ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವೆ: ಸಿದ್ದರಾಮಯ್ಯ ಪುನರುಚ್ಚಾರ
ನಾನು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ. ಒಂದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಈ ವಿಷಯದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ ಎಂದು ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಬಾಗಲಕೋಟೆ (ಜ.19): ನಾನು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ. ಒಂದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಈ ವಿಷಯದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ ಎಂದು ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬಾದಾಮಿಯಲ್ಲಿ ಸ್ಪರ್ಧೆ ಮಾಡಿದಾಗ ಕೇವಲ ಎರಡು ದಿನ ಮಾತ್ರ ಬಂದಿದ್ದೆ. ದೂರದಿಂದ ಬಂದಿದ್ದರೂ ಇಲ್ಲಿನ ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ವರುಣ, ಚಾಮುಂಡೇಶ್ವರಿ, ಬಾದಾಮಿ, ಕೋಲಾರ ಸೇರಿ ಎಲ್ಲಿ ನಿಂತರೂ ಜನ ಆಶೀರ್ವಾದ ಮಾಡಬೇಕು.
ಆಗ ಮಾತ್ರ ಗೆಲ್ಲಲು ಸಾಧ್ಯ ಎಂದ ಸಿದ್ದರಾಮಯ್ಯ, ಈ ಬಾರಿ ಕೋಲಾರದ ಜನ ಕರೆದಿದ್ದರಿಂದ ಅರ್ಜಿ ಸಲ್ಲಿಸಿದ್ದೇನೆ. ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಚಾಮುಂಡೇಶ್ವರಿಯಲ್ಲಿ 8 ಬಾರಿ ಗೆದ್ದವನು ನಾನು. ಹೇಗೆ ಅಲೆಮಾರಿ ಆಗುತ್ತೇನೆ ಎಂದು ವಿರೋಧಿಗಳನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರ ದೂರ ಆಗುತ್ತದೆ ಎನ್ನುವ ಕಾರಣಕ್ಕೆ ಬೆಂಗಳೂರು ಹತ್ತಿರದ ಕೋಲಾರ ಮತಕ್ಷೇತ್ರಕ್ಕೆ ಹೋಗಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದರು.
ಬಿಪಿಎಲ್‌ಗೆ 10 ಕೇಜಿ ಉಚಿತ ಅಕ್ಕಿ: ಕಾಂಗ್ರೆಸ್ ಪಕ್ಷದ 3ನೇ ಭರವಸೆ
ಒಂದು ಕ್ಷೇತ್ರದಲ್ಲಿ ನಿಂತರೆ ಮಾತ್ರ ನಾಯಕ. ಬೇರೆ ಕ್ಷೇತ್ರದಲ್ಲಿ ನಿಂತರೆ ನಾಯಕರಾಗಲು ಸಾಧ್ಯವಿಲ್ಲವಾ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ದೊಡ್ಡ ನಾಯಕರು. ನಾನು ಎರಡು ಕ್ಷೇತ್ರಗಳಲ್ಲಿ ನಿಲ್ಲಬಾರದೇ? ಜನ ಮತ ಹಾಕಿದಾಗ ಮಾತ್ರ ನಾವು ಚುನಾಯಿತರಾಗಲು ಸಾಧ್ಯ ಎಂದು ತಿಳಿಸಿದರು. ನಾನು ಈ ಹಿಂದೆ ಕೊಪ್ಪಳದಲ್ಲಿ ಸ್ಪರ್ಧಿಸಿದ್ದಾಗ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದೆ. ಆಗ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಚುನಾವಣೆ ನಡೆದಿದ್ದರಿಂದ ನನಗೆ ಸೋಲಾಯಿತು.
ಹೆಗಡೆ ಅಂಥವರೇ ಆಗ ಸೋತಿದ್ದರು ಎಂದು ನೆನಪಿಸಿಕೊಂಡ ಅವರು, ಬಾದಾಮಿಯಲ್ಲಿ ನಾನು ಬಂದಿದ್ದರಿಂದಲೇ ಬಿಜೆಪಿಯವರು ರಾಮುಲು ಅವರಿಗೆ ಟಿಕೆಟ್ ನೀಡಿದರು ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಗಳ ಆಯ್ಕೆ ವಿಚಾರದಲ್ಲಿ ಒಂದು ಪದ್ಧತಿ ಇದೆ. ಆಯ್ಕೆಯಾದ ಶಾಸಕರು ಮೆಜಾರಿಟಿ ನೀಡಬೇಕು. ನಂತರ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ.
ಸಚಿವ ಆನಂದ ಸಿಂಗ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಸಿದ್ದರಾಮಯ್ಯ
ಚಾಮುಂಡೇಶ್ವರಿಯಲ್ಲಿ 8 ಬಾರಿ ಗೆದ್ದವನು ನಾನು. ಹೇಗೆ ಅಲೆಮಾರಿ ಆಗುತ್ತೇನೆ? ಪ್ರಧಾನಿ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ದೊಡ್ಡ ನಾಯಕರು. ನಾನು ಎರಡು ಕ್ಷೇತ್ರಗಳಲ್ಲಿ ನಿಲ್ಲಬಾರದೇ?
- ಸಿದ್ದರಾಮಯ್ಯ, ವಿಪಕ್ಷ ನಾಯಕ