ಬೆಂಗಳೂರು (ಏ.01):  ಸಂಪುಟದ ಹಿರಿಯ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ತಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪ ನಡೆಸಿದ್ದಾರೆ ಎಂದು ದೂರು ನೀಡಿರುವ ಹಿನ್ನೆಲೆಯಲ್ಲಿ ಕೂಡಲೇ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಮತ್ತು ಕರ್ನಾಟಕ ಕಾಂಗ್ರೆಸ್‌ ಪ್ರತ್ಯೇಕ ಟ್ವೀಟ್‌ ಮಾಡಿದ್ದು,

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ‘ಬಿಜೆಪಿ ಸೇರಲು ಆಮಿಷ’ ಪ್ರಕರಣ ತನಿಖೆಗೆ ಹೈಕೋರ್ಟ್‌ ಆದೇಶ ನೀಡಿದೆ. ಇದೇ ವೇಳೆ ಈಶ್ವರಪ್ಪ ಅವರು ದೂರು ನೀಡಿದ್ದಾರೆ. ಹೀಗಾಗಿ ಈ ಅನೈತಿಕ ಸರ್ಕಾರವನ್ನು ರಾಜ್ಯಪಾಲರೇ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸಿಎಂ ಈ ನಡೆ ನೋವು ತಂದಿದೆ; ಹೈಕಮಾಂಡ್‌ಗೆ ಈಶ್ವರಪ್ಪ ದೂರು

ರಾಜ್ಯಪಾಲರಿಗೆ ದೂರು ನೀಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ಹಸ್ತಕ್ಷೇಪ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಭ್ರಷ್ಟಾಚಾರ, ಬಸನಗೌಡ ಯತ್ನಾಳ್‌ ಮಾಡುತ್ತಿರುವ ಆರೋಪಗಳನ್ನು ಸಚಿವ ಕೆ.ಎಸ್‌.ಈಶ್ವರಪ್ಪ ಅನುಮೋದಿಸಿದ್ದಾರೆ. ಯಡಿಯೂರಪ್ಪ ವರ್ಸಸ್‌ ಈಶ್ವರಪ್ಪ, ಯತ್ನಾಳ್‌ ವರ್ಸಸ್‌ ವಿಜಯೇಂದ್ರ, ಸುಧಾಕರ್‌ ವರ್ಸಸ್‌ ರೇಣುಕಾಚಾರ್ಯ, ಸಚಿವರು ವರ್ಸಸ್‌ ಶಾಸಕರು, ಆಪರೇಷನ್‌ ಆದವ್ರು ವರ್ಸಸ್‌ ಮೂಲದವರು, ಅತೃಪ್ತರು ವರ್ಸಸ್‌ ಸಂತೃಪ್ತರು ಹೀಗೆ ಬಿಜೆಪಿ ವರ್ಸಸ್‌ ಬಿಜೆಪಿ ಕಿತ್ತಾಟದಲ್ಲಿ ರಾಜ್ಯಬಡವಾಗುತ್ತಿದೆ. ಹೀಗಾಗಿ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಒತ್ತಾಯಿಸಿದ್ದಾರೆ.