ಬೆಂಗಳೂರು [ಫೆ.08]:  ವಿಧಾನ ಪರಿಷತ್‌ನ ಒಂದು ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಜೆಡಿಎಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಅನಿಲ್‌ ಕುಮಾರ್‌ ಅವರಿಗೆ ಕಾಂಗ್ರೆಸ್‌ ಬೆಂಬಲ ನೀಡುವ ಬಗ್ಗೆ ಪಕ್ಷದ ಮುಖಂಡರು ಹಾಗೂ ಹೈಕಮಾಂಡ್‌ ನಾಯಕರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಅನಿಲ್‌ ಕುಮಾರ್‌ ಅವರು ನನ್ನ ಜೊತೆ ಮಾತನಾಡಿ ಕಾಂಗ್ರೆಸ್‌ ಬೆಂಬಲ ನೀಡುವಂತೆ ಕೋರಿದ್ದಾರೆ ಎಂದರು.

ಅವರಿಗೆ ಈಗಾಗಲೇ ಜೆಡಿಎಸ್‌ ಬೆಂಬಲ ಸೂಚಿಸಿದೆ. ಕಾಂಗ್ರೆಸ್‌ ಬೆಂಬಲದ ವಿಚಾರ ನಾನೊಬ್ಬ ತೆಗೆದುಕೊಳ್ಳುವ ತೀರ್ಮಾನ ಅಲ್ಲ. ಹಾಗಾಗಿ ಪಕ್ಷದ ಮುಖಂಡರು, ಶಾಸಕಾಂಗ ಪಕ್ಷದ ಸಭೆ ಹಾಗೂ ಹೈಕಮಾಂಡ್‌ ನಾಯಕರ ಜೊತೆ ಚರ್ಚಿಸಿ ತೀರ್ಮಾನ ಮಾಡಬೇಕಾಗುತ್ತದೆ ಎಂದು ಹೇಳಿದರು.

ಡಿಕೆಶಿ ಮೇಲಿನ ಜಿದ್ದಿಗೆ BSY ಬಳಿ ರಮೇಶ್ ಜಾರಕಿಹೊಳಿ ಪಟ್ಟು...

ವಿಧಾನಸಭೆಯಲ್ಲಿ ಬಹುಮತ ಇಲ್ಲದ ಕಾರಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಬಿಜೆಪಿಗೆ ವಿಧಾನಸಭೆಯಲ್ಲಿ ಬಹುಮತವಿದೆ. ಆದರೆ, ಆ ಪಕ್ಷದಲ್ಲಿನ ಒಳಜಗಳ ಏನಿದೆ ನೋಡಬೇಕು. ಜತೆಗೆ ಅನಿಲ್‌ ಕುಮಾರ್‌ ಅವರು ಗೆಲ್ಲಲು ಯಾವ ತಂತ್ರಗಾರಿಕೆ ಮಾಡುತ್ತಿದ್ದಾರೋ ನೋಡಬೇಕು. ಜೆಡಿಎಸ್‌, ಕಾಂಗ್ರೆಸ್‌, ಪಕ್ಷೇತರರು ಮತ್ತು ಬಿಜೆಪಿಯಲ್ಲಿನ ಒಳಜಗಳದಿಂದ ಅಸಮಾಧಾನಗೊಂಡವರ ಮತ ಪಡೆದು ಗೆಲ್ಲುವ ತಂತ್ರಗಾರಿಕೆ ಮಾಡಿರಬಹುದು. ಎಲ್ಲದಕ್ಕೂ ಸಮಯಾವಕಾಶ ಇದೆ. ಪರಿಸ್ಥಿತಿ ನೋಡಿಕೊಂಡು ಪಕ್ಷದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಕಾಂಗ್ರೆಸ್ಸಿಗೂ ಅಭ್ಯರ್ಥಿಗೂ ಸಂಬಂಧವಿಲ್ಲ- ಎಂಬಿಪಾ

ಇನ್ನು, ಇದೇ ವಿಚಾರ ಕುರಿತು ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್‌, ಪಕ್ಷೇತರ ಅಭ್ಯರ್ಥಿ ಅನಿಲ್‌ಕುಮಾರ್‌ ಅವರನ್ನು ಬೆಂಬಲಿಸುವ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಸದ್ಯಕ್ಕೆ ಕಾಂಗ್ರೆಸ್‌ಗೂ ಪಕ್ಷೇತರ ಅಭ್ಯರ್ಥಿಗೂ ಸಂಬಂಧ ಇಲ್ಲ ಎಂದು ಹೇಳಿದರು.

ಅನಿಲ್‌ ಕುಮಾರ್‌ ಅವರು ನಾಮಪತ್ರ ಸಲ್ಲಿಸಲು ಕಾಂಗ್ರೆಸ್‌ನ ಯಾವುದೇ ಸದಸ್ಯರು ಸೂಚಕರಾಗಿಲ್ಲ. ಮೈತ್ರಿ ಅಭ್ಯರ್ಥಿ ಎಂದೂ ಯಾರೂ ಹೇಳಿಲ್ಲ. ಅವರು ಕಾಂಗ್ರೆಸ್‌ ಬೆಂಬಲ ಕೋರಿದ್ದರೆ ಪಕ್ಷದ ನಾಯಕರು, ಹೈಕಮಾಂಡ್‌ ಜತೆ ಚರ್ಚಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿರ್ಧಾರ ಮಾಡಬೇಕಾಗುತ್ತದೆ ಎಂದರು.