Asianet Suvarna News Asianet Suvarna News

'ಸ್ವಾತಂತ್ರ್ಯ ಬಂದಾಗಿನಿಂದ ಆದಷ್ಟು ಸಾಲ ಮುಂದಿನ 5 ವರ್ಷದಲ್ಲಿ'

ರಾಜ್ಯವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಾಲದ ಶೂಲಕ್ಕೆ ತಳ್ಳುತ್ತಿದ್ದಾರೆ. ಈಗಾಗಲೇ ಕೊಟ್ಯಂತರ ರು. ಸಾಲ ಮಾಡಲು ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Congress Leader Siddaramaiah Slams Karnataka BJP Govt snr
Author
Bengaluru, First Published Sep 20, 2020, 11:41 AM IST

ಬೆಂಗಳೂರು (ಸೆ.20):  ಮುಂದಿನ ಒಂದೇ ವರ್ಷದಲ್ಲಿ ಬರೋಬ್ಬರಿ 1 ಲಕ್ಷ ಕೋಟಿ ಸಾಲ ಮಾಡಲು ಮುಂದಾಗುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳುತ್ತಿದ್ದಾರೆ. ಇವರದ್ದೇ ಅಧಿಕಾರ ಮುಂದುವರೆದರೆ ಸ್ವಾತಂತ್ರ್ಯ ಬಂದಾಗಿನಿಂದ ಆಗಿರುವಷ್ಟುಸಾಲವನ್ನು ಮುಂದಿನ ಐದು ವರ್ಷದಲ್ಲಿ ಮಾಡುತ್ತಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಒಂದು ವರ್ಷದ ಅವಧಿಯಲ್ಲಿ ದೊಡ್ಡ ಮೊತ್ತದ ಸಾಲದ ಹೊರೆಯನ್ನು ರಾಜ್ಯದ ಮೇಲೆ ಹೊರೆಸುತ್ತಿದೆ. ಬಜೆಟ್‌ನಲ್ಲಿ ಈ ವರ್ಷ 56 ಸಾವಿರ ಕೋಟಿ ರು. ಸಾಲ ಮಾಡುವುದಾಗಿ ಹೇಳಿತ್ತು. ಇದೀಗ ಹೆಚ್ಚುವರಿ 33 ಸಾವಿರ ಕೋಟಿ ರು. ಸಾಲಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿದ್ದಾರೆ. ಕೇಂದ್ರದಿಂದ ಜಿಎಸ್‌ಟಿ ಪರಿಹಾರ, ಅನುದಾನಗಳನ್ನು ತರದೇ ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

60 ನಾಯಕರು ಕಾಂಗ್ರೆಸ್ ಸೇರಲು ಅರ್ಜಿ: ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಬರೆದ ಜೆಡಿಎಸ್ ನಾಯಕ ...

ನನ್ನ ಐದು ವರ್ಷದ ಅವಧಿಯಲ್ಲಿ ಆರ್ಥಿಕ ಶಿಸ್ತು ಕಾಪಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಆರ್ಥಿಕ ಶಿಸ್ತನ್ನು ಈಗಾಗಲೇ ದಾಟಿದೆ. ಸಾಲ ತೆಗೆದುಕೊಂಡಷ್ಟೂಬಡ್ಡಿ ಜಾಸ್ತಿಯಾಗುತ್ತಾ ಹೋಗುತ್ತದೆ. ಈಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ದೆಹಲಿಯಿಂದ ಖಾಲಿ ಕೈಯಲ್ಲಿ ವಾಪಸಾಗಿದ್ದಾರೆ. ಇದರಿಂದ ಮತ್ತಷ್ಟುಆರ್ಥಿಕ ಹೊರೆ ಉಂಟಾಗಲಿದ್ದು ಇದನ್ನು ಮುಚ್ಚಿಡಲು ಸಚಿವ ಸಂಪುಟ ವಿಸ್ತರಣೆಯ ಸುದ್ದಿ ಹರಿಬಿಟ್ಟಿದ್ದಾರೆ. ವಾಸ್ತವವಾಗಿ ಸಚಿವ ಸಂಪುಟ ವಿಸ್ತರಣೆಗೂ ಹೈಕಮಾಂಡ್‌ ಒಪ್ಪಿಗೆ ನೀಡಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಯುವಕರೇ ಪ್ರಶ್ನಿಸಲಿದ್ದಾರೆ:

ಯುವಕರಿಗೆ ಹಿಂದುತ್ವ ಎಂಬ ಅಫೀಮು ನೀಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದೀಗ ಅದೇ ಯುವಕರು ನರೇಂದ್ರ ಮೋದಿ ಹುಟ್ಟಿದ ಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಆಚರಣೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ದೇಶದ ಆರ್ಥಿಕ ವ್ಯವಸ್ಥೆ ಹಾಳು ಮಾಡಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಕುಸಿಯಲು ನರೇಂದ್ರ ಮೋದಿ ನೇರ ಕಾರಣ. ಇದೀಗ ಯುವಕರೇ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ ಎಂದರು.

ಕೊರೋನಾ ಪ್ಯಾಕೇಜ್‌ ಅಂಕಿ ಅಂಶಕ್ಕೆ ಡಿಕೆ​ಶಿ ಪಟ್ಟು ...

ಕೊರೊನಾ ನಿಯಂತ್ರಣದಲ್ಲೂ ಸರ್ಕಾರ ವಿಫಲವಾಗಿದೆ. ಇವರಿಗೆ ನಾಚಿಕೆ ಮಾನ ಮರ್ಯಾದೆ ಎಂಬುದು ಇದ್ದಿದ್ದರೆ ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಬಿಡಬೇಕಿತ್ತು. ಅವರಿಗೆ ಮಾನ ಮಾರ್ಯಾದೆ ಇಲ್ಲ ಹೀಗಾಗಿ ಅಷ್ಟುಸುಲಭವಾಗಿ ಅವರು ಅಧಿಕಾರ ಬಿಡುವುದಿಲ್ಲ. ಜನರೇ ಅಧಿಕಾರದಿಂದ ಕಿತ್ತಾಕಲಿದ್ದಾರೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ಯಾವ ನಡೆದರೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್‌ ಪಕ್ಷದಲ್ಲಿ ಒಗ್ಗಟ್ಟಿದ್ದಾಗ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ. ಹೀಗಾಗಿ ಏನೇ ಅಸಮಾಧಾನ ಇದ್ದರೂ ಆಂತರಿಕವಾಗಿ ಚರ್ಚೆ ಮಾಡಬೇಕು. ಎರಡು ವರ್ಷದೊಳಗಾಗಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Follow Us:
Download App:
  • android
  • ios