ಮೈಸೂರು(ಜೂ.27): ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಅಧ್ಯಕ್ಷರಾಗಿ ಬಸವರಾಜು, ಉಪಾಧ್ಯಕ್ಷರಾಗಿ ಎಂ. ನಾಗರಾಜು ಲಾಟರಿ ಮೂಲಕ ಆಯ್ಕೆಯಾದರು.

ನಂಜನಗೂಡು ರಸ್ತೆಯ ಬಂಡೀಪಾಳ್ಯದ ಎಪಿಎಂಸಿ ಆಡಳಿತ ಭವನದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತ ಬಸವರಾಜು ಮತ್ತು ಜೆಡಿಎಸ್‌ ಬೆಂಬಲಿತ ಕೋಟೆಹುಂಡಿ ಎಂ. ಮಹದೇವ್‌, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತ ಎಂ.ಕೆ. ಆನಂದ್‌ ಮತ್ತು ಜೆಡಿಎಸ್‌ ಬೆಂಬಲಿತ ಎಂ. ನಾಗರಾಜು ನಾಮಪತ್ರ ಸಲ್ಲಿಸಿದ್ದರು.

'ಪ್ರಧಾನಿ ಮೋದಿ ಬಿಜೆಪಿ ಸರ್ಕಾರದಿಂದ ದೇಶದಲ್ಲಿ ಐತಿಹಾಸಿಕ ಬದಲಾವಣೆ'

ಗುಪ್ತ ಮತದಾನದ ಮೂಲಕ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ 7, ಕಾಂಗ್ರೆಸ್‌ನ 6 ಮಂದಿ ಸದಸ್ಯರು ಹಾಗೂ ಬಿಜೆಪಿಯ ನಾಮ ನಿರ್ದೇಶಿತ 3 ಮಂದಿ ಸದಸ್ಯರು ಸೇರಿ ಒಟ್ಟು 16 ಮಂದಿ ಮತದಾರರಲ್ಲಿ ತಲಾ 8 ಮತಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಿಗೆ ಚಲಾವಣೆ ಆಯಿತು. ಇಬ್ಬರೂ ಅಭ್ಯರ್ಥಿಗಳು ಸಮಬಲ ಸಾಧಿಸಿದ್ದರಿಂದ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲು ಚುನಾವಣಾಧಿಕಾರಿ ಹಾಗೂ ತಾಲೂಕು ತಹಸೀಲ್ದಾರ್‌ ರಕ್ಷಿತ್‌ ತೀರ್ಮಾನಿಸಿದರು. ಲಾಟರಿಯಲ್ಲಿ ಬಸವರಾಜು ಮತ್ತು ನಾಗರಾಜು ಅವರಿಗೆ ಅದೃಷ್ಟಒಲಿದದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದರು.

'ಯಡಿಯೂರಪ್ಪಗೆ ಧಮ್‌ ಇರೋದಕ್ಕೆ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದು'

ಮೂವರು ನಾಮ ನಿರ್ದೇಶಿತ ಸದಸ್ಯರು ಯಾರಿಗೆ ಮತ ಚಲಾಯಿಸಿದ್ದಾರೆ ಎಂದು ಹೇಳುವುದು ಅಸಾಧ್ಯ. ಆದರೆ ಕಾಂಗ್ರೆಸ್‌ಗೆ ಇಬ್ಬರು ಮತ್ತು ಜೆಡಿಎಸ್‌ಗೆ ಒಬ್ಬರು ಬೆಂಬಲ ವ್ಯಕ್ತಪಡಿಸಿರುವುದಾಗಿ ಸದಸ್ಯರು ಅಭಿಪ್ರಾಯಪಟ್ಟರು. ಮೊದಲಿಗೆ ನಾಮ ನಿರ್ದೇಶಿತ ಸದಸ್ಯ ಜೆ.ಎಸ್‌. ಜಗದೀಶ್‌ ಮೊದಲು ಚುನಾವಣೆಯಲ್ಲಿ ತಟಸ್ಥರಾಗಿರುವುದಾಗಿ ಹೇಳಿದ್ದರು ಎನ್ನಲಾಗಿದೆ. ನಂತರ ಚುನಾವಣೆ ಆವರಣದಲ್ಲಿ ಕಾಣಿಸಿಕೊಂಡು ಮತ ಚಲಾಯಿಸಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಕಾಂಗ್ರೆಸ್‌ ಮುಖಂಡರಾದ ಹರೀಶ್‌ಗೌಡ ಮತ್ತು ಕೆ. ಮರಿಗೌಡ ಅಭಿನಂದಿಸಿದರು.