ಬಿಪಿಎಲ್‌ಗೆ 10 ಕೇಜಿ ಉಚಿತ ಅಕ್ಕಿ: ಕಾಂಗ್ರೆಸ್ ಪಕ್ಷದ 3ನೇ ಭರವಸೆ
ಕಾಂಗ್ರೆಸ್ ಪಕ್ಷ, ಇದೀಗ ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ತನ್ನ ಮೂರನೇ ಭರವಸೆಯನ್ನು ಘೋಷಿಸಿದೆ. ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಉಚಿತ ಅಕ್ಕಿ ನೀಡುವುದಾಗಿ ಪಕ್ಷ ಭರವಸೆ ನೀಡಿದೆ.
ಬಾಗಲಕೋಟೆ (ಜ.19): ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಪ್ರತಿ ಮನೆ ಯಜಮಾನಿಗೆ ಮಾಸಿಕ 2 ಸಾವಿರ ಆರ್ಥಿಕ ನೆರವು ನೀಡುವುದಾಗಿ ಈಗಾಗಲೇ ಭರವಸೆ ನೀಡಿರುವ ಕಾಂಗ್ರೆಸ್ ಪಕ್ಷ, ಇದೀಗ ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ತನ್ನ ಮೂರನೇ ಭರವಸೆಯನ್ನು ಘೋಷಿಸಿದೆ. ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಉಚಿತ ಅಕ್ಕಿ ನೀಡುವುದಾಗಿ ಪಕ್ಷ ಭರವಸೆ ನೀಡಿದೆ. ಬಾಗಲಕೋಟೆಯ ಕಾಳಿದಾಸ ಮೈದಾನದಲ್ಲಿ ಬುಧವಾರ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ. ಇದರ ಜತೆಗೆ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವುದಾಗಿಯೂ ಭರವಸೆ ನೀಡಿದ್ದಾರೆ.
ಬಿಪಿಎಲ್ ಕುಟುಂಬಗಳಿಗೆ ಈವರೆಗೆ ನೀಡುತ್ತಿದ್ದ ಅಕ್ಕಿಯನ್ನು ಬೊಮ್ಮಾಯಿ ಸರ್ಕಾರ ಕಡಿಮೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಅಕ್ಕಿಯನ್ನು ಅವರಪ್ಪನ ಮನೆಯಿಂದ ನೀಡುತ್ತಿದ್ದಾರಾ ಎಂದು ಬೊಮ್ಮಾಯಿ ಅವರನ್ನು ಪ್ರಶ್ನಿಸಿದರು. ಜತೆಗೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದನಂತರ ರಾಜ್ಯದಲ್ಲಿ ಸಚಿವರಾದಿಯಾಗಿ ನಡೆದಿರುವ ಹಗರಣಗಳು ಹಾಗೂ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆಗಾಗಿ ಕಮಿಷನ್ ರಚನೆ ಮಾಡುವುದಾಗಿ ತಿಳಿಸಿದ ಸಿದ್ದರಾಮಯ್ಯ, ಸಚಿವ ನಿರಾಣಿ ಸೇರಿ ಯಾರೇ ತಪ್ಪು ಮಾಡಿದ್ದರೂ ಬಿಡಲ್ಲ ಎಂದು ಹೇಳಿದರು.
ಸಚಿವ ಆನಂದ ಸಿಂಗ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಸಿದ್ದರಾಮಯ್ಯ
ಬಿಜೆಪಿ ಕಿತ್ತೆಸೆಯಬೇಕು: ಭಾಷಣದುದ್ದಕ್ಕೂ ಪಕ್ಷದ ಪ್ರಣಾಳಿಕೆಯಲ್ಲಿನ ಘೋಷಿತ ಎರಡು ಕಾರ್ಯಕ್ರಮಗಳಾದ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಮಹಿಳೆಯರಿಗೆ .2 ಸಾವಿರ ಹಣ ನೀಡುವ ಪ್ರಸ್ತಾಪವನ್ನು ಪದೇ ಪದೆ ಉಲ್ಲೇಖಿಸಿದ ಅವರು, ಎಷ್ಟೇ ಕಷ್ಟವಾದರೂ ಈ ಎರಡು ಯೋಜನೆಗಳನ್ನು ಜಾರಿಗೆ ತರುವ ಸಂಕಲ್ಪ ಮಾಡಿದ್ದೇವೆ. ಎರಡೂ ಯೋಜನೆಯಿಂದ ಒಂದು ಕುಟುಂಬಕ್ಕೆ ವಾರ್ಷಿಕ .36 ಸಾವಿರಕ್ಕೂ ಹೆಚ್ಚು ಆರ್ಥಿಕ ನೆರವು ದೊರೆಯಲಿದೆ. ಇದನ್ನು ಮಹಿಳೆಯರು ಅರ್ಥ ಮಾಡಿಕೊಂಡು ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಮನವಿ ಮಾಡಿದರು.
ದಮ್ ಇದ್ದರೆ ಚರ್ಚೆಗೆ ಬರಲಿ: ಮಾತೆತ್ತಿದರೆ ದಮ್ ಇದ್ದರೆ, ತಾಕತ್ ಬಗ್ಗೆ ಹೇಳಿಕೆ ನೀಡುವ ಬೊಮ್ಮಾಯಿ ಅವರೇ, ನಿಮಗೆ ದಮ್ ಹಾಗೂ ತಾಕತ್ತು ಇದ್ದರೆ ನಿಮ್ಮ ಪಕ್ಷ ಕೊಟ್ಟಪ್ರಣಾಳಿಕೆಗಳಲ್ಲಿ ಎಷ್ಟುಈಡೇರಿಸಿದ್ದೀರಿ ಎಂಬ ಕುರಿತು ಚರ್ಚೆಗೆ ಬನ್ನಿ. ನಾವಂತು ಚರ್ಚೆಗೆ ಮುಕ್ತವಾಗಿದ್ದೇವೆ. ಒಂದೇ ವೇದಿಕೆಯಲ್ಲಿ ಚರ್ಚೆಯಾಗಲಿ ಎಂದು ಸವಾಲು ಹಾಕಿದರು. ನೀರಾವರಿಗಾಗಿ .2 ಲಕ್ಷ ಕೋಟಿ: ಈ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಮಾತು ಕೊಟ್ಟಂತೆ ನೀರಾವರಿಗಾಗಿ .50 ಸಾವಿರ ಕೋಟಿ ಹಣ ವ್ಯಯ ಮಾಡಿದ್ದೇವೆ. ಪಕ್ಷ ಅಧಿಕಾರಕ್ಕೆ ಬಂದರೆ 5 ವರ್ಷದಲ್ಲಿ 2 ಲಕ್ಷ ಕೋಟಿಯನ್ನು ಖರ್ಚು ಮಾಡಲಿದ್ದೇವೆ. ಕೃಷ್ಣಾ ಮೇಲ್ದಂಡೆ ಸೇರಿ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಿದ್ದೇವೆ.
ಗೃಹ ಲಕ್ಷ್ಮೀ ಯೋಜನೆಗೆ ನಾನು, ಸಿದ್ದು ಗ್ಯಾರಂಟಿ: ಡಿ.ಕೆ.ಶಿವಕುಮಾರ್
ಇದು ನಮ್ಮ ವಚನ. ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಸಮ್ಮತ ಪರಿಹಾರ ಹಾಗೂ ಅಗತ್ಯ ಪುನರ್‌ವಸತಿ ಮತ್ತು ಪುನರ್ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಆದಾಯ ದುಪ್ಪಟ್ಟು ಮಾಡುವ ಮಾತುಗಳನ್ನಾಡಿ, ಕೇವಲ ಶೋಷಣೆ ಮಾಡಿವೆ ಎಂದು ಆರೋಪಿಸಿದ ಸಿದ್ದರಾಮಯ್ಯ, 2016ರ ರಿಂದ ಎಷ್ಟುರೈತರ ಆದಾಯ ದುಪ್ಪಟ್ಟು ಮಾಡಿದ್ದಾರೆ? ನೀಡಿದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಬರೇ ಮಾತಲ್ಲೇ 9 ವರ್ಷ ಆಡಳಿತ ನಡೆಸಿದ ಮೋದಿ ಅವರಿಗೆ ಯಾವ ನೈತಿಕತೆ ಇದೆ ಎಂದರು.
ಸಿದ್ದು ಪ್ರಚಾರ ವೈಖರಿ
- ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್: ಮೊದಲ ಭರವಸೆ
- ಪ್ರತಿ ಮನೆ ಯಜಮಾನಿಗೆ 2000 ರು. ನೆರವು: ಎರಡನೇ ಭರವಸೆ
- ಈ 2 ಯೋಜನೆಯಿಂದ ಪ್ರತಿ ಮನೆಗೆ ವರ್ಷಕ್ಕೆ 36000 ರು. ನೆರವು
- ಎಲ್ಲ ಬಿಪಿಎಲ್ ಕುಟುಂಬಕ್ಕೂ 10 ಕೇಜಿ ಅಕ್ಕಿ: ಮೂರನೇ ಭರವಸೆ
- ಹಗರಣಗಳು, ಭ್ರಷ್ಟಾಚಾರದ ಸಮಗ್ರ ತನಿಖೆಗೆ ಕಮಿಷನ್ ರಚನೆ
- ಗೆದ್ದರೆ 5 ವರ್ಷದಲ್ಲಿ ನೀರಾವರಿಗೆ 2 ಲಕ್ಷ ಕೋಟಿ ರು. ಅನುದಾನ
- ಭೂಮಿ ಕಳೆದುಕೊಂಡ ರೈತರಿಗೆ ಉತ್ತಮ ಪರಿಹಾರ, ಪುನರ್‌ವಸತಿ