ಬೆಂಗಳೂರು (ಅ.08):  ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರು ತಾವು ಬಿಜೆಪಿಗೆ ಹೋಗುವುದಿಲ್ಲ ಎಂಬುದಾಗಿ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರೂ ತೆರೆಮರೆಯಲ್ಲಿ ಬಿಜೆಪಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.

ಕುಲಕರ್ಣಿ ಅವರನ್ನು ಬಿಜೆಪಿಗೆ ಕರೆತರುವುದರಿಂದ ಧಾರವಾಡ ಜಿಲ್ಲೆಯ ಸ್ಥಳೀಯ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಆ ಮುಖಂಡರನ್ನು ಮನವೊಲಿಸುವ ಪ್ರಕ್ರಿಯೆ ಆರಂಭವಾಗಿದೆ. ಇದರ ಹೊಣೆಯನ್ನು ಸ್ಥಳೀಯ ಸಂಸದರೂ ಆಗಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಮತ್ತು ರಾಜ್ಯದ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಹಾಗೆ ನೋಡಿದರೆ ಪ್ರಹ್ಲಾದ್‌ ಜೋಶಿ ಮತ್ತು ಶೆಟ್ಟರ್‌ಗೆ ವಿನಯ್‌ ಕುಲಕರ್ಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪೂರ್ಣ ಸಹಮತ ಇಲ್ಲದಿದ್ದರೂ ಪಕ್ಷದ ರಾಷ್ಟ್ರೀಯ ನಾಯಕರ ಸಲಹೆ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರನ್ನು ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸೇರಲು ವಿನಯ್ ಕುಲಕರ್ಣಿ ಸರ್ಕಸ್; ಸಿಪಿ ಯೋಗೇಶ್ವರ್ ಸಾಥ್

ಈ ಹಿಂದಿನ ಲೋಕ​ಸಭೆ ಚುನಾ​ವ​ಣೆ​ಯಲ್ಲಿ ಜೋಶಿ ಎದುರು ಕುಲ​ಕರ್ಣಿ ಸೋತಿದ್ದು ಇಲ್ಲಿ ಗಮ​ನಾ​ರ್ಹ.

ವಿನಯ ಕುಲ​ಕರ್ಣಿ ಅವರು ಮಂಗ​ಳ​ವಾ​ರ​ವಷ್ಟೇ ‘ನಾನು ಬಿಜೆಪಿ ಸೇರಲ್ಲ. ದಿಲ್ಲಿಗೆ ಹೋಗಿ ಯಾರನ್ನೂ ಭೇಟಿ​ಯಾಗಿ ಲಾಬಿ ನಡೆ​ಸಿಲ. ರಾಜ​ಸ್ಥಾ​ನಕ್ಕೆ ಕುದುರೆ ವ್ಯಾಪಾ​ರಕ್ಕೆ ಬಂದಿ​ದ್ದೇ​ನೆ’ ಎಂದಿ​ದ್ದ​ರು.

ಬಿಜೆಪಿ ಮುಖ​ಂಡ ಯೋಗೇ​ಶ​ಗೌಡ ಗೌಡರ ಕೊಲೆ ಪ್ರಕ​ರ​ಣ​ದಲ್ಲಿ ಸಿಬಿಐ ತನಿಖೆ ತೂಗು​ಕತ್ತಿ ಕುಲ​ಕರ್ಣಿ ಮೇಲೆ ತೂಗು​ತ್ತಿದ್ದು, ಈ ಹಂತ​ದಲ್ಲೇ ಅವರು ಬಿಜೆಪಿ ಸೇರುವ ಯತ್ನ ನಡೆ​ದಿದೆ ಎಂಬ ಗುಲ್ಲು ಹರ​ಡಿ​ದ್ದು ಧಾರ​ವಾಡ ಜಿಲ್ಲೆ​ಯಲ್ಲಿ ಸಂಚ​ಲನ ಮೂಡಿ​ಸಿ​ತ್ತು.