ರೆಸಾರ್ಟ್‌ನತ್ತ ಮುಖ ಮಾಡಿದ ಸಿದ್ದರಾಮಯ್ಯ: ಸಂಚಲನ ಮೂಡಿಸಿದ ಟಗರು ನಡೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೆಸಾರ್ಟ್‌ನತ್ತ ಮುಖ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿದೆ.
ಮೈಸೂರು, (ಫೆ.26): ಕಳೆದ ಎರಡು ದಿನಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕರುಗಳ ನಡುವೆ ಪ್ರತಿಷ್ಠೆಯ ಗುದ್ದಾಟ ಶುರುವಾಗಿದೆ.
ಹೌದು...ಅದರಲ್ಲೂ ಮೈಸೂರು ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತೆಗೆದುಕೊಂಡ ತೀರ್ಮಾನದಿಂದ ಸಿದ್ದರಾಮಯ್ಯ ಅವರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸ್ವಲ್ಪ ದಿನ ವಿಶ್ರಾಂತಿ ಪಡೆಯುವ ಸಲುವಾಗಿ ರೆಸಾರ್ಟ್ಗೆ ತೆರಳಿದ್ದಾರೆ.
ತೀವ್ರ ಪ್ರತಿಷ್ಠೆಗೆ ಕಾರಣವಾಗಿದ್ದ ಮೈಸೂರು ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಂಬಂಧ ನಿಮಿಷಕ್ಕೊಂದು ಬೆಳವಣೆಗೆಗಳು ನಡೆದಿದ್ದವು. ಕೊನೆ ಕ್ಷಣದವರೆಗೂ ತೀವ್ರ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಒಂದು ನಿಲುವಿಗೆ ಬಂದು, ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಯ್ತು.
ಟಗರು ಕೋಟೆಯಲ್ಲಿ ಪೊಗರು ತೋರಿಸಿದ ಕುಮಾರಸ್ವಾಮಿ
ಆದರೆ ಸಿದ್ದರಾಮಯ್ಯ.. ದೇವೇಗೌಡರ ಜಾತ್ಯಾತೀತತೆ ಬಯಲು ಮಾಡಬೇಕೆಂದು ಹಠಕ್ಕೆ ಬಿದ್ದಿದ್ದರು. ಅದಕ್ಕಾಗಿ ಸಭಾಪತಿ ಹಾಗೂ ಉಪಸಭಾಪತಿ ಚುನಾವಣೆ ವೇಳೆ ಅಭ್ಯರ್ಥಿ ಹಾಕಲೇಬೇಕೆಂದು ಹಠ ಬಿದ್ದಿದ್ದರು. ಈ ವಿಚಾರದಲ್ಲಿ ತಮಗೆ ಹಿನ್ನಡೆಯಾಗಿರೋದಕ್ಕೆ ಸಿದ್ದರಾಮಯ್ಯ ಸಾಕಷ್ಟು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೊಗರು ತೋರಿಸಿದ ಎಚ್‌ಡಿಕೆ
ಜೆಡಿಎಸ್ ಒಂದು ರಾಜಕೀಯ ಪಕ್ಷ ಅಲ್ಲ ಎಂದಿರುವ ಸಿದ್ದರಾಮಯ್ಯನವರಿಗೆ ಪಾಠ ಕಲಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅದರಂಯತೆ ಮೇಯರ್ ಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕುಮಾರಸ್ವಾಮಿ, ಹೇಳಿದಂತೆ ಸಿದ್ದುಗೆ ಗುದ್ದು ಕೊಟ್ಟರು. ಇದೀಗ ಇದು ರಾಜ್ಯ ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಯಾರನ್ನು ಕೇಳದೇ ಕುಮಾರಸ್ವಾಮಿ ಜೊತೆ ಒಪ್ಪಂದ ಮಾಡಿಕೊಂಡಿದ್ಯಾಕೆ? ನೀವೇ ನಿರ್ಧಾರ ತೆಗೆದುಕೊಳ್ಳುವುದಾದರೇ ನಾವೆಲ್ಲಾ ಏಕೆ ಎಂದು ಸಿದ್ದರಾಮಯ್ಯ ಟೀಮ್‌ನ ನಾಯಕರು ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ರಾಜಕೀಯ ಬೆಳವಣಿಗೆಯಿಂದ ಬೇಸರಗೊಂಡಿರುವ ಸಿದ್ದರಾಮಯ್ಯ ವಿಶ್ರಾಂತಿ ಪಡೆಯಲು ಬೆಂಗಳೂರಿನ ಹೊರವಲಯದ ರೆಸಾರ್ಟ್ಗೆ ತೆರಳಿದ್ದಾರೆ. ಇನ್ನು ರೆಸಾರ್ಟ್ಗೆ ಸಿದ್ದರಾಮಯ್ಯ ಯಾರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗದೇ ತಾವು ಒಬ್ಬರೇ ತೆರಳಿರುವುದು ಕುತೂಹಲ ಮೂಡಿಸಿದೆ.