Asianet Suvarna News Asianet Suvarna News

ಕಾಂಗ್ರೆಸ್‌ ಲೀಡರ್‌ಲೆಸ್‌ ಪಾರ್ಟಿ, ಸಿದ್ದು ಡರ್ಟಿ ಪಾಲಿಟಿಕ್ಸ್‌: ಅರುಣ ಸಿಂಗ್‌

ಅದು ಕಾಂಗ್ರೆಸ್‌ನ ಛೋಡೋ-ಔರ್‌ ತೋಡೋ ಯಾತ್ರೆ, ಸಿಎಂಗೆ ಅವಮಾನವಾಗಿದ್ದು ರಾಜ್ಯದ ಜನತೆಗೆ ಆದಂತೆ: ಅರುಣ ಸಿಂಗ್‌ ಆರೋಪ

Congress Leaderless Party Says Arun Singh grg
Author
First Published Sep 30, 2022, 8:32 PM IST

ಬೀದರ್‌(ಸೆ.30):  ಪಕ್ಷದ ನಾಯಕ ಎಂದು ಕರೆಸಿಕೊಳ್ಳುವ ರಾಹುಲ್‌ ಗಾಂಧಿ ಅವರನ್ನೇ ಜನರು ತಿರಸ್ಕರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಲೀಡರ್‌ಲೆಸ್‌ ಪಕ್ಷವಾಗಿ ಉಳಿದಿದ್ದು, ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಡರ್ಟಿ ಪಾಲಿಟಿಕ್ಸ್‌ ಮಾಡ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣಸಿಂಗ್‌ ಆರೋಪಿಸಿದರು. ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷ ಆರಂಭಿಸಿರುವ ಭಾರತ ಜೋಡೋ ಯಾತ್ರೆ ಅಲ್ಲ ಇದೊಂದು ಕಾಂಗ್ರೆಸ್‌ ಛೋಡೋ ಔರ್‌ ತೋಡೋ ಯಾತ್ರೆಯಾಗಿದೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಮೆಚ್ಚಿ ಅನೇಕ ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ಡಬಲ್‌ ಎಂಜಿನ ಸರ್ಕಾರದ ಸಾಧನೆಗಳನ್ನು ಜನರು ಮೆಚ್ಚಿದ್ದಾರೆ ಎಂದರು.

ಸಿದ್ದರಾಮಯ್ಯ ಇತಿಹಾಸ ಎಲ್ಲರಿಗೂ ಗೊತ್ತು:

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅರುಣ ಸಿಂಗ್‌ ಅವರು ಎಸ್‌ಡಿಪಿಐ, ಪಿಎಫ್‌ಐ ನಿಷೇಧಿಸಲಾಗಿದೆ ಇದೇ ರೀತಿ ಆರ್‌ಎಸ್‌ಎಸ್‌ ಸಂಘಟನೆಯನ್ನು ನಿಷೇಧಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ ಎಂದಿದ್ದಕ್ಕೆ, ಜನರಿಗೆ ಸಿದ್ದರಾಮಯ್ಯ ಇತಿಹಾಸದ ಬಗ್ಗೆ ಗೊತ್ತಿದೆ. ಸಿದ್ದರಾಮಯ್ಯ ಅವಧಿಯಲ್ಲಿ 23 ಹಿಂದು ಕಾರ್ಯಕರ್ತರ ಹತ್ಯೆಯಾಗಿತ್ತು, ಗೋಹತ್ಯೆ ನಿಷೇಧ ಕುರಿತು, ದನದ ಮಾಂಸ ತಿನ್ನುವ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದರು ಎಂಬುವದು ಜನರಿಗೆ ಗೊತ್ತಿದೆ, ಸಿದ್ದರಾಮಯ್ಯಗೆ ಭಾರತ ಹಾಗೂ ರಾಜ್ಯದ ಸಂಸ್ಕೃತಿ ಬಗ್ಗೆ ಮಾಹಿತಿ ಇಲ್ಲ. ಇವರು ಎಲ್ಲಕ್ಕೂ ಮೇಲಾಗಿ ಇವರಲ್ಲಿ ರಾಜಕೀಯ ತುಷ್ಟೀಕರಣ ಕಾಣಿಸುತ್ತಿದೆ ಎಂದರು.

ಕೇಂದ್ರ ಸರ್ಕಾರದ ಕ್ರಮ ಖಂಡಿಸುವವರು ದೇಶದ್ರೋಹಿಗಳು: ಕೇಂದ್ರ ಸಚಿವ ಖೂಬಾ

ಸಿಎಂ ಅವಮಾನ ರಾಜ್ಯದ ಜನತೆಯ ಅವಮಾನ :

ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ನ ಪೊಸ್ಟರ್‌ ಕುರಿತು ಮಾತನಾಡಿ, ಇದು ಕೆವಲ ಮುಖ್ಯಮಂತ್ರಿಗಳ ಅವಮಾನ ಅಲ್ಲ ಇದು ಇಡೀ ರಾಜ್ಯದ ಜನತೆಯ ಅವಮಾನ ಮಾಡಿದಂತೆ. ಒಬ್ಬ ಕಾಮನ್‌ಮೆನ್‌ ಸಿಎಂ ಬಗ್ಗೆ ಅವಮಾನ ಮಾಡುತ್ತಿರುವುದಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಕಾಮನ್‌ ಜನರೇ ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ ಎಂದು ಅರುಣಸಿಂಗ ಭವಿಷ್ಯ ನುಡಿದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಶಾಸಕರಾದ ರಾಜಕುಮಾರ ಪಾಟೀಲ್‌ ತೇಲ್ಕೂರ್‌, ಬಸವಕಲ್ಯಾಣ ಶಾಸಕ ಶರಣು ಸಲಗರ, ಮಾಲಿಕಯ್ಯ ಗುತ್ತೇದಾರ, ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್‌, ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್‌, ವಿಭಾಗೀಯ ಪ್ರಮುಖರಾದ ಈಶ್ವರಸಿಂಗ್‌ ಠಾಕೂರ, ಸಂಘಟನಾ ಪ್ರಮುಖ ಅರುಣಕುಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಪಾಟೀಲ್‌ ಗಾದಗಿ, ನಗರ ಅಧ್ಯಕ್ಷ ಶಶಿಧರ ಹೋಸಳ್ಳಿ ಸೇರಿದಂತೆ ಇನ್ನಿತರ ಪ್ರಮುಖರು ಇದ್ದರು.
 

Follow Us:
Download App:
  • android
  • ios