ರಾಜ್ಯಪಾಲರಿಂದ ಸುಳ್ಳು ಹೇಳಿಸಿದ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ ಆರೋಪ

ಜಂಟಿ ಅಧಿವೇಶನ ಉದ್ದೇಶದ ಭಾಷಣದಲ್ಲಿ ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ, ಭಾಷಣ ಸುಳ್ಳಿನ ಕಂತೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. 

Former CM Siddaramaiah Slams On Governer Thawar Chand Gehlot gvd

ಶಹಾಪುರ (ಫೆ.11): ಜಂಟಿ ಅಧಿವೇಶನ ಉದ್ದೇಶದ ಭಾಷಣದಲ್ಲಿ ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ, ಭಾಷಣ ಸುಳ್ಳಿನ ಕಂತೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಪ್ರಜಾಧ್ವನಿ ಯಾತ್ರೆಯ ಅಂಗವಾಗಿ, ಶುಕ್ರವಾರ ಸಂಜೆ ಶಹಾಪುರದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಮಾಡುವ ಭಾಷಣ ಅವರೇ ತಯಾರಿಸಿರುವುದಿಲ್ಲ, ಅದನ್ನು ಸರ್ಕಾರ ರಚನೆ ಮಾಡಿರುತ್ತದೆ. 

ನಾನು ವಿರೋಧ ಪಕ್ಷದ ನಾಯಕನಾಗಿ ವಂದನಾ ನಿರ್ಣಯದ ಮೇಲೆ ಮಾತನಾಡಲಿದ್ದೇನೆ. ರಾಜ್ಯಪಾಲರ ಭಾಷಣ ಎಂದರೆ ಅಭಿವೃದ್ದಿಯ ವಿವರ ಇರಬೇಕು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ವಿವರ ಇರಬೇಕು ಆದರೆ ಅವರ ಭಾಷಣ ಸುಳ್ಳಿನ ಕಂತೆಯಾಗಿದ್ದು ನಾವು (ಕಾಂಗ್ರೆಸ್‌ ಸರ್ಕಾರ) ಮಾಡಿದ ಕಾರ್ಯಕ್ರಮಗಳನ್ನು ಅವರ (ಬಿಜೆಪಿ) ಕಾರ್ಯಕ್ರಮ ಎಂದು ಹೇಳಿದ್ದಾರೆ, ರಾಜ್ಯಪಾಲರ ಬಾಯಿಂದ ಸುಳ್ಳು ಹೇಳಿಸಿದ್ದಾರೆ ಎಂದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ನೀವು ಮೊದಲ ಹೆಜ್ಜೆ ಇಟ್ಟಿದ್ದರೆ, ಶೆಡ್ಯೂಲ್‌ 9ಕ್ಕೆ ಸೇರಿರುತ್ತಿತ್ತು: ಸಿದ್ದುಗೆ ಬೊಮ್ಮಾಯಿ ತಿರುಗೇಟು

ಬೆಲೆಯೇರಿಕೆ, ಸಾಮರಸ್ಯ ಬಗ್ಗೆ ಭಾಷಣದಲ್ಲಿ ಪ್ರಸ್ತಾಪವೇ ಇಲ್ಲ: ಬೆಲೆಯೇರಿಕೆ, ಸಾಮರಸ್ಯ ಹಾಳಾಗಿದೆ, ರೈತರ ಸಂಕಟ ಹೆಚ್ಚಾಗಿದೆ. ಆದರೆ, ಇದು ಯಾವೂ ಕೂಡ ರಾಜ್ಯಪಾಲರ ಭಾಷಣದಲ್ಲಿ ಇಲ್ಲ. ಬಿಜೆಪಿ ಸರ್ಕಾರ ಅಧಿ​ಕಾರಕ್ಕೆ ಬಂದರೆ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳ 1ಲಕ್ಷ ರು.ಗಳವರೆಗಿನ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು ಜೊತೆಗೆ ನೀರಾವರಿಗೆ 1.50 ಲಕ್ಷ ಕೋಟಿ ರು.ಗಳ ಖರ್ಚು ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು. ಅದರಲ್ಲಿ 50 ಸಾವಿರ ಕೋಟಿ ರು.ಗಳು ಕೂಡಾ ನೀರಾವರಿಗೆ ಖರ್ಚು ಮಾಡಿಲ್ಲ ಎಂದರು.

ನಾನು ಬಳ್ಳಾರಿ ಪಾದಯಾತ್ರೆಗೆ ಬಂದಿದ್ದಾಗ ಅ​ಧಿಕಾರಕ್ಕೆ ಬಂದರೆ ನೀರಾವರಿಗೆ 50 ಸಾವಿರ ಕೋಟಿ ರು.ಗಳ ನೀಡುವುದಾಗಿ ಹೇಳಿದ್ದೆ. ಆದರೆ 58 ಸಾವಿರ ಕೋಟಿ ರು.ಗಳ ನೀರಾವರಿಗೆ ನೀಡಿ ನುಡಿದಂತೆ ನಡೆದಿದ್ದೇವೆ. ಆದರೆ ಬಿಜೆಪಿಗರು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ನಾನು ಬೊಮ್ಮಾಯಿಗೆ ಹೇಳಿದ್ದೆ ನೀವು ಪ್ರಣಾಳಿಕೆ ಪ್ರಕಾರ ನೀಡಿದ ಭರವಸೆ ಏನು ನಮ್ಮ ಪ್ರಣಾಳಿಕೆ ಹಾಗೂ ಈಡೇರಿಸಿದ ಭರವಸೆ ಬಗ್ಗೆ ಚರ್ಚೆ ಮಾಡೋಣ ಎಂದೆ ಆದರೆ ಬೊಮ್ಮಾಯಿ ಬರಲಿಲ್ಲ ಎಂದರು.

ಸಾಲಮನ್ನಾ: ಬಿಜೆಪಿಗೆ 104 ಸ್ಥಾನ ಬಂದಿತ್ತು. ಆದರೆ, ಬಹುಮತ ಸಾಬೀತು ಮಾಡದೆ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದರು. ಆಗ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌ ಜೆಡಿಎಸ್‌ ಸರ್ಕಾರದಲ್ಲಿ ಒಟ್ಟು 22.27 ಲಕ್ಷ ರೈತರ (ಪ್ರತಿ ರೈತರ 50 ಸಾವಿರ) 8,165 ಕೋಟಿ ರೈತರ ಸಾಲಮನ್ನಾ ಮಾಡಿದ್ದಿವಿ. ಸಾಲಮನ್ನಾ ಕೇವಲ ಕುಮಾರಸ್ವಾಮಿ ಮಾಡಿದ್ದಲ್ಲ ಎಂದ ಅವರು, ಇದೇ ಯಡಿಯೂರಪ್ಪ ಸಾಲಮನ್ನಾ ಮಾಡುವ ವಿಚಾರಕ್ಕೆ ಮಾತನಾಡಿ ರೈತರ ಸಾಲ ಮನ್ನಾ ಮಾಡಲು ನೋಟು ಪ್ರಿಂಟ್‌ ಮಾಡುವ ಮಿಷನ್‌ ಇಲ್ಲ ಎಂದಿದ್ದರು. ಈಗ ಅದೇ ಪಕ್ಷದ ಸಂಸದ ತೇಜಸ್ವಿ ಸೂರ್ಯ, ರೈತರ ಸಾಲ ಮನ್ನಾ ಮಾಡಿದರೆ ಏನು ಲಾಭವಿಲ್ಲ ಅಂದಿದ್ದಾರೆ. ಮೋದಿ ಸರ್ಕಾರ ಬಂಡವಾಳ ಶಾಹಿಗಳ 14 ಲಕ್ಷ ಕೋಟಿ ರು.ಗಳ ಸಾಲಮನ್ನಾ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಿದರೆ ಲಾಭವಿಲ್ಲ ಅಂದವರು ಬಂಡವಾಳಶಾಹಿಗಳ ಸಾಲ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದರು.

ಶರಣಬಸಪ್ಪಗೌಡ ದರ್ಶನಾಪುರ ಸಜ್ಜನ ರಾಜಕಾರಣಿ ಎಂದ ಸಿದ್ದರಾಮಯ್ಯ, ಈ ಸಲ ಅವರನ್ನು ಭಾರಿ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು. ಮಾಜಿ ಸಚಿವರಾದ ಎಂ.ಬಿ. ಪಾಟೀಲ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಸಾಧನೆಗಳು ಹಾಗೂ ಬಿಜೆಪಿ ಸರ್ಕಾರದ ವೈಫಲ್ಯ, ದುರಾಡಳಿತ ಹಾಗೂ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸಲು ಪ್ರಜಾಧ್ವನಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಮಾತನಾಡಿ, ಪ್ರಜಾಧ್ವನಿ ಕಾರ್ಯಕ್ರಮ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ಎರಡನೆಯ ಹಂತದ ಪ್ರಜಾಧ್ವನಿ ತಂಡ ಸಿದ್ದರಾಮಯ್ಯ ನೇತೃತ್ವದಲ್ಲಿ ಬಸವಕಲ್ಯಾಣದಿಂದ ನಡೆಸಲಾಗುತ್ತಿದೆ ಎಂದರು.

ಮಾಜಿ ಸಚಿವ ಎಚ್‌. ಸಿ. ಮಹಾದೇವಪ್ಪ ಮಾತನಾಡಿ, ಬಿಜೆಪಿ ದೇಶದ ಸ್ವಾತಂತ್ರ್ಯದಲ್ಲಿ ಭಾಗವಹಿಸಿಲ್ಲ. ಜೊತೆಗೆ ಸಂವಿಧಾನದಲ್ಲಿ ಅದಕ್ಕೆ ನಂಬಿಕೆಯಿಲ್ಲ. ಯಾವ ಪಕ್ಷ ಅಥವಾ ನಾಯಕನಿಗೆ ಪ್ರಭುತ್ವದ ಅನುಭವವಿಲ್ಲವೋ ಅಂತವರು ಅ​ಧಿಕಾರದಲ್ಲಿ ಇದ್ದಾಗ ಜನರ ಪರವಾದ ಕೆಲಸ ನಡೆಯುವುದಿಲ್ಲ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಕಾಂಗ್ರೆಸ್‌ ಪಕ್ಷ ಈ ಸಲ 150 ಸೀಟು ಗೆದ್ದು ರಾಜ್ಯದಲ್ಲಿ ಅಧಿ​ಕಾರಕ್ಕೆ ಬರಲಿದೆ ಹಾಗೇ ಶಹಾಪುರದಲ್ಲಿ ಶರಣಬಸಪ್ಪ ದರ್ಶನಾಪುರ ಅವರು 50,000 ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.

ಶಾಸಕ ಪ್ರಿಯಾಂಕ್‌ ಖರ್ಗೆ ಮಾತನಾಡಿ ಮೋದಿ, ಶಾ ಹಾಗೂ ನಡ್ಡಾ ರಾಜ್ಯಕ್ಕೆ 50 ಬಾರಿ ಬಂದರೂ ರಾಜ್ಯದಲ್ಲಿ ಹಾಗೂ ಶಹಾಪುರದಲ್ಲಿ ಕಾಂಗ್ರೆಸ್‌ ಪಕ್ಷವೇ ಗೆಲ್ಲಲಿದೆ ಎಂದರು. ರಾಜ್ಯ ನಾಯಕರಿಗೆ ಮತದಾರರ ಮುಂದೆ ಹೋಗಲು ಮುಖವಿಲ್ಲ ಹಾಗಾಗಿ ಕೇಂದ್ರದ ನಾಯಕರು ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ಕಾಂಗ್ರೆಸ್‌ ಅ​ಧಿಕಾರಕ್ಕೆ ಬಂದಾಗಲೆಲ್ಲ ಜನಪರ ಆಡಳಿತ ನಡೆಸಿ ಹೊಸ ಹೊಸ ಯೋಜನೆ ಜಾರಿಗೆ ತಂದಿದೆ. ಕೃಷಿ ಭಾಗ್ಯ, ಅನ್ನ ಭಾಗ್ಯ, ಶಾದಿ ಭಾಗ್ಯ, ವಿದ್ಯಾಸಿರಿಯಿಂದ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಅಂತಹ ಯಾವುದಾದರೊಂದು ಯೋಜನೆಯನ್ನು ಕೇಂದ್ರ ಅಥವಾ ರಾಜ್ಯದ ಸರ್ಕಾರ ಜಾರಿಗೆ ತಂದಿದ್ದರೆ ನನ್ನೊಂದಿಗೆ ಬಹಿರಂಗ ಚರ್ಚೆ ಗೆ ಬರಲಿ ಎಂದು ಸವಾಲು ಹಾಕಿದರು.

ಸಂಸದ ತೇಜಸ್ವಿ ಸೂರ್ಯ ಅಮವಾಸ್ಯೆ ಇದ್ದಂತೆ: ಸಿದ್ದರಾಮಯ್ಯ

ಮಾಜಿ ಸಚಿವ ರೇವು ನಾಯಕ ಬೆಳಮಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಇದೆ. ಲಂಬಾಣಿಗರಿಗೆ ಹಕ್ಕುಪತ್ರ ಕೊಡಲು ಮೋದಿ ಬಂದಿದ್ದರು. ಮೋದಿಗೆ ಬಸವರಾಜ ಬೊಮ್ಮಾಯಿ ತಪ್ಪು ಮಾಹಿತಿ ನೀಡಿದ್ದಾರೆ, ಬಂಜಾರಾ ಸಮುದಾಯದವರು ನಿಮಗೆ (ಬಿಜೆಪಿ) ಈ ಸಲ ಪಾಠ ಕಲಿಸಲಿದ್ದಾರೆ ಎಂದರು. ಎಂಎಲ್ಸಿ ಪ್ರಕಾಶ ರಾಠೋಡ ಮಾತನಾಡಿ, ಬಿಜೆಪಿ ಪಕ್ಷ ಲಂಬಾಣಿ ಜನಾಂಗದ ಮೇಲೆ ದೌರ್ಜನ್ಯ ಎಸಗುತ್ತಿದೆ ಹಾಗೂ ಸುಳ್ಳು ಕೇಸುಗಳನ್ನು ದಾಖಲಿಸಲಾಗುತ್ತಿದೆ. ಈ ದೌರ್ಜನ್ಯವನ್ನು ಎದುರಿಸುವ ಶಕ್ತಿ ಜನಾಂಗಕ್ಕೆ ಇದೆ ನಾಯಕರಾಗಿ ನಾನು, ರೇವು ನಾಯಕ ಸೇರಿದಂತೆ ಹಲವರಿದ್ದೇವೆ ಎಂದರು.

ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌, ತಿಪ್ಪಣ್ಣಪ್ಪ ಕಮಕನೂರು, ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಬಸವರಾಜ ಪಾಟೀಲ ಇಟಗಿ, ಬಸವರಾಜಪ್ಪಗೌಡ ದರ್ಶನಾಪುರ, ಶರಣಪ್ಪ ಮಟ್ಟೂರು, ಬಸರೆಡ್ಡಿ ಅನಪೂರ,ಶಿವಾನಂದ ಪಾಟೀಲ, ಶಂಕ್ರಣ್ಣ ವಣಿಕ್ಯಾಳ, ಚಂದ್ರಶೇಖರ ಆರಬೋಳ, ಡಾ ಶರಣಬಸವಪ್ಪ ಕಾಮರೆಡ್ಡಿ ಹಾಗೂ ಮತ್ತಿತರಿದ್ದರು.

Latest Videos
Follow Us:
Download App:
  • android
  • ios