ಪಾಪ, ಎಚ್‌ಡಿಕೆಗೆ ವಯಸ್ಸಾಗಿದೆ ನಿವೃತ್ತಿ ಆದರೆ ಆಗಲಿ ಬಿಡಿ: ಸಿದ್ದರಾಮಯ್ಯ
ಜೆಡಿಎಸ್‌ನವರು ಯಾವತ್ತಾದರೂ 123 ಸ್ಥಾನ ಗೆದ್ದಿದ್ದಾರಾ? ನಾನು ಅಧ್ಯಕ್ಷನಾಗಿದ್ದಾಗಲೇ 58 ಸ್ಥಾನ ಗೆದ್ದಿತ್ತು. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗದಿದ್ದರೆ ನಿವೃತ್ತಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿಜಯಪುರ (ಫೆ.12): ಈ ಬಾರಿ ನಾನು ಕೋಲಾರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದರು. ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದು ಸುರಕ್ಷಿತವಲ್ಲ ಎಂಬ ವರದಿ ಕುರಿತು ಪ್ರತಿಕ್ರಿಯಿಸಿ, ಕೋಲಾರ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಹೋರಾಟದ ಬಗ್ಗೆ ನಿಮಗೆ ಗೊತ್ತಿದೆಯಾ? ಗೊತ್ತಿದ್ದರೆ ಮಾತನಾಡಿ. ಇಲ್ಲದಿದ್ದರೆ ಮಾತನಾಡಬೇಡಿ.
ಯಾರು ಹೇಳಿದ್ರೂ ಕೇಳಬೇಡಿ. ನಾನು ಈಗಾಗಲೇ ಕೋಲಾರದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದರು. ಇದೇ ವೇಳೆ ಜೆಡಿಎಸ್ ವಿರುದ್ಧ ಹರಿಹಾಯ್ದ ಅವರು, ಜೆಡಿಎಸ್‌ನವರು ಯಾವತ್ತಾದರೂ 123 ಸ್ಥಾನ ಗೆದ್ದಿದ್ದಾರಾ? ನಾನು ಅಧ್ಯಕ್ಷನಾಗಿದ್ದಾಗಲೇ 58 ಸ್ಥಾನ ಗೆದ್ದಿತ್ತು. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗದಿದ್ದರೆ ನಿವೃತ್ತಿಯಾಗುತ್ತೇನೆ ಎಂದು ಹೇಳಿದ್ದಾರೆ. ಪಾಪ ಅವರಿಗೆ ವಯಸ್ಸಾಗಿದೆ. ನಿವೃತ್ತಿಯಾಗಲಿ ಬಿಡಿ ಎಂದು ವ್ಯಂಗ್ಯವಾಡಿದರು.
ಸಂಸದ ತೇಜಸ್ವಿ ಸೂರ್ಯ ಅಮವಾಸ್ಯೆ ಇದ್ದಂತೆ: ಸಿದ್ದರಾಮಯ್ಯ
ಬಿಜೆಪಿ ಒಂದು ಸುಳ್ಳಿನ ಫ್ಯಾಕ್ಟರಿ: ಪ್ರಜಾಧ್ವನಿ ಯಾತ್ರೆ 7 ಕೋಟಿ ಕನ್ನಡಿಗರ ಧ್ವನಿಯಾಗಿದೆ. 2014ರಲ್ಲಿ 165 ಭರವಸೆಯ ಪ್ರಣಾಳಿಕೆ ಕೊಟ್ಟಿದ್ದೆವು. ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಕೊಟ್ಟ ಮಾತಿನಂತೆ ನಡೆದಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ಪ್ರಜಾಧ್ವನಿ ಯಾತ್ರೆ ನಿಮಿತ್ತ ಹಮ್ಮಿಕೊಂಡ ಬೃಹತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 2018ರಲ್ಲಿ ಬಿಜೆಪಿ ಸರ್ಕಾರ 600 ಭರವಸೆಗಳನ್ನು ನೀಡಿತ್ತು.
ಆದರೆ, ಅದರಲ್ಲಿ ಕೇವಲ 50ನ್ನು ಮಾತ್ರ ಈಡೇರಿಸಿದ್ದು, ಇನ್ನೂ 550 ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. 5ವರ್ಷದ ಅವಧಿಯಲ್ಲಿ ನಮ್ಮದು ಒಂದು ಭ್ರಷ್ಟಾಚಾರದ ಆರೋಪವಿಲ್ಲದೆ ಸುಗಮವಾದ ಆಡಳಿತವನ್ನು ನೀಡಿದ್ದೇವೆ. ನನ್ನ ಗಮನಕ್ಕೆ ಬಂದ ಆರೋಪ ಸಿಬಿಐಗೆ ಒಪ್ಪಿಸಿದ್ದೇನೆ. ಇಂದಿನ ಡಬಲ್ ಎಂಜಿನ್ ಬಿಜೆಪಿ ಸರ್ಕಾರದ ಮೇಲೆ ನಿತ್ಯ ಅನೇಕ ಆರೋಪಗಳು ಕೇಳಿಬಂದರೂ ಒಂದು ತನಿಖೆ ನಡೆಸದೇ ಮುಚ್ಚಿಹಾಕುತ್ತಿದ್ದಾರೆ. ವಿಧಾನಸೌಧದ ಪ್ರತಿ ಗೋಡೆಗೆ ಕಿವಿಗೊಟ್ಟು ಕೇಳಿದರೆ ಬರೀ ಲಂಚ-ಲಂಚ ಎಂದು ಪಿಸುಗುಟ್ಟುತ್ತದೆ.
ರಾಜ್ಯಪಾಲರಿಂದ ಸುಳ್ಳು ಹೇಳಿಸಿದ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ ಆರೋಪ
ಈ ಸರ್ಕಾರ ಒಂದು ರೀತಿಯಲ್ಲಿ ಅಲಿಬಾಬಾ ಮತ್ತು 40 ಕಳ್ಳರ ಸರ್ಕಾರ ಎಂದರೆ ತಪ್ಪಾಗುವುದಿಲ್ಲ. ಬಿಜೆಪಿ ಒಂದು ಸುಳ್ಳಿನ ಫ್ಯಾಕ್ಟರಿ ಎಂದರು. ಸಂಸದ ತೇಜಸ್ವಿ ಸೂರ್ಯ ರೈತರಿಗೆ ಸಾಲ ಮನ್ನಾ ಮಾಡುವುದು ತಪ್ಪ ಅದು ಮಾಡಬಾರದು ಎಂದು ಹೇಳುತ್ತಿರುವುದು ನ್ಯಾಯವೇ. ನನ್ನ ಅಧಿಕಾರದ ಅವಧಿಯಲ್ಲಿ .8165 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಅದಾನಿ ಅಂಬಾನಿಯಂಥ ಅನೇಕ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದ್ದಾರೆ ನಾಚಿಕೆಯಾಗಬೇಕು ಎಂದರು.