ್ಲಿ ಆಗಮಿಸಿ ಕೇಂದ್ರ ಅಂಚೆ ಕಚೇರಿ ವೃತ್ತದ ಬಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಎಪಿಎಂಸಿ ಎಲೆಕ್ಷನ್: ಲಾಟರಿಯಲ್ಲಿ ಕಾಂಗ್ರೆಸ್‌ಗೆ ಒಲಿದ ಅದೃಷ್ಟ!

ಇದಲ್ಲದೆ, ಕೋವಿಡ್‌-19ರ ನಿಯಂತ್ರಣ ವೈಫಲ್ಯ, ಎಪಿಎಂಸಿ ಹಾಗೂ ಭೂ ಕಾಯ್ದೆ ತಿದ್ದುಪಡಿ ವಿರುದ್ಧವೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಹೋರಾಟ ನಡೆಸಲಿದೆ. ರಾಜ್ಯಮಟ್ಟದಿಂದ ಗ್ರಾಮ ಪಂಚಾಯತ್‌ ಮಟ್ಟದವರೆಗೂ ವಿವಿಧ ಹಂತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್‌ ನಿರಂತರವಾಗಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ್ನು ಖಂಡಿಸಿ ಹೋರಾಟ ಅನಿವಾರ್ಯ. ರಾಜ್ಯದ ಪಟ್ಟಿಯಲ್ಲಿ ಬರುವ ಎಪಿಎಂಸಿ ಕಾಯ್ದೆಗೆ ಕೇಂದ್ರ ಸರ್ಕಾರ ಮೂಗು ತೂರಿಸುತ್ತಿದೆ. ಇದರಿಂದ ರೈತರು ಬೀದಿ ಪಾಲಾಗುವ ಸಾಧ್ಯತೆ ಇದೆ. ಭೂ ಸುಧಾರಣೆ ಕಾಯ್ದೆಗೂ ತಿದ್ದುಪಡಿ ತರಲಾಗುತ್ತಿದ್ದು ಉಳ್ಳವರು ಉಳುವವರಿಂದ ಭೂಮಿ ಕಿತ್ತುಕೊಳ್ಳಲಿದ್ದಾರೆ. ಇಂತಹ ಜನವಿರೋಧಿ ನೀತಿಗಳನ್ನು ತಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾಯಾಧ್ಯಕ್ಷರಾದ ಸಲೀಂ ಅಹಮದ್‌, ಈಶ್ವರ ಖಂಡ್ರೆ, ರೆಹಮಾನ್‌ಖಾನ್‌, ನಿಕಟಪೂರ್ವ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌, ಶಾಸಕರಾದ ಕೆ.ಜೆ.ಜಾಜ್‌, ಎಚ್‌.ಕೆ.ಪಾಟೀಲ್‌, ಆರ್‌.ವಿ.ದೇಶಪಾಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

'ಪ್ರಧಾನಿ ಮೋದಿ ಬಿಜೆಪಿ ಸರ್ಕಾರದಿಂದ ದೇಶದಲ್ಲಿ ಐತಿಹಾಸಿಕ ಬದಲಾವಣೆ'

ಇಂಧನ ದರ ಏರಿಕೆಯಿಂದ ತತ್ತರಿಸಿರುವ ಜನತೆ ಖರೀದಿಸುವ ಪ್ರತೀ ಲೀಟರ್‌ ಪೆಟ್ರೋಲ್‌, ಡೀಸೆಲ್‌ನ ಮೊತ್ತದಲ್ಲಿ 2 ರಿಂದ 3 ರು.ಗಳನ್ನು ಕಾಂಗ್ರೆಸ್‌ ಪಕ್ಷವೇ ಭರಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಬೇಕು. ಹೀಗೆ ಪ್ರತೀ ಬ್ಲಾಕ್‌ ಕಾಂಗ್ರೆಸ್‌ ವ್ಯಾಪ್ತಿಯ ಮೂರರಿಂದ ನಾಲ್ಕು ಪೆಟ್ರೋಲ್‌ ಬಂಕ್‌ಗಳಲ್ಲಿ ಈ ವಿನೂತನ ಪ್ರತಿಭಟನೆ ಕೈಗೊಳ್ಳಬೇಕು. ತನ್ಮೂಲಕ ರಾಜ್ಯಾದ್ಯಂತ ಏಳು ಲಕ್ಷ ಜನರು ಖರೀದಿಸುವ ಇಂಧನಕ್ಕೆ ಹಣ ನೀಡುವ ಮೂಲಕ ಇಂಧನ ದರ ಏರಿಕೆ ಬಗ್ಗೆ ಜನಜಾಗೃತಿ ಮೂಡಿಸಲು ಕಾಂಗ್ರೆಸ್‌ ಹಿರಿಯ ನಾಯಕರ ಸಭೆಯಲ್ಲಿ ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.